ದಾವಣಗೆರೆ: ಪ್ರಕೃತಿಯಲ್ಲಿ ಕೆಲವೊಮ್ಮೆ ವಿಚಿತ್ರ ಘಟನೆಗಳು ಸಂಭವಿಸುತ್ತಿರುತ್ತವೆ. ಇನ್ನೂ ಈ ಕಣ್ಣಲ್ಲಿ ಏನೇನು ನೋಡ್ಬೇಕು ಎಂಬಂತೆ ದಾವಣಗೆರೆಯಲ್ಲೊಂದು (Davangere) ಅಚ್ಚರಿಯ ಘಟನೆ ನಡೆದಿದೆ. ಸಾಮಾನ್ಯವಾಗಿ ಕೋಳಿ ಬಿಳಿ ಮೊಟ್ಟೆ ಇಡುತ್ತವೆ. ನಾಟಿ ಕೋಳಿಯ ಮೊಟ್ಟೆ ಸ್ವಲ್ಪ ಕಂದು ಮಿಶ್ರಿತ ಬಿಳಿ ಬಣ್ಣದಲ್ಲಿರುತ್ತದೆ. ಆದರೆ ದಾವಣಗೆರೆಯಲ್ಲಿ ನಾಟಿ ಕೋಳಿಯೊಂದು ನೀಲಿ ಬಣ್ಣದ ಮೊಟ್ಟೆಯಿಟ್ಟಿದ್ದು (Blue colour egg) ಎಲ್ಲರಲ್ಲೂ ಅಚ್ಚರಿಗೆ ದೂಡಿದೆ. ದಾವಣಗೆರೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಹೌದು, ಸಾಕಿದ ನಾಟಿ ಕೋಳಿಯೊಂದು ವಿಚಿತ್ರವಾಗಿ ನೀಲಿ ಬಣ್ಣದ ಮೊಟ್ಟೆಯನ್ನಿಟ್ಟಿದೆ. ಈ ಗ್ರಾಮದ ನಿವಾಸಿಯಾಗಿರುವ ಸೈಯದ್ ನೂರ್ ಎಂಬ ವ್ಯಕ್ತಿಯ ಮನೆಯಲ್ಲಿ ಈ ಘಟನೆ ನಡೆದಿದೆ. ನಾಟಿ ಕೋಳಿಯೊಂದು ನೀಲಿ ಬಣ್ಣದ ಮೊಟ್ಟೆ ಇಡುವ ಮೂಲಕ ಎಲ್ಲರಲ್ಲೂ ಅಚ್ಚರಿ ತರಿಸಿದೆ. ಸೈಯದ್ ನೂರ್ ಅವರು ಸುಮಾರು 10 ನಾಟಿ ಕೋಳಿಗಳನ್ನು ಸಾಕುತ್ತಿದ್ದಾರೆ. ಇವುಗಳಿಡುವ ಮೊಟ್ಟೆಗಳನ್ನು ಮಾರಾಟ ಮಾಡುತ್ತಿದ್ದರು. ಇದುವರೆಗೂ ಬಿಳಿ ಬಣ್ಣದ ಮೊಟ್ಟೆಗಳನ್ನಷ್ಟೇ ಇಟ್ಟಿದೆ. ಆದರೆ ಈ ಬಾರಿ ಒಂದು ಕೋಳಿ ನೀಲಿ ಬಣ್ಣದ ಮೊಟ್ಟೆಯಿಡುವ ಮೂಲಕ ಎಲ್ಲರ ಹುಬ್ಬೇರಿಸಿದೆ.
ಇದನ್ನೂ ಓದಿ: Guruvayur Temple: ಗುರುವಾಯೂರು ದೇವಾಲಯದ ಪವಿತ್ರ ಕೊಳದಲ್ಲಿ ರೀಲ್ಸ್! ಶುದ್ಧೀಕರಣಕ್ಕೆ ಮುಂದಾದ ಅರ್ಚಕರು
ಬೆಳಗ್ಗೆದ್ದು ಕೋಳಿ ಗೂಡಿಗೆ ಹೋದ ಸೈಯದ್ ನೂರ್ ಅವರಿಗೆ ಗಾಬರಿಯಾಗಿದೆ. ಕೂಡಲೇ ಅವರು ಪಶುಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನೀಲಿ ಬಣ್ಣದ ಮೊಟ್ಟೆ ನೋಡಿ ಅಧಿಕಾರಿಗಳು ಕೂಡ ಅಚ್ಚರಿ ಪಟ್ಟಿದ್ದಾರೆ. ಈ ರೀತಿ ಮೊಟ್ಟೆ ನೀಲಿ ಬಣ್ಣ ಇರಲು ಕಾರಣವೇನು ಎಂಬುದರ ಬಗ್ಗೆ ಅಧಿಕಾರಿಗಳು ಪರೀಕ್ಷೆ ನಡೆಸಿದ್ದಾರೆ. ಮೆದೊಜೀರಕಾಂಗದಲ್ಲಿ ಬಿಲಿವರ್ಡಿನ್ ಎಂಬ ವರ್ಣದ್ರವ್ಯದಿಂದ ಈ ಬಣ್ಣ ಬಂದಿರಬಹುದು ಎಂದು ಅಂದಾಜಿಸಲಾಗಿದೆ.
ಅಂದಹಾಗೆ ಮೊಟ್ಟೆಯ ಗಾತ್ರ ಎಲ್ಲ ಮೊಟ್ಟೆಗಳಂತೆಯೇ ಇದೆ. ಮೇಲ್ಮೈ ಬಣ್ಣ ಮಾತ್ರ ನೀಲಿ ಬಣ್ಣದಲ್ಲಿದೆ. ಮುಂದಿನ ದಿನಗಳಲ್ಲೂ ಈ ಕೋಳಿ ನೀಲಿ ಬಣ್ಣದ ಮೊಟ್ಟೆಯನ್ನಿಟ್ಟರೆ ವೈಜ್ಞಾನಿಕ ಅಧ್ಯಯನಕ್ಕೆ ಒಳಪಡಿಸಬೇಕಾಗುತ್ತದೆ ಎಂದು ಚನ್ನಗಿರಿ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.