ನವದೆಹಲಿ,ಮಾ. 31: ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಮರಣದ ಬಳಿಕ ಪುಣ್ಯ ಸ್ಮರಣೆ ಮಾಡುವ ಸಂಪ್ರದಾಯ ಇದೆ. ಆದರೆ ಇಲ್ಲೊಬ್ಬರು ತಾನು ಮರಣ ಹೊಂದುವ ಮೊದಲೇ ಪುಣ್ಯ ಸ್ಮರಣೆ ಆಚರಿಸಿ ಊರಿನ ಜನರಿಗೆ ಭೋಜನದ ವ್ಯವಸ್ಥೆ ಮಾಡಿದ್ದಾರೆ. ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಅಲ್ಲಿ ವೃದ್ಧ ವ್ಯಕ್ತಿಯೊಬ್ಬರು 'ಹದಿಮೂರನೇ ದಿನದ ಆಚರಣೆಯನ್ನು ಭರ್ಜರಿ ಔತಣಕೂಟ ಮೂಲಕ ಏರ್ಪಡಿಸಿದ್ದಾರೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.
ಲಕ್ಷ್ಮಣಪುರ ಗ್ರಾಮದಲ್ಲಿ ನಡೆದ ಈ ಕಾರ್ಯಕ್ರಮವು ವ್ಯಾಪಕ ಗಮನ ಸೆಳೆದಿದ್ದು, ಸುಮಾರು 2,000 ಅತಿಥಿಗಳಿಗೆ ವ್ಯವಸ್ಥೆ ಮಾಡಲಾಗಿದೆ. ಉತ್ತರ ಪ್ರದೇಶದ ರಾಕೇಶ್ ಯಾದವ್ ಎಂಬ ವ್ಯಕ್ತಿ ಬದುಕಿದ್ದಾಗಲೇ 2,000 ಜನರಿಗೆ ಊಟ ಬಡಿಸಿದ್ದಾರೆ. ತನ್ನನ್ನು ನೋಡಿಕೊಳ್ಳಲು ಅಥವಾ ಅಂತ್ಯಕ್ರಿಯೆ ನಡೆಸಲು ಯಾರೂ ಇಲ್ಲ ಎಂದು ಹೆದರಿದ ರಾಕೇಶ್, ಜೀವಂತವಾಗಿರುವಾಗಲೇ ತನ್ನದೇ ಆದ ಧಾರ್ಮಿಕ ಔತಣವನ್ನು ಆಯೋಜಿಸಲು ನಿರ್ಧಾರ ಮಾಡಿದ್ದಾರೆ.
ಆಯೋಜಕರಾದ 65 ವರ್ಷ ವಯಸ್ಸಿನ ರಾಕೇಶ್ ಯಾದವ್ ಲಕ್ಷ್ಮಣಪುರ ಗ್ರಾಮದ ನಿವಾಸಿ ಯಾಗಿದ್ದಾರೆ. ಅವರು ಅವಿವಾಹಿತರಾಗಿದ್ದು ಇಬ್ಬರು ಸಹೋದರರು ಮರಣ ಹೊಂದಿದ್ದರು. ಒಬ್ಬಳು ಸಹೋದರಿ ಹಾಗೂ ಸೋದರ ಸಂಬಂಧಿ ಇದ್ದರೂ ಧಾರ್ಮಿಕ ವಿಧಿ ವಿಧಾನ ಮಾಡುವುದಿಲ್ಲ ಊಟ ಹಾಕಿಸುವುದಿಲ್ಲ ಎನ್ನುವ ಕಾರಣಕ್ಕೆ ತಾನೇ ಈ ನಿರ್ಧಾರ ಮಾಡಿ ಕೊಂಡಿದ್ದಾರೆ.
ಈ ಕಾರ್ಯಕ್ರದ ವಿಶೇಷವಾಗಿಸುವ ಸಂಗತಿಯೆಂದರೆ ತಮ್ಮದೆ ಛಾಯಾಚಿತ್ರವನ್ನು ಹೊಂದಿರುವ ಆಮಂತ್ರಣ ಪತ್ರಿಕೆ ಮಾಡಿಸಿ ಜಿಂದಾ ಭಂಡಾರ (ಲಿವಿಂಗ್ ಫೀಸ್ಟ್) ಎಂದು ಹೆಸರಿಸಿ ಆಮಂತ್ರಣ ಪತ್ರಗಳನ್ನು ನಿವಾಸಿಗಳಿಗೆ ವಿತರಿಸಿದ್ದಾರೆ. ಸದ್ಯ ಈ ಆಮಂತ್ರಣ ಪತ್ರಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಾರ್ಚ್ 30 ರಂದು ಮಧ್ಯಾಹ್ನ 3 ಗಂಟೆಗೆ ಈ ಕಾರ್ಯಕ್ರಮ ಪ್ರಾರಂಭವಾಯಿತು, ಈಗಾಗಲೇ ಸಿದ್ಧತೆಗಳು ಭರದಿಂದ ಸಾಗಿವೆ. ದೊಡ್ಡ ಪ್ರಮಾಣದಲ್ಲಿ ಆಹಾರವನ್ನು ಮುಂಚಿತವಾಗಿ ತಯಾರಿಸ ಲಾಗುತ್ತಿತ್ತು, ಮಹಿಳೆಯರು, ಯುವಕರು ತರಕಾರಿ ಭಕ್ಷ್ಯಗಳನ್ನು ತಯಾರಿಸುವಲ್ಲಿ ನಿರತರಾಗಿ ದ್ದರು. ಹದಿಮೂರನೇ ದಿನದ ಜೀವಂತ ಹಬ್ಬ'ದ ಸುದ್ದಿ ಗ್ರಾಮದಲ್ಲಿ ವ್ಯಾಪಕ ಚರ್ಚೆಗೆ ನಾಂದಿ ಹಾಡಿದೆ. ಕೆಲವರು ಅವರನ್ನು ಒಂಟಿತನದ ಅಭಿವ್ಯಕ್ತಿ ಎಂದು ನೋಡಿದರೆ, ಇತರರು ಅವರ ಭಾವನಾತ್ಮಕ ಮನಸ್ಥಿತಿ ಗೆ ಮೆಚ್ಚುಗೆ ನೀಡಿ ಈ ಔತಣಕೂಟದಲ್ಲಿ ಪಾಲ್ಗೊಂಡಿದ್ದರು.