ಬೆಂಗಳೂರು: ಮಕ್ಕಳಲ್ಲಿ (kids health) ಉಂಟಾಗುವ ಹಲ್ಲಿನ ಬೆಳವಣಿಗೆಗೂ, ಉಸಿರಾಟಕ್ಕೂ ಸಂಬಂಧವಿಲ್ಲ. ಆದರೆ ಉಸಿರಾಟದ ತೊಂದರೆಯಿಂದ ಹಲ್ಲು, ಕಿವಿ, ಮೂಗಿನ ಸಮಸ್ಯೆಗಳು ಉಂಟಾಗುತ್ತದೆ ಎನ್ನುತ್ತಾರೆ ಹೆಬ್ಬಾಳದ ಮಣಿಪಾಲ ಆಸ್ಪತ್ರೆಯ (Hebbal Manipal Hospital) ಡಾ. ಸಂತೋಷ್ ಶಿವ ಸ್ವಾಮಿ (Dr. Santhosh Shiva Swamy). ವಿಶ್ವವಾಣಿ ಹೆಲ್ತ್ (Vishwavani Health) ಯುಟ್ಯೂಬ್ ಚಾನಲ್‌ನಲ್ಲಿ ನಿಸರ್ಗ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಮೂಗಿನ ಹಿಂಭಾಗದಲ್ಲಿರುವ ಅಡಿನಾಯ್ಡು ಎಂಬ ಗ್ರಂಥಿ ಪದೇ ಪದೇ ನೆಗಡಿ, ಅಲರ್ಜಿ ಉಂಟಾಗುವುದರಿಂದ ದೊಡ್ಡದಾಗುತ್ತದೆ. ಇದರಿಂದ ಮಕ್ಕಳು ಮೂಗಿನ ಮೂಲಕ ಉಸಿರಾಡುವುದನ್ನು ಬಿಟ್ಟು ಬಾಯಿ ಮೂಲಕ ಉಸಿರಾಡ ತೊಡಗುತ್ತಾರೆ. ಇದರ ಮುಖ್ಯ ಲಕ್ಷಣವೆಂದರೆ ಮಕ್ಕಳು ಬಾಯಿಯಿಂದ ಉಸಿರಾಡುವುದು, ಗೊರಕೆ ಹೊಡೆಯುವುದಾಗಿದೆ. ಈ ಗ್ರಂಥಿ ದೊಡ್ಡದಾಗುವುದರಿಂದ ಉಸಿರಾಟ, ಹಲ್ಲು, ಕಿವಿ, ಮೂಗಿನ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಮಕ್ಕಳು ನಿಧಾನಕ್ಕೆ ಊಟ ಮಾಡುವುದು ಕೂಡ ಇದರ ಲಕ್ಷಣಗಳಾಗಿರುತ್ತದೆ. ಇದು ಮಕ್ಕಳ ಬೆಳವಣಿಗೆ ಮೇಲೆ ಕೂಡ ಪರಿಣಾಮ ಬೀರುತ್ತದೆ. ಅಡಿನಾಯ್ಡು ಮತ್ತು ಟಾನ್ಸಿಲ್ ಸಮಸ್ಯೆಗಳಿಗೆ 2- 5 ವರ್ಷದೊಳಗೆ ಚಿಕಿತ್ಸೆ ಕೊಡಿಸುವುದು ಸೂಕ್ತ ಎಂದು ಅವರು ತಿಳಿಸಿದರು.