Vastu Tips: ವಾಸ್ತು ಪ್ರಕಾರ ಮನೆಯ ಯಾವ ಕೋಣೆಗೆ ಯಾವ ಬಣ್ಣ ಸೂಕ್ತ? ಇಲ್ಲಿದೆ ಉತ್ತರ
ವಾಸ್ತು ಶಾಸ್ತ್ರದಲ್ಲಿ ಬಣ್ಣಗಳಿಗೆ ವಿಶೇಷ ಮಹತ್ವವಿದೆ. ಮನೆಗೆ ಸರಿಯಾದ ಬಣ್ಣಗಳನ್ನು ಆಯ್ಕೆ ಮಾಡಿದರೆ ಧನಾತ್ಮಕ ಶಕ್ತಿ ಹೆಚ್ಚಾಗಿ, ಜೀವನದಲ್ಲಿ ಶಾಂತಿ ಮತ್ತು ಸಂತೋಷ ಬರುತ್ತದೆ. ಮಲಗುವ ಕೋಣೆ, ಹಾಲ್, ಅಡುಗೆ ಮನೆ ಸೇರಿದಂತೆ ಪ್ರತಿಯೊಂದು ಕೋಣೆಗೆ ವಿಭಿನ್ನ ಬಣ್ಣಗಳನ್ನು ಬಳಸುವುದು ಉತ್ತಮ ಎಂದು ವಾಸ್ತು ಹೇಳುತ್ತದೆ.
ವಾಸ್ತು ಶಾಸ್ತ್ರ -
ಬೆಂಗಳೂರು: ಮಾನವನ ಜೀವನದಲ್ಲಿ ಬಣ್ಣಗಳು ಕೇವಲ ಅಲಂಕಾರಕ್ಕೆ ಮಾತ್ರ ಸೀಮಿತವಲ್ಲ; ಅವು ಮನಸ್ಸಿನ ಸ್ಥಿತಿ, ಭಾವನೆಗಳು ಮತ್ತು ಶಕ್ತಿಯ ಮೇಲೆ ದೊಡ್ಡ ಪ್ರಭಾವ ಬೀರುತ್ತವೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಇಷ್ಟದ ಬಣ್ಣವಿರುತ್ತದೆ. ಕೆಲವರಿಗೆ ಮೃದುವಾದ (ಲೈಟ್) ಬಣ್ಣಗಳು ಮನಸೆಳೆಯುತ್ತವೆ, ಇನ್ನು ಕೆಲವರು ಗಾಢ (ಡಾರ್ಕ್) ಬಣ್ಣಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ಬಣ್ಣಗಳಿಗೆ ನಮ್ಮ ಜೀವನದ ದಿಕ್ಕನೇ ಬದಲಾಯಿಸುವ ಶಕ್ತಿ ಇದ್ದು, ಮನೆಯ ಪ್ರತಿಯೊಂದು ಮೂಲೆಗೂ ಬಳಸುವ ಬಣ್ಣ ಪ್ರಮುಖ ಪಾತ್ರ ವಹಿಸುತ್ತದೆ.
ಅಲ್ಲದೆ ಬಣ್ಣಗಳು ಧನಾತ್ಮಕ ಹಾಗೂ ಋಣಾತ್ಮಕ ಶಕ್ತಿಗಳನ್ನು ಆಕರ್ಷಿಸುವ ಸಾಮರ್ಥ್ಯ ಹೊಂದಿವೆ. ಸರಿಯಾದ ಸ್ಥಳಕ್ಕೆ ಸರಿಯಾದ ಬಣ್ಣವನ್ನು ಆಯ್ಕೆ ಮಾಡಿದರೆ ಮನೆಗೆ ಶಾಂತಿ, ಸಂತೋಷ ಮತ್ತು ಸಮೃದ್ಧಿ ಬರುತ್ತದೆ.
ನಿಮಗೂ ಮನೆಯ ಬಣ್ಣದ ಆಯ್ಕೆ ಕುರಿತಾಗಿ ವಾಸ್ತು ಶಾಸ್ತ್ರ ನೀಡಿರುವ ಸಲಹೆಯನ್ನು(Vastu Tips) ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಈ ಸುದ್ದಿ ಓದಿ.
ಮಲಗುವ ಕೋಣೆಗೆ (ಬೆಡ್‌ರೂಮ್) ನೀಲಿ ಬಣ್ಣವನ್ನು ಬಳಸುವುದು ಉತ್ತಮ ಎಂದು ಹೇಳಲಾಗುತ್ತದೆ. ಇದು ಮನಸ್ಸಿಗೆ ಶಾಂತಿ ನೀಡುವುದರ ಜೊತೆಗೆ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.
Vastu Tips: ಮನೆಗೆ ಶುಭ ತರೋ ಲಿವಿಂಗ್ ರೂಮ್ ವಾಸ್ತು ಹೇಗಿರಬೇಕು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ
ಅತಿಥಿ ಕೋಣೆಯಲ್ಲಿ ಬಿಳಿ ಬಣ್ಣ ಬಳಸುವುದು ಅತ್ಯುತ್ತಮ. ಬಿಳಿ ಬಣ್ಣವು ಪರಿಶುದ್ಧತೆ, ಶಾಂತಿ ಮತ್ತು ಒಳ್ಳೆಯ ಚಿಂತನೆಗಳ ಸಂಕೇತವಾಗಿದ್ದು, ಮನಸ್ಸನ್ನು ಸ್ಥಿರಗೊಳಿಸಿ ಸೃಜನಾತ್ಮಕತೆ ಹೆಚ್ಚಿಸುತ್ತದೆ.
ಅಡುಗೆ ಮನೆಯು ಕೇವಲ ಊಟ ಮಾಡುವ ಸ್ಥಳವಲ್ಲ; ಅದು ಕುಟುಂಬದ ಸಂತೋಷದ ಮೂಲವಾಗಿದೆ. ಆದ್ದರಿಂದ ಕಿತ್ತಳೆ ಅಥವಾ ಕೆಂಪು ಬಣ್ಣವನ್ನು ಅಡುಗೆ ಮನೆಯಲ್ಲಿ ಬಳಸುವುದು ಒಳಿತು. ಈ ಬಣ್ಣಗಳು ಉತ್ಸಾಹ ಮತ್ತು ಸಂತೋಷವನ್ನು ಹೆಚ್ಚಿಸುತ್ತವೆ.
ಸ್ನಾನಗೃಹವನ್ನು ನಿರ್ಲಕ್ಷಿಸಬಾರದು. ಇದು ನಕಾರಾತ್ಮಕ ಶಕ್ತಿಗಳನ್ನು ಸೆಳೆಯುವ ಸಾಧ್ಯತೆ ಇರುವ ಸ್ಥಳವಾಗಿರುವುದರಿಂದ, ಇಲ್ಲಿ ಬಿಳಿ ಬಣ್ಣವನ್ನು ಬಳಸುವುದು ಉತ್ತಮ. ಇದು ಸ್ವಚ್ಛತೆ ಮತ್ತು ಶುದ್ಧತೆಯ ಭಾವನೆಯನ್ನು ಹೆಚ್ಚಿಸುತ್ತದೆ.
ಮನೆಯ ಹಾಲ್ ಕುಟುಂಬದ ಎಲ್ಲರೂ ಸೇರಿ ಸಮಯ ಕಳೆಯುವ ಮುಖ್ಯ ಸ್ಥಳ. ಆದ್ದರಿಂದ ಇಲ್ಲಿ ಹಳದಿ ಬಣ್ಣ ಬಳಸುವುದು ಶುಭಕರ. ಇದು ಸಂತೋಷ, ಉತ್ಸಾಹ ಮತ್ತು ಒಗ್ಗಟ್ಟನ್ನು ಹೆಚ್ಚಿಸುವ ಬಣ್ಣವಾಗಿದೆ.
ಸರಿಯಾದ ಬಣ್ಣಗಳ ಆಯ್ಕೆ ನಿಮ್ಮ ಮನೆಗೆ ಕೇವಲ ಸೌಂದರ್ಯವನ್ನೇ ಅಲ್ಲ, ಶಾಂತಿ ಮತ್ತು ಸಕಾರಾತ್ಮಕ ಶಕ್ತಿಯನ್ನೂ ತರಬಹುದು.