ನಾವು ಒಳ್ಳೆ ಕೆಲಸ ಮಾಡಿದ್ದೀವಲ್ವಾ? ಜನ ಓಟ್ ಹಾಕ್ತಾರೆ ಅನ್ನೋ ನಂಬಿಕೆಯಿದೆ ಎಂದ ಸಿಎಂ
CM Siddaramaiah: ಬಿಜೆಪಿಯವರ ಅಪಪ್ರಚಾರದ ನಡುವೆಯೂ ಹಿಂದೆ ನಡೆದ 3 ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದೇವೆ. ಮಾಜಿ ಮುಖ್ಯಮಂತ್ರಿಗಳ ಪುತ್ರರು ನಿಂತಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಈಗ ನಡೆಯುತ್ತಿರುವ ಎರಡು ಕ್ಷೇತ್ರಗಳ ಉಪಚುನಾವಣೆಗೆ ಪ್ರಚಾರ ಕಾರ್ಯ ಉತ್ತಮವಾಗಿ ನಡೆಯುತ್ತಿದೆ. ನಾವು ಒಳ್ಳೆಯ ಕೆಲಸಗಳನ್ನು ಮಾಡಿದ್ದೇವೆ ಹೀಗಾಗಿ ಜನರು ಮತ ಹಾಕುತ್ತಾರೆ ಎಂಬ ನಂಬಿಕೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Siddalinga Swamy
Apr 1, 2026 8:19 PM
ದಾವಣಗೆರೆ: ಈಗ ನಡೆಯುತ್ತಿರುವ ಎರಡು ಕ್ಷೇತ್ರಗಳ ಉಪಚುನಾವಣೆಗೆ ಪ್ರಚಾರ ಕಾರ್ಯ ಉತ್ತಮವಾಗಿ ನಡೆಯುತ್ತಿದೆ. ನಾವು ಒಳ್ಳೆಯ ಕೆಲಸಗಳನ್ನು ಮಾಡಿದ್ದೇವೆ. ಹೀಗಾಗಿ ಜನರು ಮತ ಹಾಕುತ್ತಾರೆ ಎಂಬ ನಂಬಿಕೆಯಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದಾವಣಗೆರೆಯಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಅಧಿವೇಶನದಲ್ಲಿ ಬಜೆಟ್‌ನ ಬಗ್ಗೆ ವಿಸ್ತೃತ ಚರ್ಚೆಗಳಾಗಿದ್ದು, ಈಗಾಗಲೇ ಸುದೀರ್ಘ ಉತ್ತರವನ್ನೂ ನೀಡಲಾಗಿದೆ. ದೇಶದ ಜಿಡಿಪಿಯು 7.14 ರಷ್ಟಿದ್ದರೆ, ರಾಜ್ಯದ ಜಿಡಿಪಿ 8.1 ರಷ್ಟಿದೆ. ಕೇಂದ್ರ ಬಜೆಟ್ ಗಿಂತ ಕರ್ನಾಟಕದ ಬಜೆಟ್ ಉತ್ತಮವಾಗಿದೆ. ರಾಜ್ಯ ಜಿಎಸ್‌ಟಿ ಸಂಗ್ರಹಣೆಯಲ್ಲಿ ದೇಶಕ್ಕೆ ಎರಡನೇ ಸ್ಥಾನದಲ್ಲಿದೆ, ಬಂಡವಾಳ ಹೂಡಿಕೆಯಲ್ಲಿಯೂ ರಾಜ್ಯ 2 ನೇ ಸ್ಥಾನದಲ್ಲಿದೆ. ಆದಾಗ್ಯೂ ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಬಿಜೆಪಿಯವರು ಕೇವಲ ರಾಜಕೀಯಕ್ಕಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು.