ಬೆಂಗಳೂರು: ವಾಸ್ತು ಶಾಸ್ತ್ರದಲ್ಲಿ(Vastu Shastra) ಮನೆಯ ಪ್ರತಿಯೊಂದು ಭಾಗಕ್ಕೂ ತನ್ನದೇ ಆದ ಮಹತ್ವವಿದ್ದರೂ, ಅಡುಗೆ ಮನೆಗೆ(Kitchen) ವಿಶೇಷ ಸ್ಥಾನವಿದೆ. ಶಾಸ್ತ್ರ ಹಾಗೂ ವಾಸ್ತು ನಿಯಮಗಳ(Vastu Tips) ಪ್ರಕಾರ ಅಡುಗೆ ಮನೆಯನ್ನು ಸರಿಯಾದ ಕ್ರಮದಲ್ಲಿ ಇಟ್ಟುಕೊಂಡರೆ ಮನೆಯಲ್ಲಿ ಶಾಂತಿ, ಸಮೃದ್ಧಿ ಹಾಗೂ ಆರೋಗ್ಯ ನೆಲೆಸುತ್ತದೆ ಎಂಬ ನಂಬಿಕೆಯಿದೆ. ಕೆಲವರ ಮನೆಗಳಲ್ಲಿ ಅಡುಗೆ ಮನೆ ತುಂಬಾ ಸ್ವಚ್ಛವಾಗಿ, ಎಲ್ಲಾ ಪಾತ್ರೆಗಳು ಸರಿಯಾದ ಜಾಗದಲ್ಲಿ ವ್ಯವಸ್ಥಿತವಾಗಿ ಇರುತ್ತವೆ. ಆದರೆ ಇನ್ನು ಕೆಲ ಮನೆಗಳಲ್ಲಿ ಅಡುಗೆ ಮನೆ ಅಸ್ತವ್ಯಸ್ತವಾಗಿದ್ದು, ಪಾತ್ರೆಗಳು ಎಲ್ಲೆಂದರಲ್ಲಿ ಹರಡಿಕೊಂಡಿರುತ್ತವೆ.
ವಿಶೇಷವಾಗಿ ಊಟ ಮಾಡಿದ ನಂತರ ಪಾತ್ರೆಗಳನ್ನು ತೊಳೆಯದೇ ಹಾಗೇ ಇಡುವುದು ಅಥವಾ ಕೆಲ ಪಾತ್ರೆಗಳನ್ನು ತಲೆಕೆಳಗಾಗಿ(ಉಲ್ಟಾ ಮಾಡಿ ಇಡುವುದು) ಇಡುವುದು ಸಾಮಾನ್ಯವಾಗಿದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಇದು ದಾರಿದ್ರ್ಯದ ಸಂಕೇತವಾಗಿದ್ದು, ಮನೆಯ ಮೇಲೆ ಅಡ್ಡ ಪರಿಣಾಮವನ್ನು ಬೀರುತ್ತದೆ ಎಂದು ಹೇಳಲಾಗುತ್ತದೆ.
ಹಾಗಾದರೆ ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆ ಮನೆಯ ಯಾವ ದಿಕ್ಕಿನಲ್ಲಿ ಇಡಬೇಕು.? ಯಾವ ಪಾತ್ರೆಗಳನ್ನು ತಲೆಕೆಳಗಾಗಿ ಇಡಬಾರದು? ಅದರಿಂದ ಯಾವ ರೀತಿಯ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನು ತಿಳಿದುಕೊಳ್ಳೋಣ.
ಯಾವ ದಿಕ್ಕಿನಲ್ಲಿ ಪಾತ್ರೆಗಳನ್ನು ಇಡಬೇಕು?
ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ಇಡುವುದಕ್ಕೂ ನಿಗದಿತ ದಿಕ್ಕುಗಳಿವೆ. ಸಾಮಾನ್ಯವಾಗಿ ಪಾತ್ರೆಗಳನ್ನು ಪಶ್ಚಿಮ ದಿಕ್ಕಿನಲ್ಲಿ ಇಡುವುದು ಉತ್ತಮ ಎಂದು ಶಾಸ್ತ್ರ ಹೇಳುತ್ತದೆ. ವಿಶೇಷವಾಗಿ ಹಿತ್ತಾಳೆ, ತಾಮ್ರ, ಉಕ್ಕು ಹಾಗೂ ಕಂಚಿನ ಪಾತ್ರೆಗಳನ್ನು ಪಶ್ಚಿಮ ದಿಕ್ಕಿನಲ್ಲಿ ಇಡಬೇಕು.
ಪಾತ್ರೆಗಳನ್ನು ತಲೆಕೆಳಗಾಗಿ ಇಡುವುದು ನಿಷಿದ್ಧ
ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ತಲೆಕೆಳಗಾಗಿ ಅಥವಾ ತಪ್ಪು ದಿಕ್ಕಿನಲ್ಲಿ ಇಟ್ಟರೆ ತಾಯಿ ಅನ್ನಪೂರ್ಣೇಶ್ವರಿ ದೇವಿಯ ಕೃಪೆ ಕಡಿಮೆಯಾಗಬಹುದು ಎನ್ನಲಾಗುತ್ತದೆ. ಆದ್ದರಿಂದ ಅಡುಗೆ ಮನೆಯಲ್ಲಿ ಪಾತ್ರೆಗಳಿಗೆ ಕುರಿತಾದ ಈ ಸಣ್ಣ ತಪ್ಪುಗಳನ್ನು ಮಾಡದಿರುವುದು ಒಳಿತು. ಒಂದು ವೇಳೆ ಮನೆಯಲ್ಲಿ ಪಾತ್ರೆಗಳನ್ನು ಉಲ್ಟಾ ಮಾಡಿ ಇಟ್ಟರೆ ನಕಾರಾತ್ಮಕತೆ ಹೆಚ್ಚಾಗಿ, ಹಣಕಾಸಿನ ತೊಂದರೆಗಳು ಎದುರಾಗುತ್ತದೆ.
ಈ ಪಾತ್ರೆಗಳನ್ನು ತಪ್ಪಿಯೂ ತಲೆಕೆಳಗಾಗಿ ಇಡಬೇಡಿ
ರಾತ್ರಿ ಊಟ ಮುಗಿದ ನಂತರ ಪಾತ್ರೆಗಳನ್ನು ತೊಳೆಯದೇ ಹಾಗೇ ಇಡುವುದು ಒಳ್ಳೆಯದಲ್ಲ. ಅದರಲ್ಲೂ ಕೆಲವು ಪಾತ್ರೆಗಳನ್ನು ತಪ್ಪಿಯೂ ತಲೆಕೆಳಗಾಗಿ ಇಡಬಾರದು. ಶಾಸ್ತ್ರದ ಪ್ರಕಾರ, ರೊಟ್ಟಿ ಅಥವಾ ಇತರ ಆಹಾರ ತಯಾರಿಸಿದ ಬಳಿಕ ಬಾಣಲೆಯನ್ನು ತಲೆಕೆಳಗಾಗಿ ಇಡುವುದು ಅಶುಭಕರ ಆಗಿದ್ದು ಇದರಿಂದ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಆರಂಭವಾಗಬಹುದು. ಆರ್ಥಿಕ ಒತ್ತಡ, ಸಾಲದ ಬಾಧೆ ಎದುರಾಗುವ ಸಾಧ್ಯತೆ ಹೆಚ್ಚಾಗುತ್ತದೆ.
ಕಡಾಯಿ:
ಬಾಣಲೆಯಂತೆಯೇ ಕಡಾಯಿಯನ್ನು ಕೂಡ ತಲೆಕೆಳಗಾಗಿ ಇಡಬಾರದು. ಅಡುಗೆ ಮಾಡಿದ ಬಳಿಕ ಕಡಾಯಿಯನ್ನು ತೊಳೆದು ಸ್ವಚ್ಛಗೊಳಿಸಿ ಸರಿಯಾದ ದಿಕ್ಕಿನಲ್ಲಿ ಇಡಬೇಕು. ತಲೆಕೆಳಗಾಗಿ ಇಡುವುದರಿಂದ ಮನೆಯೊಳಗೆ ನಕಾರಾತ್ಮಕ ಶಕ್ತಿ ಪ್ರವೇಶಿಸುತ್ತದೆ ಎಂಬ ನಂಬಿಕೆಯಿದೆ. ಜ್ಯೋತಿಷ್ಯದ ಪ್ರಕಾರ, ಬಾಣಲೆ ಮತ್ತು ಕಡಾಯಿಯನ್ನು ತಲೆಕೆಳಗಾಗಿ ಇಡುವುದರಿಂದ ರಾಹು ದೋಷ ಉಂಟಾಗುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಕುಟುಂಬದ ಪ್ರಗತಿಗೆ ಅಡ್ಡಿಯಾಗಬಹುದು, ಮನೆಯಲ್ಲಿ ಕಲಹ ಹಾಗೂ ಅಶಾಂತಿ ಉಂಟಾಗಬಹುದು.