Viral Video: ಅಬ್ಬಾಬ್ಬಾ... ರಾಂಚಿಯ ಈ ಪ್ರದೇಶದಲ್ಲಿ ದೆವ್ವಗಳ ಮೆರವಣಿಗೆ; ಬೆಚ್ಚಿಬೀಳಿಸುವ ವಿಡಿಯೊ ವೈರಲ್
ಜಾರ್ಖಂಡ್‍ನ ರಾಜಧಾನಿ ರಾಂಚಿಯಿಂದ 70 ಕಿ.ಮೀ ದೂರದಲ್ಲಿರುವ ತಮಾರ್ ಬ್ಲಾಕ್‍ನಲ್ಲಿ ದೆವ್ವಗಳ ಮೆರವಣಿಗೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಅರೇ ಇದೇನಿದು ಎಂದು ಬೆಚ್ಚಿಬೀಳಬೇಡಿ, ಇದು ಅಲ್ಲಿನ ಜನರ ಸಂಪ್ರದಾಯವಂತೆ. ಈ ಮೆರವಣಿಗೆಯನ್ನು ಅವರ ಕುಟುಂಬದ ಸಂತೋಷಕ್ಕಾಗಿ ಮಾಡಲಾಗುತ್ತದೆಯಂತೆ.


ರಾಂಚಿ: ಭಾರತ ಹಬ್ಬ-ಹರಿದಿನಗಳು, ಶಾಸ್ತ್ರ-ಸಂಪ್ರದಾಯಗಳನ್ನು ಹೆಚ್ಚು ಆಚರಿಸುವಂತಹ ದೇಶವಾಗಿದೆ. ಇಲ್ಲಿನ ಒಂದೊಂದು ಪ್ರದೇಶದಲ್ಲಿ ಒಂದೊಂದು ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಇದೀಗ ಜಾರ್ಖಂಡ್‍ನ ರಾಜಧಾನಿ ರಾಂಚಿಯಲ್ಲಿ ದೆವ್ವಗಳ ಮೆರವಣಿಗೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಇದೇನಿದು ದೈವ-ಭೂತ ಈಗ ಇದೆಯಾ ಎಂದೆಲ್ಲಾ ತಲೆಕೆಡಿಸಿಕೊಳ್ಳಬೇಡಿ! ಈ ಮೆರವಣಿಗೆ ತಮಾರ್ ಬ್ಲಾಕ್ ಪ್ರದೇಶದಲ್ಲಿ ನಡೆದಿದ್ದು, ಮೆರವಣಿಗೆಯ ವೇಳೆ ಜನರು ಮುಖಕ್ಕೆ ದೆವ್ವದ ಹಾಗೇ ಮಾಸ್ಕ್ ಧರಿಸಿ ಕೈಯಲ್ಲಿ ಕೋಲು ಹಿಡಿದು ವಿವಿಧ ಪ್ರದೇಶಗಳಲ್ಲಿ ನೃತ್ಯ ಮಾಡಿದ್ದಾರೆ.ಇದು ಅಲ್ಲಿನ ಒಂದು ಆಚರಣೆಯಂತೆ.
ಯಾವ ಸಮಯದಲ್ಲಿ ಈ ದೆವ್ವಗಳ ಮೆರವಣಿಗೆ ನಡೆಯುತ್ತದೆ?
ವಾಸ್ತವವಾಗಿ, ಪ್ರತಿ ವರ್ಷ ಚೈತ್ರ ಮಾಸದಲ್ಲಿ, ದೆವ್ವಗಳ ಮೆರವಣಿಗೆ ಇಲ್ಲಿ ನಡೆಯುತ್ತದೆಯಂತೆ. ಇದರಲ್ಲಿ ಶಿವನ ನೂರಾರು ಭಕ್ತರು ಭಾಗವಹಿಸುತ್ತಾರೆ. ಹಾಗಾಗಿ ಇದನ್ನು ಶಿವನ ಮೆರವಣಿಗೆ ಎಂದು ಸಹ ಕರೆಯುತ್ತಾರೆ. ಇದು ಅಲ್ಲಿನ ಜನರ ಸಂಪ್ರದಾಯ. ಇದೆಲ್ಲವನ್ನೂ ಜನರು ಅವರ ಕುಟುಂಬದ ಸಂತೋಷಕ್ಕಾಗಿ ಮಾಡುತ್ತಾರಂತೆ. ಶಿವನ ಮೆರವಣಿಗೆಯಲ್ಲಿ ಜನರು ದೆವ್ವಗಳಂತೆ ವೇಷ ಧರಿಸುತ್ತಾರೆ. ಅವರ ಭಾಷೆಯಲ್ಲಿ ಇದಕ್ಕೆ ಕೋಕಾ ಎಂದು ಕರೆಯುತ್ತಾರೆ ಎಂದು ಹೇಳಲಾಗಿದೆ.
ದೆವ್ವದ ಮೆರವಣಿಗೆಯ ವಿಡಿಯೊ ಇಲ್ಲಿದೆ ನೋಡಿ...
#WATCH | Ranchi, Jharkhand | Visuals of ghost (bhoot) procession in Tamar of Ranchi.
— ANI (@ANI) April 13, 2025
In the end of Chaitra month every year, ghost (boot) procession takes place in Tamar town of Ranchi district, where hundreds of devotees of Lird Shiva participate in the procession. It is… pic.twitter.com/lVJ4Ul4Y6q
ಇದನ್ನು ರಾಂಚಿಯ ಜನರು ಹಲವು ತಲೆಮಾರುಗಳಿಂದ ಆಚರಿಸುತ್ತಾ ಬಂದಿದ್ದಾರಂತೆ. ಈ ಹಬ್ಬವನ್ನು ಚೈತ್ರ ಪರ್ವ ಎಂದೂ ಕರೆಯುತ್ತಾರೆ. ಚೈತ್ರ ಮಾಸದಲ್ಲಿ ನಡೆಯುವ ಈ ಮೆರವಣಿಗೆಯು ಅನೇಕ ಭಕ್ತರ ಆಕರ್ಷಣೆಯ ಕೇಂದ್ರವಾಗಿದೆ. ಇದರಲ್ಲಿ ಪುರುಷರು ಅಸ್ಥಿಪಂಜರಗಳಂತ ವೇಷ ಧರಿಸಿ ದೆವ್ವಗಳಂತೆ ನೃತ್ಯ ಮಾಡುತ್ತಾರಂತೆ.ಅದು ಅಲ್ಲದೇ, ಈ ಮೆರವಣಿಗೆಯಲ್ಲಿ ನೂರಾರು ಭಕ್ತರು ಭಾಗವಹಿಸುತ್ತಾರೆ.
ಮಹಾಶಿವರಾತ್ರಿಯ ಸಂದರ್ಭದಲ್ಲಿ ರಾಂಚಿ ಮತ್ತು ದಿಯೋಘರ್‍ನ ಪಹರಿ ದೇವಾಲಯದಲ್ಲಿ ಇದೇ ರೀತಿಯ ಶಿವ ಮೆರವಣಿಗೆಗಳನ್ನು ನಡೆಸಲಾಗುತ್ತದೆ. ಇದರಲ್ಲಿ ಸಾವಿರಾರು ಜನರು ಭಾಗವಹಿಸುತ್ತಾರೆ. ಶಿವನ ಮೆರವಣಿಗೆಯನ್ನು ನಡೆಸುವ ಮೊದಲು ಪ್ರಾರ್ಥನೆಗಳನ್ನು ನಡೆಸಲಾಗುತ್ತದೆ. ಇದರ ನಂತರ, ಅದನ್ನು ಸ್ತಬ್ಧಚಿತ್ರದ ರೂಪದಲ್ಲಿ ಮೆರವಣಿಗೆ ಮಾಡಲಾಗುತ್ತದೆ.
ಕೋಕಾ ಹಬ್ಬದ ವಿಶೇಷತೆ
ಕೋಕಾ ಹಬ್ಬದ ಭಾಗವಾಗಿರುವ ಈ ಆಚರಣೆಯನ್ನು ರಾಜ್ಯ ರಾಜಧಾನಿ ರಾಂಚಿಯಿಂದ 70 ಕಿ.ಮೀ ದೂರದಲ್ಲಿರುವ ತಮಾರ್ ಬ್ಲಾಕ್ ಮತ್ತು ಹತ್ತಿರದ ಹಳ್ಳಿಗಳಲ್ಲಿ ಸಾವಿರಾರು ಜನರು ಆಚರಿಸುತ್ತಾರೆ. ಈ ಹಬ್ಬವನ್ನು ಮೂರು ತಿಂಗಳ ಕಾಲ ಆಚರಿಸಲಾಗುತ್ತದೆ. ಹೋಳಿ ಹಬ್ಬದ ನಂತರ ಬೆಳೆಗಳ ಕೊಯ್ಲು ಶುರುವಾಗುತ್ತಿದ್ದಂತೆ ಹಬ್ಬವನ್ನು ಆಚರಿಸುತ್ತಾರಂತೆ. ದಂತಕಥೆಯ ಪ್ರಕಾರ, ಉತ್ತಮ ಬೆಳೆಗಳಿಗಾಗಿ ದೇವರುಗಳನ್ನು ಸಮಾಧಾನಪಡಿಸಲು ಜನರು ಕೋಕಾ ಹಬ್ಬವನ್ನು ಆಚರಿಸಲು ಶುರುಮಾಡಿದ್ದಾರಂತೆ.ಸಮಯ ಕಳೆದಂತೆ, ಜನರು ಇತರ ವಿಷಯಗಳಿಗಾಗಿ ಅಂದರೆ ಆಸ್ತಿ, ಉತ್ತಮ ಆರೋಗ್ಯ ಮತ್ತು ಸಂಪತ್ತಿಗಾಗಿ ಪ್ರಾರ್ಥಿಸಲು ಶುರುಮಾಡಿದ್ದಾರೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ:Viral Video: ಬಹುಮಹಡಿ ಕಟ್ಟಡದಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ- ಈ ವಿಡಿಯೊ ನೋಡಿದ್ರೆ ಎದೆ ಝಲ್ಲೆನ್ನುತ್ತೆ!
ಉತ್ಸವದಲ್ಲಿ ಭಾಗವಹಿಸುವವರು ಮೊದಲು ನದಿಯಲ್ಲಿ ಸ್ನಾನ ಮಾಡಿ ನಂತರ ದೆವ್ವಗಳ ವೇಷವನ್ನು ಧರಿಸುತ್ತಾರೆ. ನಂತರ ಗ್ರಾಮದಲ್ಲಿರುವ ಶಿವ ದೇವಾಲಯಕ್ಕೆ ಮೆರವಣಿಗೆಯಲ್ಲಿ ಡೋಲು ಬಾರಿಸುವುದು, ಮಂತ್ರಗಳನ್ನು ಪಠಿಸುವುದು ಮತ್ತು ನೃತ್ಯ ಮಾಡುವ ಮೂಲಕ ಸಾಗುತ್ತಾರೆ. ಮಾನವಶಾಸ್ತ್ರಜ್ಞರ ಪ್ರಕಾರ, ಕೋಕಾ ಉತ್ಸವವು ನೂರಾರು ವರ್ಷಗಳ ಹಿಂದೆ ಶುರುವಾಗಿತ್ತು.ಆರಂಭದಲ್ಲಿ, ಈ ಹಬ್ಬವನ್ನು ಬುಡಕಟ್ಟು ಜನರು ಮಾತ್ರ ಆಚರಿಸುತ್ತಿದ್ದರು. ಈಗ ಇದು ಕೊಯ್ಲಿಗೆ ಸಂಬಂಧಿಸಿದ ಕಾರಣ ಹೆಚ್ಚಿನ ಜನರು ಇದನ್ನು ಆಚರಿಸುತ್ತಾರೆ. ಶಿವನನ್ನು ಸಮಾಧಾನಪಡಿಸಲು ಜನರು ದೆವ್ವದ ವೇಷ ಹಾಕುತ್ತಾರಂತೆ.