ಮಹಾರಾಷ್ಟ್ರ,ಅ. 23: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರತ ಮಹಿಳಾ ವೈದ್ಯೆ ಮೇಲೆ ಹಲ್ಲೆ ನಡೆಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ವೈದ್ಯಕೀಯ ಪರೀಕ್ಷೆಗೆ ಪೊಲೀಸರು ಕರೆತಂದ ಆರೋಪಿಯೊಬ್ಬ ಮಹಿಳಾ ವೈದ್ಯಾಧಿಕಾರಿಯೊಬ್ಬರ ಮೇಲೆ ಕಪಾಳಮೋಕ್ಷ ಮಾಡಿದ್ದಾನೆ. ಸದ್ಯ ಈ ಘಟನೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.
ಡಾ. ಶ್ರದ್ಧಾ ಭೂಮ್ರೆ ಕರ್ತವ್ಯದಲ್ಲಿದ್ದಾಗ ತಲೆಗಾಂವ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಸಿಬ್ಬಂದಿಗಳು "ಕದಿರ್ ಅಲಿ ರಜಾಕ್ ಅಲಿ" ಎಂದು ಗುರುತಿಸಲಾದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ವೈದ್ಯಕೀಯ ಪರೀಕ್ಷೆಗಾಗಿ ಕರೆತಂದಿದ್ದರು.
ವಿಡಿಯೋ ನೋಡಿ:
ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡ ನಂತರ ಆರೋಪಿಗೆ ಅಗತ್ಯ ದಾಖಲೆಗಳಿಗೆ ಸಹಿ ಹಾಕಲು ಕೇಳಲಾಗಿದೆ. ಸಹಿ ಮಾಡಿದ ನಂತರ, ಆತ ಡಾ. ಭೂಮ್ರೆ ಕಡೆಗೆ ತಿರುಗಿ ಅವರ ಮೇಲೆ ಏಕಾಏಕಿ ಕಪಾಳಮೋಕ್ಷ ಮಾಡಿದ್ದಾನೆ. ಆ ಕೂಡಲೇ ಹಾಜರಿದ್ದ ಪೊಲೀಸ್ ಸಿಬ್ಬಂದಿ ಮಧ್ಯಪ್ರವೇಶಿಸಿ ಅವರನ್ನು ತಡೆದಿದ್ದಾರೆ. ಈ ದೃಶ್ಯವು ಅಲ್ಲಿದ್ದ ಇತರ ರೋಗಿಗಳು ಮತ್ತು ಆರೋಗ್ಯ ಸಿಬ್ಬಂದಿಯನ್ನು ಆಘಾತಕ್ಕೀಡು ಮಾಡಿತ್ತು.
Viral Video: ಶಿಮ್ಲಾ ಆಸ್ಪತ್ರೆ ಗಲಾಟೆ ಪ್ರಕರಣ; ಪರಸ್ಪರ ಅಪ್ಪಿಕೊಂಡು ಕ್ಷಮೆಯಾಚಿಸಿದ ವೈದ್ಯ-ರೋಗಿ!
ಈ ಘಟನೆ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಆತನನ್ನು ಆರೋಗ್ಯ ಕೇಂದ್ರಕ್ಕೆ ಕರೆತಂದ ಪೊಲೀಸ್ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಸ್ವತ್ರೆಯ ಸಿಬ್ಬಂದಿಗಳು ಒತ್ತಾಯಿಸಿದೆ. ತಮ್ಮ ಬೇಡಿಕೆಗಳು ಈಡೇರುವವರೆಗೆ ಹೊರರೋಗಿ ವಿಭಾಗದ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಮಾಡುವುದಾಗಿ ವೈದ್ಯರು ಎಚ್ಚರಿಕೆ ನೀಡಿದ್ದಾರೆ.