ತಿರುವನಂತಪುರಂ, ಜ. 23: ಇತ್ತೀಚೆಗೆ ಜನರಲ್ಲಿ ಮೊಬೈಲ್ ಗೀಳು ಹೆಚ್ಚಾಗಿದ್ದು, ಯಾವುದು ಸಮಾಜಕ್ಕೆ ಒಳಿತು ಯಾವುದು ಮಾರಕ ಎನ್ನುವುದನ್ನು ಯೋಚಿಸದೆ ವಿಡಿಯೊ ಮಾಡಿ ಹರಿಯಬಿಡುವ ಚಾಳಿ ಹೆಚ್ಚಾಗಿದೆ. ಅದರಲ್ಲೂ ಕೇರಳದ 42 ವರ್ಷದ ದೀಪಕ್ ಎನ್ನುವ ವ್ಯಕ್ತಿಯ ಸಾವು ನಿಜಕ್ಕೂ ಎಲ್ಲರಿಗೆ ಆಘಾತಗೊಳಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೊದಿಂದ ಅನ್ಯಾಯವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ದೀಪಕ್ ವಿರುದ್ಧ ಇನ್ಫ್ಲುಯೆನ್ಸರ್ ಶಿಮ್ಜಿತಾ ಮುಸ್ತಫಾ ಲೈಂಗಿಕ ಕಿರುಕುಳದ ಸುಳ್ಳು ಆರೋಪ ಮಾಡಿದ್ದಳು. ಇದರ ಬೆನ್ನಲ್ಲೇ ಅಲ್ಲಿನ ಪುರುಷರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಕೇರಳದ ವ್ಯಕ್ತಿಯೊಬ್ಬರು ಕಬ್ಬಿಣದ ಬಲೆಯನ್ನು ಸುತ್ತಿಕೊಂಡು ಮನೆಯಿಂದ ಹೊರ ನಡೆದಿರುವ ವಿಡಿಯೊವೊಂದು ವೈರಲ್ (Viral Video) ಆಗಿದೆ.
ಕೆಲವು ದಿನಗಳ ಹಿಂದೆ ಕೇರಳದ ದೀಪಕ್ ಎಂಬುವವರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಶಿಮ್ಜಿತಾ ಮುಸ್ತಫಾ ಆರೋಪಿಸಿದ ವಿಡಿಯೊ ವೈರಲ್ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ಮಹಿಳೆ ರೆಕಾರ್ಡ್ ಮಾಡಿದ 18 ಸೆಕೆಂಡ್ ವಿಡಿಯೊ ಭಾರಿ ಸಂಚಲನ ಸೃಷ್ಟಿಸಿತ್ತು. ಇದರಲ್ಲಿ ದೀಪಕ್ ತಮ್ಮಷ್ಟಕ್ಕೆ ನಿಂತಿದ್ದರೂ ಶಿಮ್ಜಿತಾ ಬೇಕಂತಲೇ ಅವರನ್ನು ಸ್ಪರ್ಶಿಸಲು ಪ್ರಯ್ತನಿಸುತ್ತಿರುವುದು ಕಂಡು ಬಂದಿತ್ತು. ದೀಪಕ್ ಕೂಡ ತಮ್ಮ ಮೇಲಿನ ಆರೋಪವನ್ನು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದರೂ ಮಾನಸಿಕ ಒತ್ತಡಕ್ಕೆ ಸಿಲುಕಿ ಜನವರಿ 18ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ಬಹುತೇಕರು ವೀಮ್ಸ್ ಹುಚ್ಚಿಗೆ ಬಿದ್ದು ವಿಡಿಯೊ ಮಾಡಿರುವ ಶಿಮ್ಜಿತಾ ಮುಸ್ತಫಾ ನಡೆಯನ್ನು ಟೀಕಿಸಿದ್ದಾರೆ. ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ವಿಡಿಯೊ ನೋಡಿ:
ಈ ಘಟನೆಯನ್ನು ಖಂಡಿಸಿದ ವ್ಯಕ್ತಿಯೊಬ್ಬರು ಇದೀಗ ಕಬ್ಬಿಣದ ಬಲೆ ಸುತ್ತಿಕೊಂಡು ಮನೆಯಿಂದ ಹೊರಗೆ ಹೆಜ್ಜೆ ಹಾಕಿರುವ ಹೊಸ ವಿಡಿಯೊ ಗಮನ ಸೆಳೆಯುತ್ತಿದೆ. ತನ್ನ ಇಡೀ ದೇಹವನ್ನು ಕಬ್ಬಿಣದ ಬಲೆಯಿಂದ ತಯಾರಿಸಿದ ಪಂಜರದ ಒಳಗೆ ಇರಿಸಿಕೊಂಡಿದ್ದಾರೆ. ವಿಡಿಯೊದಲ್ಲಿ ತನ್ನ ಮನೆಯೊಳಗೆ ವ್ಯಕ್ತಿಯೊಬ್ಬರು ನಿಂತಿರುವುದನ್ನು ಕಂಡುಬಂದಿದೆ. ತಲೆಯಿಂದ ಕಾಲಿನವರೆಗೆ ತಂತಿಯಂತಹ ಕಬ್ಬಿಣದ ಬಲೆ ಮುಚ್ಚಲ್ಪಟ್ಟಿದೆ. ಕಬ್ಬಿಣದ ಬಲೆಯು ದೇಹವನ್ನು ಪಂಜರದಂತೆ ಸುತ್ತುವರಿದಿದೆ. ಅತಿ ಕಷ್ಟಪಟ್ಟು ಅವರು ಮನೆಯಿಂದ ಹೊರ ನಡೆದಿದ್ದಾನೆ.
ರಾಕ್ಷಸಿಯಂತೆ ವರ್ತಿಸಿದ ಬಿಜೆಪಿ ಕಾರ್ಯಕರ್ತೆಯ ಇನ್ನೊಂದು ವಿಡಿಯೊ ಬಯಲು
ಮತ್ತೊಂದು ವಿಡಿಯೊದಲ್ಲಿ ಬಸ್‌ನೊಳಗೆ ಕುಳಿತಿರುವ ವ್ಯಕ್ತಿ ಸಂಪೂರ್ಣವಾಗಿ ಕಾರ್ಡ್‌ಬೋರ್ಡ್ ಪೆಟ್ಟಿಗೆಯಿಂದ ಮುಚ್ಚಿರುವುದನ್ನು ತೋರಿಸುತ್ತದೆ. ಸದ್ಯ ಈ ವಿಡಿಯೊಗಳು ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಬಳಕೆದಾರರೊಬ್ಬರು ಪುರುಷರಿಗೆ ಈಗ ಸುರಕ್ಷತೆ ಇಲ್ಲ ಎಂಬಂತೆ ಆಗಿದೆ. ಸುಖಾ ಸುಮ್ಮನೆ ವಿಡಿಯೊ ವೈರಲ್ ಮಾಡಿ ಒಬ್ಬ ವ್ಯಕ್ತಿಯ ಪ್ರಾಣ ತೆಗೆಯುವುದು ಸರಿಯಲ್ಲ, ಈ ಪ್ರತಿಭಟನೆ ಅಗತ್ಯ ಎಂದು ಬರೆದುಕೊಂಡಿದ್ದಾರೆ.