ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರತಿಷ್ಠಿತ ಆ್ಯಪಲ್‌ ಸಂಸ್ಥೆಯ ಸ್ವಿಫ್ಟ್‌ ಸ್ಟುಡೆಂಟ್‌ ಚಾಲೆಂಜ್‌ 2026; ಟಾಪ್‌ 50 ವಿಜೇತರ ಪಟ್ಟಿಯಲ್ಲಿ ಬೆಂಗಳೂರಿನ ಪಿಇಎಸ್‌ ಕಾಲೇಜು ವಿದ್ಯಾರ್ಥಿನಿ ಅನನ್ಯಾಗೆ ಸ್ಥಾನ

Swift Student Challenge 2026: ಬೆಂಗಳೂರಿನ ಪಿಇಎಸ್‌ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಅನನ್ಯಾ ಬಾಬು ಪ್ರಸಾದ್‌ ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ಲಭಿಸಿದೆ. ಟೆಕ್‌ ದೈತ್ಯ, ಅಮೆರಿಕ ಮೂಲದ ಆ್ಯಪಲ್‌ ಐಎನ್‌ಸಿ ನಡೆಸಿದ ಸ್ವಿಫ್ಟ್‌ ಸ್ಟುಡೆಂಟ್‌ ಚಾಲೆಂಜ್‌ 2026ರ ಟಾಪ್‌ 50 ವಿಜೇತರ ಪೈಕಿ ಅನನ್ಯಾ ಕೂಡ ಒಬ್ಬರು ಎಂದು ತಿಳಿಸಿದೆ.

ಪಿಇಎಸ್‌ ಕಾಲೇಜು ವಿದ್ಯಾರ್ಥಿನಿ ಅನನ್ಯಾಗೆ ಅಂತಾರಾಷ್ಟ್ರೀಯ ಮನ್ನಣೆ

ಅನನ್ಯಾ ಬಾಬು ಪ್ರಸಾದ್‌ ಮತ್ತು ಪಿಇಎಸ್‌ ವಿಶ್ವವಿದ್ಯಾನಿಲಯ ಲೋಗೋ -

Ramesh Ballamoole
Ramesh Ballamoole Apr 1, 2026 9:53 PM

ಬೆಂಗಳೂರು, ಏ. 1: ಕೆಲವು ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಸದ್ದು ಮಾಡುತ್ತಿರುವ ಬೆಂಗಳೂರಿನ ಪ್ರತಿಷ್ಠಿತ ಪಿಇಎಸ್‌ ವಿಶ್ವವಿದ್ಯಾನಿಲಯದ (PES University) ಮುಡಿಗೆ ಮತ್ತೊಂದು ಗರಿ ಸಿಕ್ಕಿದೆ. ವಿವಿ ವಿದ್ಯಾರ್ಥಿನಿ ಅನನ್ಯಾ ಬಾಬು ಪ್ರಸಾದ್‌ (Ananya Babu Prasad) ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ಲಭಿಸಿದೆ. ಟೆಕ್‌ ದೈತ್ಯ, ಅಮೆರಿಕ ಮೂಲದ ಆ್ಯಪಲ್‌ ಐಎನ್‌ಸಿ ನಡೆಸಿದ ಸ್ವಿಫ್ಟ್‌ ಸ್ಟುಡೆಂಟ್‌ ಚಾಲೆಂಜ್‌ 2026ರ (Swift Student Challenge 2026) ಟಾಪ್‌ 50 ವಿಜೇತರ ಪೈಕಿ ಅನನ್ಯಾ ಕೂಡ ಒಬ್ಬರು ಎಂದು ವಿವಿ ಪ್ರಕಟಣೆಯಲ್ಲಿ ತಿಳಿಸಿದೆ.

ʼʼಪಿಇಎಸ್ ವಿಶ್ವವಿದ್ಯಾನಿಲಯದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ (Artificial Intelligence & Machine Learning) ವಿದ್ಯಾರ್ಥಿನಿ ಅನನ್ಯಾ ಬಾಬು ಪ್ರಸಾದ್, ಆ್ಯಪಲ್‌ ಆಯೋಜಿಸಿದ ಪ್ರತಿಷ್ಠಿತ ಸ್ವಿಫ್ಟ್ ಸ್ಟುಡೆಂಟ್ ಚಾಲೆಂಜ್ 2026ರ ಟಾಪ್ 50 ವಿಜೇತರ ಪೈಕಿ ಒಬ್ಬರೆನಿಸಿಕೊಂಡಿದ್ದಾರೆ. ಆ ಮೂಲಕ ಜಾಗತಿಕ ಮನ್ನಣೆ ಗಳಿಸಿದ್ದಾರೆʼʼ ಎಂದು ಹೇಳಿದೆ.

ಈ ಪಟ್ಟಿಯಲ್ಲಿ ಸ್ಥಾನ ಪಡೆಯುವುದರೊಂದಿಗೆ ಅನನ್ಯಾ ವಿಶ್ವದ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿ ಡೆವಲಪರ್‌ ಎನಿಸಿಕೊಂಡಿದ್ದಾರೆ. ಸ್ವಿಫ್ಟ್ ಸ್ಟುಡೆಂಟ್ ಚಾಲೆಂಜ್ ಎನ್ನುವುದು ಆ್ಯಪಲ್‌ ನಡೆಸುವ ವಾರ್ಷಿಕ ಸ್ಪರ್ಧೆಯಾಗಿದ್ದು, ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸುವ ಉದ್ದೇಶ ಹೊಂದಿದೆ. ಇದು ವಿದ್ಯಾರ್ಥಿಗಳ ಸೃಜನಶೀಲತೆ, ತಾಂತ್ರಿಕ ಶ್ರೇಷ್ಠತೆ ಮತ್ತು ಆ್ಯಪಲ್‌ನ ಸ್ವಿಫ್ಟ್ ಪ್ರೋಗ್ರಾಮಿಂಗ್ ಭಾಷೆಯನ್ನು ಬಳಸಿಕೊಂಡು ಪ್ರಭಾವಶಾಲಿ ಅಪ್ಲಿಕೇಶನ್‌ಗಳ ಅಭಿವೃದ್ಧಿ ಪಡಿಸುತ್ತದೆ ಎಂದು ಪಿಇಎಸ್‌ ವಿಶ್ವವಿದ್ಯಾನಿಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಿನ ಪಿಇಎಸ್‌ ವಿದ್ಯಾರ್ಥಿ ನವೀನ್‌ಗೆ ರಾಷ್ಟ್ರೀಯ ಪ್ಯಾರಾ ಈಜು ಸ್ಪರ್ಧೆಯಲ್ಲಿ ಚಿನ್ನ!

WWDC 2026ಕ್ಕೆ ಆಹ್ವಾನ

ಇದರೊಂದಿಗೆ ಕ್ಯುಪರ್ಟಿನೊದಲ್ಲಿ ಜೂನ್‌ನಲ್ಲಿ ನಡೆಯುವ ಆ್ಯಪಲ್‌ ಕಂಪನಿಯ ವಾರ್ಷಿಕ ಶೋಧಕರ ಸಮಾವೇಶ ಡಬ್ಲ್ಯುಡಬ್ಲ್ಯುಡಿಸಿ 2026 (Worldwide Developers Conference 2026)ರಲ್ಲಿ ಭಾಗವಹಿಸುವ ಅವಕಾಶವೂ ಅನನ್ಯಾ ಅವರಿಗೆ ಲಭಿಸಿದೆ. ಆ್ಯಪಲ್‌ನ ಪ್ರಧಾನ ಕಚೇರಿಯಲ್ಲಿ ನಡೆಯುವ ಈ ವಿಶೇಷ ಮೂರು ದಿನಗಳ ಸಮಾವೇಶದಲ್ಲಿ ಅವರು ಜಾಗತಿಕ ಡೆವಲಪರ್‌ಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಜತೆಗೆ ಸಾಫ್ಟ್‌ವೇರ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಾದ ಪ್ರಗತಿ, ಬದಲಾವಣೆಯನ್ನು ಪರಿಶೀಲಿಸಲಿದ್ದಾರೆ. ಇದರ ಸಂಪೂರ್ಣ ಪ್ರಯಾಣ ಮತ್ತು ವಸತಿ ವೆಚ್ಚಗಳನ್ನು ಆ್ಯಪಲ್‌ ಸಂಸ್ಥೆ ಭರಿಸಲಿದೆ.

ಅಭಿನಂದನೆ

ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಜವಾಹರ್ ದೊರೆಸ್ವಾಮಿ ಈ ಬಗ್ಗೆ ಮಾತನಾಡಿ ಅನನ್ನಯಾ ಅವರಿಗೆ ಅಬಿನಂದನೆ ಸಲ್ಲಿಸಿದ್ದಾರೆ. "ಅನನ್ಯಾ ಅವರ ಈ ಸಾಧನೆ ನಮ್ಮ ಬಲವಾದ ಶೈಕ್ಷಣಿಕ ಅಡಿಪಾಯವನ್ನು ಎತ್ತಿ ಹಿಡಿದಿದೆ. ಅಲ್ಲದೆ ಪಿಇಎಸ್ ವಿಶ್ವವಿದ್ಯಾಲಯ ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್‌ ಲರ್ನಿಂಗ್‌ನಂತಹ ಅತ್ಯಾಧುನಿಕ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸಿದೆ. ಅಲ್ಲದೆ ಪ್ರತಿಭೆಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ನಮ್ಮ ಆಶಯವನ್ನು ಬಲಪಡಿಸುತ್ತದೆʼʼ ಎಂದು ಹೇಳಿದ್ದಾರೆ.

"ಅನನ್ಯಾ ಬಾಬು ಪ್ರಸಾದ್ ಅವರ ಈ ಅಪರೂಪದ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅವರ ಸಾಧನೆಯ ಬಗ್ಗೆ ನಮಗೆ ಅಪಾರ ಹೆಮ್ಮೆ ಇದೆ ಮತ್ತು ಅವರು ಮುಂದಿನ ತಮ್ಮೆಲ್ಲ ಪ್ರಯತ್ನಗಳಲ್ಲಿ ಯಶಸ್ಸು ಕಾಣಲಿʼʼ ಎಂದು ಹಾರೈಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.