ಜೈಪುರ, ಫೆ. 19: ರೀಲ್ಸ್ ಗೀಳು ಯುವ ಜನರಲ್ಲಿ ಇತ್ತೀಚೆಗೆ ಹೆಚ್ಚಾಗಿದ್ದು, ಇದು ಜೀವಕ್ಕೆ ಅಪಾಯ ಉಂಟು ಮಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಬೇಕು ಎನ್ನುವ ಉದ್ದೇಶ ದಿಂದ ಯುವಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಹುಚ್ಚಾಟ ಮೆರೆಯುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ರಾಜಸ್ಥಾನದ ವ್ಯಕ್ತಿಯೊಬ್ಬ ರೀಲ್ಸ್‌ಗಾಗಿ ಚಿಕ್ಕ ಮಗುವಿಗೆ ಸಿಗರೇಟ್ ಮತ್ತು ಮದ್ಯ ನೀಡಿದ್ದಾನೆ. ಈ ದೃಶ್ಯಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದು ಹೆಚ್ಚು ವೀವ್ಸ್ ಮತ್ತು ಲೈಕ್ಸ್‌ಗಾಗಿ ಇಷ್ಟು ಕೆಳಮಟ್ಟಕ್ಕೆ ಇಳಿಯಬೇಕೆ? ಎಂದು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜಸ್ಥಾನದಲ್ಲಿ ಈ ಘಟನೆ ನಡೆದಿದ್ದು ಪುಟ್ಟ ಮಗುವಿಗೆ ಸಿಗರೇಟ್ ಮತ್ತು ಕ್ಯಾನ್‌ನಲ್ಲಿದ್ದ ಮದ್ಯವನ್ನು ನೀಡಿದ್ದಾನೆ. ವಿಡಿಯೊದಲ್ಲಿ ಮೋಟಾರ್ ಸೈಕಲ್‌ನಲ್ಲಿ ಕುಳಿತಿದ್ದ ವ್ಯಕ್ತಿ ಚಿಕ್ಕ ಮಗುವಿಗೆ ಬಿಯರ್ ಕ್ಯಾನ್ ಮತ್ತು ಸಿಗರೇಟ್ ನೀಡುತ್ತಿರುವುದು ಕಂಡು ಬಂದಿದೆ. ಮಗು ಸಿಗರೇಟ್ ಕೈಯಲ್ಲಿ ಹಿಡಿದುಕೊಂಡು ಸೇದಲು ಯತ್ನಿಸಿದೆ. ಸ್ವಲ್ಪ ಸಮಯದ ನಂತರ ಜೋರಾಗಿ ಕೆಮ್ಮಲು ಆರಂಭಿಸಿದೆ.
ವಿಡಿಯೊ ನೋಡಿ:
ಮೋಟಾರ್ ಸೈಕಲ್‌ನ ನೋಂದಣಿ ಸಂಖ್ಯೆ, RJ25 SS 8392 ಎಂದು ವಿಡಿಯೊದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ನೆಟ್ಟಿಗರು ಈ ವ್ಯಕ್ತಿಯನ್ನು ಪತ್ತೆ ಹಚ್ಚಲು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಈ ದೃಶ್ಯವು ನೋಡುಗರನ್ನು ಬೆಚ್ಚಿಬೀಳಿಸುವಂತಿದ್ದು, ಮಗುವಿನ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ನೆಟ್ಟಿಗರು ಪ್ರಶ್ನಿಸಿದ್ದಾರೆ.
ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!
ದಿವ್ಯಾ ಗಂಡೋಯ್ರಾ ಟಂಡನ್ ಎನ್ನುವವರು ಆನ್‌ಲೈನ್‌ನಲ್ಲಿ ಈ ವಿಡಿಯೊ ಶೇರ್ ಮಾಡಿದ್ದು ರಾಜಸ್ಥಾನ ಪೊಲೀಸರ ಅಧಿಕೃತ ಹ್ಯಾಂಡಲ್‌ಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಅಪ್ರಾಪ್ತ ವಯಸ್ಕರಿಗೆ ಮದ್ಯ ಮತ್ತು ತಂಬಾಕು ಉತ್ಪನ್ನಗಳನ್ನು ಒದಗಿಸುವುದು ಭಾರತೀಯ ಕಾನೂನಿನಡಿ ಶಿಕ್ಷಾರ್ಹ ಅಪರಾಧ. ʼʼಪೋಷಕರು ಕೂಡ ಶಿಕ್ಷಣಕ್ಕಿಂತ ವೈರಲ್ ಆಗುವುದೇ ಜೀವನ ಎಂದು ನಂಬಿದಂತಿದೆ. ಮಕ್ಕಳಿಗೆ ಮೊಬೈಲ್ ನೀಡುವ ಮುನ್ನ ಎಚ್ಚೆತ್ತುಕೊಳ್ಳಬೇಕುʼʼ ಎಂದು ಹಲವರು ಎಚ್ಚರಿಸಿದ್ದಾರೆ. ಮತ್ತೊಬ್ಬರು ʼʼಈ ಕೃತ್ಯ ಅಸಹ್ಯವಾಗಿದೆʼʼ ಎಂದು ಬರೆದುಕೊಂಡಿದ್ದಾರೆ.