ಭುವನೇಶ್ವರ, ಮೇ 31: ಹಾವು ಅಂದ್ರೆ ಎಂಥ ಧೈರ್ಯವಂತರು ಕೂಡ ಮಾರು ದೂರ ಓಡಿ ಹೋಗುತ್ತಾರೆ. ಅದರಲ್ಲೂ ವಿಷಪೂರಿತ ಹಾವು ಅಂದಾಗ ಎಲ್ಲರಲ್ಲೂ ಆತಂಕ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಕಡೆ ವಿಷ ಸರ್ಪವೊಂದು 4 ಗಂಟೆಗಳ ಕಾಲ ಪಾರ್ಶ್ವವಾಯು ಪೀಡಿತ ವೃದ್ಧನ ಕೈಗೆ ಸುತ್ತಿಕೊಂಡಿತ್ತು. ಅಲುಗಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಆ ವೃದ್ಧ ಸರ್ಪದೊಂದಿಗೆ ಬರೋಬ್ಬರಿ 4 ಗಂಟೆ ಕಳೆದಿದ್ದಾರೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
ಒಡಿಶಾದ ಬೌಧ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪಾರ್ಶ್ವವಾಯು ಪೀಡಿತ ಕೃಷ್ಣ ಚಂದ್ರ ಸಾಹು, ಮಲಗಿದ್ದಾಗ ವಿಷ ಪೂರಿತ ಹಾವು ಕೋಣೆಯೊಳಗೆ ಸೇರಿಕೊಂಡಿದೆ. ದೇಹದ ಚಲನವಲನ ಕಳೆದುಕೊಂಡಿದ್ದ ಕೃಷ್ಣ ಚಂದ್ರ ಸಾಹು ಸಾವಿನಿಂದ ಪವಾಡಸದೃಶವಾಗಿ ಪಾರಾಗಿದ್ದಾರೆ.
ಕುಟುಂಬ ಸದಸ್ಯರ ಪ್ರಕಾರ, ಸಾಹು ಅವರ ಕೋಣೆಯ ಕಿಟಕಿಯನ್ನು ರಾತ್ರಿಯಿಡೀ ತೆರೆದಿಡಲಾಗಿತ್ತು. ತಡರಾತ್ರಿ ಹಾವು ಮನೆಗೆ ಪ್ರವೇಶಿಸಿ ಸಾಹು ಅವರ ಹಾಸಿಗೆಗೆ ಎಂಟ್ರಿ ನೀಡಿದೆ. ಹಾವು ತನ್ನ ದೇಹದ ಮೇಲೆ ಹರಿದಾಡುತ್ತಿರುವುದು ಸಾಹು ಅವರಿಗೆ ತಕ್ಷಣವೇ ತಿಳಿದಿದೆ. ಆದರೆ, ಪಾರ್ಶ್ವವಾಯು ಸಮಸ್ಯೆಯಿಂದಾಗಿ ಅವರಿಗೆ ತಕ್ಷಣವೇ ಎದ್ದು ಓಡಲು ಸಾಧ್ಯವಾಗಲಿಲ್ಲ.
ಪ್ರಿಯಕರನಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಯುವತಿ
ಸಾಹು ಸ್ವಲ್ಪ ಚಲನೆಗೆ ಪ್ರಯತ್ನಿಸಿದಾಗ ಪರಿಸ್ಥಿತಿಗೆ ಆತಂಕ ತಿರುವು ಸಿಕ್ಕಿತು. ಈ ಸಂದರ್ಭದಲ್ಲಿ ಹಾವು ಅವರ ಒಂದು ಕೈಗೆ ಸುತ್ತಿಕೊಂಡಿದ್ದು ದೇಹದ ಇನ್ನೊಂದು ಭಾಗವು ಹತ್ತಿರದ ಕುರ್ಚಿಯ ಸುತ್ತಲೂ ಸುತ್ತಿಕೊಂಡಿತು. ಹಾವಿನ ಆಕ್ರೋಶಕ್ಕೆ ಕಾರಣವಾಗಿ ಪ್ರಾಣಕ್ಕೇ ಕುತ್ತು ತರಬಹುದು ಎಂದು ಅರಿತ ಸಾಹು, ತೀವ್ರ ಆತಂಕದ ನಡುವೆಯೂ ನಿಶ್ಚಲವಾಗಿ ಮಲಗಿದ್ದರು.
ತಾಳ್ಮೆಯೇ ಅವರ ಪ್ರಾಣ ಉಳಿಸಿದೆ. ಬೆಳಗಿನ ಜಾವ ಕೋಣೆಗೆ ಬಂದ ಕುಟುಂಬಸ್ಥರು ಈ ದೃಶ್ಯವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಆದರೆ ಯಾವುದೇ ಗಡಿಬಿಡಿ ಮಾಡದೆ ಹಾವನ್ನು ಕೆಣಕದೆ ಸೂಕ್ತ ಸಮಯಕ್ಕಾಗಿ ಕಾದು ನಿಂತರು. ಕುಟುಂಬದ ಈ ಜಾಣ್ಮೆಯ ನಡೆ ಕೊನೆಗೂ ಕೈಹಿಡಿಯಿತು. ಸುಮಾರು ನಾಲ್ಕು ಗಂಟೆಗಳ ನಿರಂತರ ಆತಂಕದ ನಂತರ, ಕುಟುಂಬಸ್ಥರು ಹಾವಿಗೆ ಯಾವುದೇ ಅಪಾಯವಾಗದಂತೆ ಸಾಹು ಅವರ ಕೈಯಿಂದ ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಈ ದೃಶ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಹಲವರು ಇದನ್ನು ʼʼಪವಾಡʼʼ ಎಂದು ಕರೆದಿದ್ದಾರೆ.