ನವದೆಹಲಿ, ಡಿ. 3: ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಬಾಲ್ಯದಿಂದಲೇ ಸ್ಪರ್ಧಾತ್ಮಕ ಜಗತ್ತಿಗೆ ಅವರನ್ನು ತಯಾರಿ ಮಾಡುವ ಒತ್ತಡಕ್ಕೆ ಸಿಲುಕಿದ್ದಾರೆ. ಅದರಲ್ಲೂ ಸಣ್ಣ ಮಕ್ಕಳಿಗೂ ಶಾಲಾ ಪೂರ್ವ ಹಂತದಲ್ಲೇ ಓದು, ಟ್ಯೂಷನ್ ಅಂತ ಹೇಳಿ ಬಾಲ್ಯವನ್ನೇ ಕಸಿದುಕೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಎರಡರಿಂದ ಮೂರು ವರ್ಷದ ಪುಟ್ಟ ಮಕ್ಕಳ ಹೃದಯ ಹಿಂಡುವ ವಿಡಿಯೊವೊಂದು ಭಾರಿ ವೈರಲ್ (Viral Video) ಆಗುತ್ತಿದೆ. ಪುಟ್ಟ ಮಕ್ಕಳು ತರಗತಿಯಲ್ಲಿ ನಿಂತು ಕಿಟಕಿಯನ್ನು ನೋಡುತ್ತಾ ಅಮ್ಮನಿಗಾಗಿ ಕಣ್ಣೀರು ಸುರಿಸುತ್ತಿರುವ ದೃಶ್ಯ ಮನ ಕಲಕುವಂತಿದೆ. ಆರಂಭಿಕ ಶಿಕ್ಷಣದ ಹೆಸರಿನಲ್ಲಿ ಸಣ್ಣ ಮಕ್ಕಳ ಮೇಲೆ ಒತ್ತಡ ಹೇರುವಂತೆ ಮಾಡುವ ಪೋಷಕರ ಮನಸ್ಥಿತಿಗೆ ಈ ವಿಡಿಯೊ ಕನ್ನಡಿ ಹಿಡಿಯುವಂತಿದೆ.
ಕೇವಲ 2ರಿಂದ 3 ವರ್ಷ ವಯಸ್ಸಿನ ಮಕ್ಕಳು ಶಾಲೆಯಿಂದ ಮನೆಗೆ ಹೋಗಲು ಬೇಡಿಕೊಳ್ಳುತ್ತಿರುವ ದೃಶ್ಯ ವಿಡಿಯೊದಲ್ಲಿ ಕಾಣಬಹುದು. ಇಬ್ಬರು ಮಕ್ಕಳು ತರಗತಿಯ ಕಿಟಕಿಯ ಹಿಂದೆ ನಿಂತು, ತಮ್ಮ ಪುಟ್ಟ ಬೆರಳುಗಳ ಮೂಲಕ ಕಬ್ಬಿಣದ ಸರಳುಗಳಲ್ಲಿ ಹಿಡಿದು ಕಣ್ಣೀರು ಹಾಕುತ್ತಿದ್ದಾರೆ. ಅದರಲ್ಲಿ ಒಂದು ಮಗು ಅಳುತ್ತಾ "ನನ್ನಮ್ಮನಿಗೆ ಫೋನ್ ಮಾಡಿ... ನನ್ನಮ್ಮನ ಹೆಸರು 'ಮಮ್ಮಾ'ʼ ಎಂದು ಹೇಳಿಕೊಳ್ಳುವ ದೃಶ್ಯ ಮನಸ್ಸು ಕರಗುವಂತೆ ಮಾಡುತ್ತದೆ. ಮತ್ತೊಂದು ಮಗು ಭಯ ಮತ್ತು ನಿರೀಕ್ಷೆಯಿಂದ ಹೊರಗೆ ನೋಡುತ್ತಾ ಮೌನವಾಗಿ ಅಳುತ್ತಿದೆ.
ವಿಡಿಯೊ ನೋಡಿ:
ಮಗು ತಮ್ಮ ಶಿಕ್ಷಕರಿಗೆ, "ನಮ್ಮನ್ನು ಮನೆಗೆ ಹೋಗಲು ಬಿಡಿ, ನಾವು ಅಮ್ಮನ ತೊಡೆಯ ಮೇಲೆ ಮಲಗಬೇಕು ಮತ್ತು ಹಾಲು ಕುಡಿಯಬೇಕು" ಎಂದು ಬೇಡಿಕೊಳ್ಳುವ ಮುಗ್ಧತೆ ಕರುಳು ಹಿಂಡುತ್ತದೆ. ಈ ವಿಡಿಯೊವನ್ನು ಸುರಾಜ್ ಕುಮಾರ್ ಬೌದ್ ಶೇರ್ ಮಾಡಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ʼʼಶಾಲೆಯಲ್ಲಿ ಮಕ್ಕಳು ತಮ್ಮ ತಾಯಿಯ ಮಡಿಲಲ್ಲಿ ಮಲಗಿ ಹಾಲು ಕುಡಿಯಲು ಬಯಸುತ್ತಾರೆ. ಎಲ್‌ಕೆಜಿ ಹೆಸರಿನಲ್ಲಿ 2-3 ವರ್ಷದ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಶಿಕ್ಷಣವಲ್ಲ...ಇದು ಬಾಲ್ಯವನ್ನೆ ಕಸಿಯುತ್ತಿದೆʼʼ ಎಂದು ಬರೆದುಕೊಂಡಿದ್ದಾರೆ.
ವಿದ್ಯಾರ್ಥಿನಿಗೆ ಹಿಗ್ಗಾಮುಗ್ಗಾ ಥಳಿಸಿದ ಪಾಪಿ ಶಿಕ್ಷಕ: ವಿಡಿಯೋ ನೋಡಿದ್ರೆ ಸಿಟ್ಟು ಬರುತ್ತೆ
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೆಯಾದ ತಕ್ಷಣ 127.4 ಸಾವಿರಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ. ಬಳಕೆದಾರರು ಈ ವಿಡಿಯೊ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿ ಕೊಂಡಿದ್ದಾರೆ. ಈ ವಯಸ್ಸಿನಲ್ಲಿ ಮಕ್ಕಳನ್ನು ನರ್ಸರಿ, ಶಾಲೆಗೆ ಕಳುಹಿಸುವುದು ಮಾನಸಿಕವಾಗಿ ಆಘಾತಕಾರಿ. ಅವರು ಈ ವಯಸ್ಸಿನಲ್ಲಿ ಕುಟುಂಬದವರೊಂದಿಗೆ ಮನೆಯಲ್ಲಿ ಇರಬೇಕು ಎಂದು ಒಬ್ಬರು ಬರೆದಿದ್ದಾರೆ. ಮತ್ತೊಬ್ಬರು ಇದು ತುಂಬಾ ಹೃದಯ ವಿದ್ರಾವಕವಾಗಿದೆ. ಎಳೆಯ ಮಕ್ಕಳಿಗೆ ತಾಯಿಯ ಆಲಿಂಗನದ ಬೆಚ್ಚಗಿನ ಭದ್ರತೆ ಬೇಕಾಗಿದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ಪುಟ್ಟ ಮಕ್ಕಳನ್ನು ಆರಂಭಿಕ ಹಂತದಲ್ಲಿ ಶಾಲಾ ವ್ಯವಸ್ಥೆಗೆ ತಳ್ಳುವ ನಿರ್ಧಾರಗಳ ಕುರಿತು ಚರ್ಚೆಯನ್ನು ಹುಟ್ಟು ಹಾಕುವಂತೆ ಮಾಡಿದೆ.