ರಿಯಾದ್,ಫೆ.13: ಮದುವೆ ಅಂದಮೇಲೆ ಹೆಚ್ಚಿನವರು ಗ್ರ್ಯಾಂಡ್ ಆಗಿ ಆಯೋಜನೆ ಮಾಡುತ್ತಾರೆ. ಬ್ರ್ಯಾಂಡ್ ಬಟ್ಟೆಗಳು, ಅದ್ದೂರಿ ಸೆಟ್ ಅಪ್, ಔತಣಕೂಟ ಇತ್ಯಾದಿ ಸಾಮಾನ್ಯ. ಆದರೆ ಸೌದಿ ಅರೇಬಿಯಾದಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದು ಅಚ್ಚರಿ ಮೂಡಿಸಿದೆ. ವಧುವಿನ ಸಹೋದರನು ವರನಿಗೆ ದುಬಾರಿ ಉಡುಗೊರೆಯನ್ನು ನೀಡುವ ಮೂಲಕ ಎಲ್ಲರನ್ನು ಅಚ್ಚರಿ ಪಡಿಸಿದ್ದಾನೆ. 24 ಕ್ಯಾರೆಟ್ ಚಿನ್ನದ ಬಿಸ್ಕತ್ತುಗಳನ್ನು ವಧುವಿನ ಸಹೋದರ ವರನ ಕುಟುಂಬದ ಸದಸ್ಯರಿಗೆ ಉಡುಗೊರೆಯಾಗಿ ನೀಡುತ್ತಾನೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಸಾಮಾನ್ಯವಾಗಿ ವಧುವಿನ ಸಹೋದರ ರಿಂಗ್, ಸರ, ಹೀಗೆ ಸಣ್ಣ ಪುಟ್ಟ ಉಡುಗೊರೆ ನೀಡುವ ಸಂಪ್ರದಾಯ ಇರುತ್ತದೆ. ಆದರೆ ಇಲ್ಲಿ ವಧುವಿನ ಸಹೋದರನು 24 ಕ್ಯಾರೆಟ್ ಚಿನ್ನದ ಬಿಸ್ಕತ್ತು ನೀಡಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋ ನೋಡಿ:
ಸೌದಿ ಸಂಸ್ಕೃತಿಯಲ್ಲಿ, ಚಿನ್ನವನ್ನು ಸಾಮಾನ್ಯವಾಗಿ ನೀಡಲಾಗುತ್ತದೆ. ಅದೇ ರೀತಿ ಇಲ್ಲೂ ಚಿನ್ನದ ಬಿಸ್ಕತ್ ನೀಡಲಾಗಿರುವ ವಿಡಿಯೊ ವೈರಲ್ ಆಗಿದೆ. ವಿಡಿಯೋದಲ್ಲಿ, ಸಾಂಪ್ರದಾಯಿಕ ಅರಬ್ ಉಡುಗೆಯಲ್ಲಿ ಅತಿಥಿಗಳು ಸಾಲಾಗಿ ಕುಳಿತಿರುವುದನ್ನು ಕಾಣಬಹುದು. ಈ ವೇಳೆ ವಧುವಿನ ಅಣ್ಣನು ಹೊಳೆಯುವ ಹಳದಿ ಬಣ್ಣದ ಬಿಸ್ಕತ್ತುಗಳನ್ನು ಒಬ್ಬೊಬ್ಬರಿಗೇ ಕೊಡುತ್ತಾ ಹೋಗುತ್ತಾನೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಇವು ನಿಜವಾದ 24 ಕ್ಯಾರೆಟ್ ಚಿನ್ನದ ಬಿಸ್ಕತ್ತುಗಳಲ್ಲ, ಅವು ಐಷಾರಾಮಿ ಚಾಕೊಲೇಟ್‌ಗಳು, ಚಿನ್ನದ ಬಾರ್‌ಗಳಂತೆ ಕಾಣುವಂತೆ ಚಿನ್ನದ ಹಾಳೆಯಲ್ಲಿ ಸುತ್ತಿಡಲಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
Viral Video: ಅಭ್ಯಾಸದ ವೇಳೆ ಬಾಸ್ಕೆಟ್‌ಬಾಲ್ ಪೋಲ್ ಕುಸಿದು ರಾಷ್ಟ್ರೀಯ ಆಟಗಾರ ಸಾವು
ಇದಕ್ಕೆ ಪ್ರತಿಕ್ರಿಯೆಯಾಗಿ ಮತ್ತೊಬ್ಬರು ಇದು ಚಾಕೊಲೇಟ್ ಅಲ್ಲ, ಇದು ಚಿನ್ನದ ಬಾರ್. ಸೌದಿ ಅರೇಬಿಯಾದಲ್ಲಿ ನಾವು ಮದುವೆಯಲ್ಲಿ ಇದನ್ನು ಮಾಡುತ್ತೇವೆ ಎಂದಿದ್ದಾರೆ. ಸೌದಿ ಅರೇಬಿಯಾದಲ್ಲಿ ಮದುವೆಯ ವೇಳೆ ವಧುವಿಗೆ 'ಮಹರ್' ರೂಪದಲ್ಲಿ ಚಿನ್ನ ನೀಡುವುದು ಸಾಮಾನ್ಯ. ಆದರೆ, ಸಾರ್ವಜನಿಕ ವಾಗಿ ಎಲ್ಲರಿಗೂ ಚಿನ್ನದ ಬಿಸ್ಕತ್ತು ಹಂಚುವುದು ಅತಿ ವಿರಳ ಎಂದು ಕೆಲವರು ಚರ್ಚೆ ಮಾಡಿದ್ದಾರೆ.