ನವದೆಹಲಿ, ಜೂ. 8: ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಸಿಕ್ಕರೂ ಒತ್ತಡದ ಕಾರಣಕ್ಕೆ ಅಲ್ಲಿಂದ ಹೊರ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮೆಟಾ ಕಂಪನಿಯಲ್ಲಿ ಲಕ್ಷಾಂತರ ರುಪಾಯಿ ಸಂಬಳ ಗಳಿಸುತ್ತಿದ್ದ ಯುವಕನೊಬ್ಬ ಸಾಫ್ಟ್‌ವೇರ್ ಎಂಜಿನಿಯರ್ ವೃತ್ತಿ ತೊರೆದು ನೂಡಲ್ಸ್ ಸ್ಟಾಲ್ ಆರಂಭಿಸಿದ್ದಾನೆ. ಕಾರ್ಪೋರೇಟ್ ಜೀವನವನ್ನು ತೊರೆದು ಆಹಾರ ಉದ್ಯಮ ಆರಂಭಿಸಿರುವ ಆತನ ನಿರ್ಧಾರ ಆನ್‌ಲೈನ್‌ನಲ್ಲಿ (Viral News) ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಫೇಸ್‌ಬುಕ್ ಕಂಪನಿಯಲ್ಲಿ ಲಕ್ಷಾಂತರ ರುಪಾಯಿ ವೇತನ ಪಡೆಯುತ್ತಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಅಲ್ವಿನ್ ತಾನ್, ಉದ್ಯೋಗವನ್ನು ತೊರೆದು ಸ್ಥಳೀಯ ಮಾರುಕಟ್ಟೆಯಲ್ಲಿ 'ಹಾಕಿಯನ್ ಮೀ' ಎಂಬ ಒಂದು ಬಗೆಯ ನೂಡಲ್ಸ್ ಆಹಾರದ ಬ್ಯುಸಿನೆಸ್ ಆರಂಭಿಸಿದ್ದಾರೆ. ಸಾಫ್ಟ್‌ವೇರ್ ಎಂಜಿನಿಯರಿಂಗ್ ಕೆಲಸವು ಬೋರಿಂಗ್ ಎನ್ನುವ ಕಾರಣದಿಂದ ಬೇಸೆತ್ತು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ವಿಡಿಯೊ ನೋಡಿ:
ವೃತ್ತಿ ಬದಲಾವಣೆಯ ಕುರಿತು ಮಾತನಾಡಿದ ಅವರು, ʼʼಸಾಫ್ಟ್‌ವೇರ್ ಎಂಜಿನಿಯರಿಂಗ್ ಎನ್ನುವುದು ನೀರಸ ವೃತ್ತಿ. ದೊಡ್ಡ ಕಂಪನಿಗಳಲ್ಲಿ ಉದ್ಯೋಗ ಕಡಿತ ಹಾಗೂ ತಂಡಗಳ ಪುನರ್‌ರಚನೆಯಿಂದ ಬೇಸರಗೊಂಡಿದ್ದೆʼʼ ಎಂದು ಅಲ್ವಿನ್ ಹೇಳಿದ್ದಾರೆ. ʼʼಐಟಿ ಉದ್ಯೋಗದಲ್ಲಿದ್ದಾಗ ಈಗಿನ ಉದ್ಯೋಗಕ್ಕಿಂತ 2ರಿಂದ 3 ಪಟ್ಟು ಹೆಚ್ಚು ಹಣ ಕೈ ಸೇರುತ್ತಿತ್ತು. ಆದರೆ, ಈಗ ಸಿಗುತ್ತಿರುವ ನೆಮ್ಮದಿ ಅದಕ್ಕಿಂತ ದೊಡ್ಡದು ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಧ್ಯರಾತ್ರಿ ಆಟೋದಲ್ಲಿ ಸಂಚರಿಸಿದ ಮಹಿಳೆ ಹೇಳಿದ್ದೇನು?
ವೇತನದ ಬಗ್ಗೆ ಕೇಳಿದಾಗ ಅವರು ನಗುತ್ತಾ ಪ್ರತಿಕ್ರಿಯಿಸಿ, "ಹೋಲಿಸಲು ಸಾಧ್ಯವಿಲ್ಲ. ದೈಹಿಕವಾಗಿ ಇದು ಕಷ್ಟದ ಕೆಲಸ ಆಗಿದ್ದರೂ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುವುದಾಗಿʼʼ ಹೇಳಿಕೊಂಡಿದ್ದಾರೆ. ತಮ್ಮ ಗೆಳತಿಯೊಂದಿಗೆ ಸೇರಿ ಈ ಆಹಾರದ ಅಂಗಡಿಯನ್ನು ನಡೆಸುತ್ತಿದ್ದು ಇತರರಿಗೆ ಸಲಹೆ ನೀಡುತ್ತ ಪರಿಶ್ರಮದ ಕೆಲಸಕ್ಕೆ ಒತ್ತು ಕೊಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿ, ʼʼಅಷ್ಟು ಸುಲಭವಾಗಿ ಯಾವುದು ಬಿಟ್ಟುಕೊಡಬೇಡಿ. ನಿಮಗಾಗಿ ಯಾವಾಗಲೂ ಬಾಗಿಲುಗಳು ತೆರೆದಿರುತ್ತವೆʼʼ ಎಂದಿದ್ದಾರೆ. ಈ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವು ಇತರರಿಗೆ ಸ್ಫೂರ್ತಿ ಎಂದು ಬರೆದುಕೊಂಡಿದ್ದಾರೆ. ಒಬ್ಬರು, ʼʼನಿಜಕ್ಕೂ ಈ ನಿಮ್ಮ ನಿರ್ಧಾರಕ್ಕೆ ಮೆಚ್ಚಲೇ ಬೇಕುʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.