ನವದೆಹಲಿ, ಫೆ. 18: ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಬೇಕು ಎನ್ನುವ ಉದ್ದೇಶದಿಂದ ಯುವ ಜನತೆ ನಾನಾ ಸಾಹಸಕ್ಕೆ ಮುಂದಾಗುತ್ತಲೇ ಇರುತ್ತದೆ. ಅಪಾಯಕಾರಿ ಸ್ಟಂಟ್ ಮಾಡುವುದು, ರಸ್ತೆಯಲ್ಲಿ ವೀಲ್ಹಿಂಗ್ ಮಾಡಿ ಅನೇಕ ಅವಘಡಗಳು ನಡೆದಿವೆ. ಅದಕ್ಕೆ ಮತ್ತೊಂದು ಸೇರ್ಪಡೆ ಈ ಘಟನೆ. ಸೋಶಿಯಲ್ ಮೀಡಿಯಾದಲ್ಲಿ ಜಾಗೃತಿ ಮೂಡಿಸಲು ಹೋಗಿ ಯುವತಿಯೊಬ್ಬಳು ಚರಂಡಿಗೆ ಬಿದ್ದಿದ್ದಾಳೆ. ದೆಹಲಿಯ ನಜಾಫ್ ಗಢ್ ಪ್ರದೇಶದಲ್ಲಿ 22 ವರ್ಷದ ಯುವತಿಯ ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡುತ್ತಿರುವಾಗ ಆಯತಪ್ಪಿ ತೆರೆದ ಚರಂಡಿ ಪಾಲಾಗಿದ್ದಾಳೆ. ಹೀಗೆ ಚರಂಡಿಗೆ ಬಿದ್ದ ಯುವತಿಯನು ಭಾವನಾ ಎಂದು ಗುರುತಿಸಲಾಗಿದೆ. ಬಳಿಕ ಪೊಲೀಸರು ಬಂದು ಆಕೆಯನ್ನು ಮೇಲಕ್ಕೆತ್ತಬೇಕಾಯಿತು.
ಭಾವನಾ ತನ್ನ ಮನೆಯ ಹತ್ತಿರವಿರುವ ಚರಂಡಿಯ ಬಳಿ ವಿಡಿಯೊ ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿದೆ. ʼʼಅಪಾಯಕಾರಿ ಸಾಹಸ ಮಾಡಲು ಉದ್ದೇಶಿರಲಿಲ್ಲ. ಮನೆ ಸಮೀಪ ಪ್ರದೇಶದ ಕಳಪೆ ಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸುವುದು ನನ್ನ ಗುರಿ ಆಗಿತ್ತುʼʼ ಎಂದು ಭಾವನಾ ಹೇಳಿದ್ದಾರೆ. ಆದರೆ ವಿಡಿಯೊ ಮಾಡುವಾಗ ಆಯತಪ್ಪಿ ನೇರವಾಗಿ ಚರಂಡಿಗೆ ಬಿದ್ದಿದ್ದಾಳೆ.
ವಿಡಿಯೊ ನೋಡಿ:
ಅದೃಷ್ಟವಶಾತ್, ಆ ಸಮಯದಲ್ಲಿ ದೆಹಲಿ ಪೊಲೀಸ್ ವ್ಯಾನ್ ಆ ಪ್ರದೇಶದ ಮೂಲಕ ಹಾದು ಹೋಗುತ್ತಿತ್ತು. ಯುವತಿಯ ಚೀರಾಟ ಕೇಳಿದಾಗ ಪೊಲೀಸರು ತಕ್ಷಣ ಬಂದು ಹಗ್ಗದ ಸಹಾಯದಿಂದ ಆಕೆಯನ್ನು ಮೇಲಕ್ಕೆ ಎತ್ತಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ದೆಹಲಿ ಪೊಲೀಸರು ಕೂಡ ಈ ವಿಡಿಯೊ ಹಂಚಿಕೊಂಡಿದ್ದು ಒಬ್ಬ ಅಧಿಕಾರಿ ಚರಂಡಿಗೆ ಹಗ್ಗವನ್ನು ಇಳಿಸಿ ಎಚ್ಚರಿಕೆಯಿಂದ ಆಕೆಯನ್ನು ಹೊರಗೆಳೆಯುತ್ತಿರುವುದು ಕಂಡು ಬಂದಿದೆ.
ಬಾಂಗ್ಲಾದೇಶದ ಶಾಂತಿಗಾಗಿ ಭಾರತ ತುಂಡು ತುಂಡಾಗಬೇಕು; ವಿವಾದ ಹೊತ್ತಿಸಿದ ಮಾಜಿ ಸೇನಾ ಜನರಲ್
ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಇಂತಹ ಅಪಾಯಕಾರಿ ಸಾಹಸ ಬೇಕೆ? ಎಂದು ವ್ಯಂಗ್ಯವಾಡಿದ್ದರೆ. ಮತ್ತೊಬ್ಬರು ರೀಲ್ಸ್‌ಗಾಗಿ ಜೀವವನ್ನು ಕಳೆದುಕೊಳ್ಳಬೇಡಿ ಎಂದಿದ್ದಾರೆ. ಕಳೆದ ವಾರವಷ್ಟೇ ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ, ಮೋಹಿನಿ ಎಂಬ 27 ವರ್ಷದ ಯುವತಿ ತನ್ನ ಮನೆಯೊಳಗೆ ವಿಡಿಯೊ ಚಿತ್ರೀಕರಣ ಮಾಡುವಾಗ ಸಾವನ್ನಪ್ಪಿದ್ದರು.