ಸೋಶಿಯಲ್ ಮೀಡಿಯಾಗಳಿಗಾಗಿ ರೀಲ್ಸ್ ಮಾಡಲು ಯುವಪೀಳಿಗೆ ಏನೇನೋ ಅಪಾಯಕಾರಿಯಾದ ಸ್ಟಂಟ್‍ಗಳನ್ನು ಮಾಡುತ್ತಿರುತ್ತಾರೆ. ಇದೀಗ ಬಾಡಿಬಿಲ್ಡರ್ ಒಬ್ಬ ಪುಷ್ ಅಪ್ ಮಾಡಲು ಬಹಳ ಅಪಾಯಕಾರಿ ಮಾರ್ಗವನ್ನು ಕಂಡುಕೊಂಡಿರುವುದು ಸುದ್ದಿಯಾಗಿದೆ. ಬಾಡಿಬಿಲ್ಡರ್ ಪುಶ್ ಅಪ್ ಮಾಡಲು ಚಲಿಸುವ ವಿಮಾನದ ಎಂಜಿನ್ ಮೇಲೆ ಹಾರಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ. ಇದಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಬಹಳ ಟೀಕೆಗಳು ವ್ಯಕ್ತವಾಗಿದೆ.
ಮಾಹಿತಿ ಪ್ರಕಾರ, 23 ವರ್ಷದ ಯುವಕ ಪ್ರೆಸ್ಲಿ ಗಿನೋಸ್ಕಿ ಕಳೆದ ವರ್ಷ ವಿಡಿಯೊವನ್ನು ರೆಕಾರ್ಡ್ ಮಾಡಿದ್ದಾನೆ. ಆದರೆ ಇತ್ತೀಚೆಗೆ ಅದನ್ನು ಟಿಕ್‍ಟಾಕ್‍ನಲ್ಲಿ ಪೋಸ್ಟ್ ಮಾಡಿದ್ದಾನೆ. ಲಕ್ಷಾಂತರ ನೆಟ್ಟಿಗರ ಗಮನವನ್ನು ಸೆಳೆದ ಕೂಡಲೇ, ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಟೀಕೆಗಳು ವ್ಯಕ್ತವಾಗಿದೆ. ಹಾಗಾಗಿ ಈ ವಿಡಿಯೊವನ್ನು ಡಿಲೀಟ್ ಮಾಡಲಾಗಿದೆ ಎಂದು ವರದಿಯಾಗಿದೆ.
ಈಗಾಗಲೇ ಇತರ ಸೋಶಿಯಲ್ ಮೀಡಿಯಾ ಪ್ಲಾಟ್‍ಫಾರ್ಮ್‍ಗಳಲ್ಲಿ ಪೋಸ್ಟ್ ಮಾಡಲಾದ ವಿಡಿಯೊದಲ್ಲಿ, ಪ್ರೆಸ್ಲಿ ಗಿನೋಸ್ಕಿ ಚಲಿಸುವ ವಿಮಾನದ ಎಂಜಿನ್ ಮೇಲೆ ಹತ್ತುವುದನ್ನು ಸೆರೆಹಿಡಿಯಲಾಗಿದೆ. ನಂತರ ಅವನು ಕೆಲವು ಪುಶ್-ಅಪ್‌ಗಳನ್ನು ಮಾಡಿ ತನ್ನ ಸಾಹಸ ಮೆರೆದಿದ್ದಾನೆ. ಅಲ್ಲದೇ ಆತ ಈ ಅಪಾಯಕಾರಿ ಸ್ಟಂಟ್ ಅನ್ನು ಸುರಕ್ಷಿತ ಎಂದು ಸಮರ್ಥಿಸಿಕೊಂಡಿದ್ದಾನೆ.
ಈ ವಿಡಿಯೊ ನೋಡಿ ಅನೇಕ ನೆಟ್ಟಿಗರು ಆತನ ವಿರುದ್ಧ ಕಿಡಿಕಾರಿದ್ದಾರೆ. "ಮೂರ್ಖ ನಡೆ, ಆ ಎಂಜಿನ್ ಅವನನ್ನು ತುಂಡು ಮಾಂಸವಾಗಿ ಪರಿವರ್ತಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ" ಎಂದು ವ್ಯಕ್ತಿಯೊಬ್ಬರು ಬರೆದಿದ್ದಾರೆ. ಇನ್ನೊಬ್ಬರು, "ಹೆಚ್ಚು ಜನರು ಚಿಕ್ಕ ವಯಸ್ಸಿನಲ್ಲಿ ಏಕೆ ಸಾಯುತ್ತಿದ್ದಾರೆ ಎಂದು ಆಶ್ಚರ್ಯ ಪಡುತ್ತೀರಾ? ಈ ರೀತಿಯ ಮೂರ್ಖತನದ ನಡೆಗಳಿಂದಲೇ” ಎಂದು ಹೇಳಿದ್ದಾರೆ. ಮತ್ತೊಬ್ಬರು, "ಜನರು ನಿಜವಾಗಿಯೂ ಇತರರ ಗಮನ ಸೆಳೆಯಲು ಎಂಥಾ ಮೂರ್ಖತನದ ಕೆಲಸಕ್ಕೂ ತಯಾರಿರುತ್ತಾರೆ" ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: Plane Crash: ಅಮೆರಿಕದಲ್ಲಿ ಮತ್ತೊಂದು ದುರಂತ; ಚಿಕಿತ್ಸೆಗೆ ತೆರಳುತ್ತಿದ್ದ ಮಗು ಇದ್ದ ವಿಮಾನ ಪತನ
ಇದಕ್ಕೆ ಅಧಿಕಾರಿಗಳ ಪ್ರತಿಕ್ರಿಯೆ ಏನು?
ಮಾಹಿತಿ ಪ್ರಕಾರ, ಗಿನೋಸ್ಕಿ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವಾಗ ಈ ವಿಡಿಯೊವನ್ನು ರೆಕಾರ್ಡ್ ಮಾಡಿದ್ದಾನೆ. ಆಸ್ಟ್ರೇಲಿಯಾ ವಿಮಾನ ನಿಲ್ದಾಣದ ವಕ್ತಾರರು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ. "ಸಿಡ್ನಿ ವಿಮಾನ ನಿಲ್ದಾಣವು ವಾಯುನೆಲೆಯಲ್ಲಿ ಅಸುರಕ್ಷಿತ ನಡವಳಿಕೆಗಳನ್ನು ಸಹಿಸುವುದಿಲ್ಲ ಮತ್ತು ಸಂಭಾವ್ಯ ಸುರಕ್ಷತಾ ಉಲ್ಲಂಘನೆಗಳ ಎಲ್ಲಾ ವರದಿಗಳನ್ನು ನಾವು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ" ಎಂದು ಹೇಳಿದ್ದಾರೆ.