ಮುಂಬೈ, ಮೇ 27: ಮಹಾರಾಷ್ಟ್ರದ ಪುಣೆಯ ಕಲ್ಯಾಣಿನಗರದ ಪೋರ್ಷೆ ಕಾರು ಭೀಕರ ಅಪಘಾತ ಪ್ರಕರಣದ ಪ್ರಮುಖ ಆರೋಪಿ, ಬಿಲ್ಡರ್ ವಿಶಾಲ್ ಅಗರ್ವಾಲ್ ಪುತ್ರ ವಿಶಾಲ್ ಅಗರ್ವಾಲ್‌ಗೆ ಜಾಮೀನು ಸಿಕ್ಕಿದೆ. ಆದರೆ ಬಿಡುಗಡೆ ಆದ ಕೆಲವೇ ದಿನದಲ್ಲಿ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾನೆ. ಜಾಮೀನು ಪಡೆದು ರಿಲೀಸ್ ಆಗಿರುವ ವಿಶಾಲ್ ಅಗರ್ವಾಲ್ ಕುಟುಂಬದೊಂದಿಗೆ ಸೆಲೆಬ್ರೇಟ್ ಮಾಡಿದ್ದಾನೆ. ನೋಟುಗಳ ಹಾರವನ್ನು ಧರಿಸಿ ಸಂಭ್ರಮಿಸಿದ್ದಾನೆ ಎಂದು ಹೇಳಲಾಗುತ್ತಿರುವ ವಿಡಿಯೊವೊಂದು ವೈರಲ್ (Viral News) ಆಗಿದೆ. ಆದರೆ ಈ ವಿಡಿಯೊದ ಅಸಲಿ ಸತ್ಯವೇ ಬೇರೆ ಇದೆ ಎನ್ನುವುದು ತಿಳಿದು ಬಂದಿದೆ.
ವೈರಲ್ ಆದ ವಿಡಿಯೊದಲ್ಲಿ ವಿಶಾಲ್ ಅಗರ್ವಾಲ್ ಮತ್ತು ಅವರ ಪತ್ನಿ "ಮುಂಬೈ ಸೆ ಆಯಾ ಮೇರಾ ದೋಸ್ತ್, ದೋಸ್ತೋ ಸಲಾಮ್ ಕರೋ" ಎಂಬ ಬಾಲಿವುಡ್ ಹಾಡಿಗೆ ಜತೆಯಾಗಿ ಸೇರಿ ನೃತ್ಯ ಮಾಡಿದ್ದಾರೆ. ಇಬ್ಬರೂ ನೋಟುಗಳಿಂದ ಮಾಡಿದ ಹಾರಗಳನ್ನು ಧರಿಸಿರುವುದು ಕಂಡುಬಂದಿದೆ.
ವಿಡಿಯೊ ನೋಡಿ:
ವಿಡಿಯೊ ವೈರಲ್ ಆಗುತ್ತಿದ್ದಂತೆ ನಾಗರಿಕರು ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನೆಯನ್ನು ಎತ್ತಿದ್ದಾರೆ. ಅಪಘಾತ ನಡೆದು ಎರಡು ವರ್ಷಗಳು ಕಳೆದಿದ್ದರೂ ನ್ಯಾಯ ಸಿಕ್ಕಿಲ್ಲ ಎಂದು ಸಂತ್ರಸ್ತರ ಸಂಬಂಧಿಕರು ತೀವ್ರ ಬೇಸರದಲ್ಲಿದ್ದಾರೆ. ಇವರು ಇಲ್ಲಿ ಜಾಮೀನು ಸಿಕ್ಕ ಖುಷಿಯಲ್ಲಿ ಪಾರ್ಟಿ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಪ್ರಿಯಕರನಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಯುವತಿ
ಆದರೆ ಇದೀಗ ವಿಡಿಯೊದ ಸತ್ಯಾ ಸತ್ಯತೆ ಬಯಲಾಗಿದ್ದು ಈ ವಿಡಿಯೊ ಇತ್ತೀಚಿನದಲ್ಲ ಎನ್ನುವುದು ಗೊತ್ತಾಗಿದೆ. ಜಾಮೀನು ಸಿಕ್ಕಿದ್ದಕ್ಕಾಗಿ ಆಚರಿಸಿದ ಸಂಭ್ರಮ ಇದಲ್ಲ. ಅಪಘಾತಕ್ಕೆ ಮುನ್ನವೇ ಕೌಟುಂಬಿಕ ಸಮಾರಂಭವೊಂದರ ಹಳೆಯ ವಿಡಿಯೊ ಇದಾಗಿದೆ. ʼʼವಿಡಿಯೊ ಹಳೆಯದಾಗಿದ್ದರೂ, ಅಪಘಾತದಲ್ಲಿ ಮಡಿದ ಅಶ್ವಿನಿ ಕೋಷ್ಟ ಮತ್ತು ಅನೀಶ್ ಅವಾಧಿಯಾ ಅವರ ಕುಟುಂಬದವರ ನೋವು ಹಾಗೂ ಆಕ್ರೋಶ ಸುಳ್ಳಲ್ಲ. ಅಪಘಾತ ನಡೆದು ಎರಡು ವರ್ಷಗಳು ಕಳೆದಿದ್ದರೂ ನಮಗೆ ಇನ್ನೂ ನ್ಯಾಯ ಸಿಕ್ಕಿಲ್ಲʼʼ ಎಂದು ಸಂತ್ರಸ್ತರ ತಾಯಂದಿರು ಬೇಸರ ಹೊರ ಹಾಕಿದ್ದಾರೆ.
ʼʼಜೈಲಿನಲ್ಲಿದ್ದ ಎಲ್ಲರಿಗೂ ಕ್ರಮೇಣ ಜಾಮೀನು ಸಿಗುತ್ತಿದೆ. ನನ್ನ ಮಗಳನ್ನು ಕೊಂದ ರಾಕ್ಷಸರು ಜಾಮೀನಿನ ಮೇಲೆ ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಕಾನೂನು ಕೇವಲ ಜನ ಸಾಮಾನ್ಯರಿಗೆ. ಪ್ರಭಾವಿ ವ್ಯಕ್ತಿಗಳು ಮಾತ್ರ ಸುಲಭವಾಗಿ ಪಾರಾಗಬಹುದುʼʼ ಎಂದು ನೋವಿನಿಂದ ಹೇಳಿದ್ದಾರೆ.