Viral Video: ಸಾವಿರಾರು ಪಕ್ಷಿಗಳಿಗೆ ಟೆರೇಸ್ ಮೇಲೆ ಆಶ್ರಯ ನೀಡಿದ ದಂಪತಿ; ವಿಡಿಯೊ ವೈರಲ್
ಚೆನ್ನೈಯ ದಂಪತಿ ಸುದರ್ಶನ್ ಮತ್ತು ವಿಥಿಯಾ ತಮ್ಮ ಮನೆಯ ಟೆರೇಸ್‌ನಲ್ಲಿ ಹಲವು ವರ್ಷಗಳಿಂದ ಗಿಳಿಗಳು, ಪಾರಿವಾಳಗಳು ಮತ್ತು ಗುಬ್ಬಚ್ಚಿಗಳಿಗೆ ಆಹಾರವನ್ನು ನೀಡುತ್ತಿದ್ದಾರೆ. ಪಕ್ಷಿಗಳಿಂದ ತುಂಬಿದ್ದ ಅವರ ಟೆರೇಸ್‍ನ ವಿಡಿಯೊವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿದೆ. ಅನೇಕರು ಅವರ ಪಕ್ಷಿ ಪ್ರೀತಿಯನ್ನು ಮೆಚ್ಚಿದರೆ, ಇತರರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.


ಚೆನ್ನೈ: ಚೆನ್ನೈನಲ್ಲಿ ವಾಸವಿರುವ ಸುದರ್ಶನ್ ಮತ್ತು ವಿಥಿಯಾ ದಂಪತಿ ತಮ್ಮ ಮನೆಯ ಟೆರೇಸ್‌ನಲ್ಲಿ ಹಲವು ವರ್ಷಗಳಿಂದ ಗಿಳಿ, ಪಾರಿವಾಳ ಮತ್ತು ಗುಬ್ಬಚ್ಚಿಗಳಿಗೆ ಆಹಾರವನ್ನು ನೀಡುತ್ತಿದ್ದಾರೆ. ಹಾಗಾಗಿ ಅವರ ಮನೆಯ ಟೆರೇಸ್ ಪಕ್ಷಿಗಳಿಗೆ ಆಶ್ರಯ ತಾಣ ಎನಿಸಿಕೊಂಡಿದೆ. ಸುದರ್ಶನ್ ಮತ್ತು ವಿಥಿಯಾ ಪಕ್ಷಿಗಳಿಂದ ತುಂಬಿದ ಟೆರೇಸ್‌ನ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ವೈರಲ್ (Viral Video) ಆಗಿ ಚರ್ಚೆಯನ್ನು ಹುಟ್ಟು ಹಾಕಿದೆ. ಅನೇಕರು ಇವರ ಪಕ್ಷಿ ಬಗೆಗಿನ ಕಾಳಜಿಯನ್ನು ಹೊಗಳಿದರೆ, ಇನ್ನು ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ.
ಕಳೆದ 15 ವರ್ಷಗಳಿಂದ ಪಕ್ಷಿಗಳಿಗೆ ಆಹಾರವನ್ನು ನೀಡುತ್ತಿರುವ ಸುದರ್ಶನ್ ಮತ್ತು ವಿಥಿಯಾ ಹಂಚಿಕೊಂಡ ಈ ವಿಡಿಯೊದಲ್ಲಿ ದಂಪತಿಯ ಟೆರೇಸ್ ಮತ್ತು ಅವರ ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೂರಾರು ಪಕ್ಷಿಗಳು ಕುಳಿತಿರುವುದನ್ನು ಸೆರೆಯಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಹಲವಾರು ಲೈಕ್‌ಗಳು ಮತ್ತು ಕಾಮೆಂಟ್‌ಗಳನ್ನು ಗಳಿಸಿದೆ. ಅನೇಕರು ದಂಪತಿಯ ಸಮರ್ಪಣಾ ಭಾವವನ್ನು ಹೊಗಳಿದರೆ, ಕೆಲವರು ದೊಡ್ಡ ಪಕ್ಷಿ ಗುಂಪುಗಳಿಂದ ಉಂಟಾಗುವ ಕೆಲವು ಆರೋಗ್ಯಕ್ಕೆ ಸಂಬಂಧಿಸಿದ ಅಪಾಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ವಿಡಿಯೊ ನೋಡಿ...
#WATCH | Tamil Nadu | Chennai couple Sudarson & Vithiya have been feeding parrots, pigeons, doves, and house sparrows on their residence's terrace for the past 15 years, making it a great spot for visitors. pic.twitter.com/J3ZkLd0uQT
— ANI (@ANI) May 16, 2025
ಒಬ್ಬರು, ಇದು ನೋಡಲು ಆಕರ್ಷಕವಾಗಿದೆʼʼ ಎಂದಿದ್ದಾರೆ. "ವಾವ್. ಇದು ಸುಂದರವಾಗಿದೆ" ಎಂದು ಮತ್ತೊಬ್ಬರು ಹೇಳಿದ್ದಾರೆ. "ಚೆನ್ನೈ ದಂಪತಿಯ ಪಕ್ಷಿ ಪ್ರೇಮ. ಅವರ ಟೆರೇಸ್ ಪಕ್ಷಿಗಳಿಗೆ ಸ್ವರ್ಗವಾಗಿದೆ" ಎಂದು ನೆಟ್ಟಿಗರೊಬ್ಬರು ಪೋಸ್ಟ್ ಮಾಡಿದ್ದಾರೆ.
ಮತ್ತೊಂದೆಡೆ, ಕೆಲವು ನೆಟ್ಟಿಗರು ಇಷ್ಟೊಂದು ಪಕ್ಷಿಗಳಿಗೆ ಆಹಾರ ನೀಡುವುದರಿಂದ ಅವುಗಳಿಂದ ಹರಡುವ ಆರೋಗ್ಯ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಒಬ್ಬ ನೆಟ್ಟಿಗರು, "ಇದು ತುಂಬಾ ಅನಾರೋಗ್ಯಕರ. ಆರೋಗ್ಯದ ಬಗ್ಗೆ ಜಾಗೃತಿವಹಿಸದಿದ್ದರೆ ಗಂಭೀರ ಅಪಾಯ ಎದುರಿಸಬೇಕಾಗಿ ಬರಬಹುದು. ಇದು ಮುಗ್ಧ ನೆರೆಹೊರೆಯವರಿಗೂ ಚಿಕಿತ್ಸೆ ನೀಡಲಾಗದ ಆರೋಗ್ಯ ಸಮಸ್ಯೆಯನ್ನು ಉಂಟು ಮಾಡಬಹುದು" ಎಂದು ಹೇಳಿದ್ದಾರೆ. "ಪಾರಿವಾಳಗಳಿಗೆ ಆಹಾರ ನೀಡುವುದು ಇಲಿಗಳನ್ನು ಸಾಕುಪ್ರಾಣಿಗಳಾಗಿ ಸಾಕಿದಂತೆ. ಜನರಿಗೆ ಇನ್ನೂ ಅರಿವಿಲ್ಲ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. "ಪಾರಿವಾಳಗಳು ಹಾರುವ ಇಲಿಗಳು" ಎಂದು ಇನ್ನೊಬ್ಬರು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸುದರ್ಶನ್, ಡಿಸೆಂಬರ್‌ನಿಂದ ಮಾರ್ಚ್‌ವರೆಗಿನ ಅವಧಿಯಲ್ಲಿ 15,000ಕ್ಕೂ ಹೆಚ್ಚು ಗಿಳಿಗಳನ್ನು ಮತ್ತು ಬೇಸಿಗೆಯ ತಿಂಗಳುಗಳಲ್ಲಿ ಸುಮಾರು 1,000-2,000 ಗಿಳಿಗಳನ್ನು ತಮ್ಮ ಟೆರೇಸ್ ಮೇಲೆ ಬರುತ್ತವೆʼʼ ಎಂದು ಹೇಳಿದ್ದಾರೆ. ʼʼಅರವಿಂದ ಸ್ವಾಮಿ-ಕಾರ್ತಿ ನಟಿಸಿದ ತಮಿಳು ಚಿತ್ರ ʼಮೇಯಳಗನ್ʼನ ಕೆಲವು ದೃಶ್ಯಗಳನ್ನು ಈ ಸ್ಥಳದಲ್ಲಿ ಚಿತ್ರೀಕರಿಸಿದ ನಂತರ ಮನೆ ಹೆಚ್ಚು ಪ್ರಸಿದ್ಧಿಯಾಗಿದೆʼʼ ಎಂದು ತಿಳಿಸಿದ್ದಾರೆ.
ಕಳೆದ 16 ವರ್ಷಗಳಿಂದ ಅಂದರೆ ಸುದರ್ಶನ್ ಅವರ ತಂದೆ ತೀರಿಕೊಂಡ ನಂತರ ಈ ಕೆಲಸ ಶುರು ಮಾಡಿದ್ದಾರೆ. ನಗರದಲ್ಲಿ 10,000ಕ್ಕೂ ಹೆಚ್ಚು ಮರಗಳನ್ನು ಕತ್ತರಿಸಿದ್ದರಿಂದ ಪಕ್ಷಿಗಳಿಗೆ ಆಶ್ರಯ ಅಥವಾ ಆಹಾರಕ್ಕಾಗಿ ಸ್ಥಳವಿಲ್ಲ. ಹಾಗಾಗಿ ಅವರ ಮನೆಯ ಟೆರೇಸ್‍ನ ಮೇಲೆ ಅನೇಕ ಗಿಳಿಗಳು ಆಹಾರ ಹುಡುಕುತ್ತಾ ಅಲೆಯುವುದನ್ನು ನೋಡಿದ ಈ ದಂಪತಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಅವುಗಳಿಗೆ ಆಹಾರವನ್ನು ಇಡಲು ಶುರುಮಾಡಿದ್ದಾರಂತೆ. ನಂತರ ನಿಧಾನವಾಗಿ ಹೆಚ್ಚಿನ ಪಕ್ಷಿಗಳು ಬರಲು ಶುರು ಮಾಡಿದವು. ಅವರು ಹಸಿ ನೆಲಗಡಲೆ, ನೆನೆಸಿದ ಅಕ್ಕಿ ಮತ್ತು ಋತುಮಾನದ ಹಣ್ಣುಗಳನ್ನು ಹಕ್ಕಿಗಳಿಗೆ ನೀಡುತ್ತಾರೆ. ಜತೆಗೆ ಪಕ್ಷಿಗಳಿಗೆ ಪ್ರತಿದಿನ ತಾಜಾ ಆಹಾರವನ್ನು ಬೇಯಿಸಿ ನೀಡುತ್ತಾರೆ.
ಈ ಸುದ್ದಿಯನ್ನೂ ಓದಿ:Viral Video: ಹುಲಿಯ ಜೊತೆ ರೀಲ್ಸ್ ಮಾಡಿದ ಯುವಕರು; ಶಾಕಿಂಗ್ ವಿಡಿಯೊ ವೈರಲ್
ದಂಪತಿಯ ಈ ಕೆಲಸವು ಪಕ್ಷಿಗಳಿಗೆ ಸುರಕ್ಷಿತ ತಾಣವನ್ನು ಒದಗಿಸಿದ್ದಲ್ಲದೆ ಪ್ರವಾಸಿಗರ ಆಕರ್ಷಣೆಯ ತಾಣವಾಗಿ ಮಾರ್ಪಟ್ಟಿದೆ. ಪ್ರಪಂಚದಾದ್ಯಂತದ ಅನೇಕ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರತಿದಿನ ಸಂಜೆ, ಸುಮಾರು 100-150 ಜನರು ಭೇಟಿ ಮಾಡುತ್ತಾರೆ. ಮಕ್ಕಳು ವಿಶೇಷವಾಗಿ ಬೇಸಿಗೆ ರಜೆಯಲ್ಲಿ ಇಲ್ಲಿಗೆ ಬರಲು ಇಷ್ಟಪಡುತ್ತಾರೆ. ಅಷ್ಟೇ ಅಲ್ಲದೇ ಸ್ವೀಡನ್, ಸ್ವಿಟ್ಜರ್ಲೆಂಡ್ ಮತ್ತು ಇಂಗ್ಲೆಂಡ್‌ನ ಜನರು ತಮ್ಮ ಜನವರಿ ಟಿಕೆಟ್‌ಗಳನ್ನು ಮುಂಚಿತವಾಗಿ ಬುಕ್ ಮಾಡುತ್ತಾರಂತೆ ಮತ್ತು ಭೇಟಿ ನೀಡಲು ದಂಪತಿಯಿಂದ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳುತ್ತಾರಂತೆ. ನಿಮಗೂ ಈ ಸ್ಥಳದ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇದ್ದರೆ Googleನಲ್ಲಿ 'Parrots Sudarson' ಎಂದು ಹುಡುಕಿ ನೋಡಿ.