Viral Video: ವಿಮಾನ ಪ್ರಯಾಣದ ವೇಳೆ ಬಟ್ಟೆ ಕಳಚಿ ಕಾಕ್‌ಪಿಟ್‌ಗೆ ನುಗ್ಗಲು ಯತ್ನಿಸಿದ ಮಹಿಳೆ; ಪ್ರಯಾಣಿಕರು ಶಾಕ್
Obscene Behaviour in Flight:ಅಮೆರಿಕದ ವಿಮಾನಯಾನದಲ್ಲಿ ಮಹಿಳೆಯೊಬ್ಬಳು ಪ್ರಯಾಣಿಕರ ಮುಂಭಾಗದಲ್ಲಿ ಸಂಪೂರ್ಣ ಬೆತ್ತಲಾಗಿ ಅಸಭ್ಯವಾಗಿ ವರ್ತಿಸಿದ್ದಾಳೆ. ಅಮೆರಿಕದ ಬಾಲ್ಟಿಮೋರ್‌ನಿಂದ ಮಿಯಾಮಿ ನಗರಕ್ಕೆ ಹೊರಟಿದ್ದ ವಿಮಾನದಲ್ಲಿ ಘಟನೆ ನಡೆದಿದೆ. ವಿಮಾನವು ಮಿಯಾಮಿ ತಲುಪಿದ ಕೂಡಲೇ ಪೊಲೀಸರು ಆಕೆಯನ್ನು ವಶಕ್ಕೆ ಪಡೆದರು.
ಸಾಂದರ್ಭಿಕ ಚಿತ್ರ -
ವಾಷಿಂಗ್ಟನ್, ಸೆ. 15: ಅಮೆರಿಕದ (America) ಬಾಲ್ಟಿಮೋರ್‌ನಿಂದ ಮಿಯಾಮಿ (Miami) ನಗರಕ್ಕೆ ಹೊರಟಿದ್ದ ವಿಮಾನಯಾನವೊಂದರಲ್ಲಿ ಮಹಿಳೆಯೊಬ್ಬಳು ಪ್ರಯಾಣಿಕರ ಮುಂಭಾಗದಲ್ಲಿ ತನ್ನ ಬಟ್ಟೆ ಬಿಚ್ಚಿ ಸಂಪೂರ್ಣ ಬೆತ್ತಲಾಗಿ ಅಸಭ್ಯವಾಗಿ ವರ್ತಿಸಿದ್ದಾಳೆ. ಈ ಘಟನೆಯಿಂದ ಪ್ರಯಾಣಿಗರು ಗಲಿಬಿಲಿಗೊಂಡರು. ಮಹಿಳೆಯ ಈ ವರ್ತನೆಯಿಂದ ಆತಂಕಗೊಂಡ ವಿಮಾನದ ಸಿಬ್ಬಂದಿ ತಕ್ಷಣವೇ ಕಾಕ್‌ಪಿಟ್‌ಗೆ ಮಾಹಿತಿ ನೀಡಿ, ತುರ್ತು ರಕ್ಷಣಾ ಪಡೆಯ ನೆರವನ್ನು ಕೋರಿದರು.
ವಿಮಾನದಲ್ಲುಂಟಾದ ಈ ಗೊಂದಲವು ಎಷ್ಟೊಂದು ಗಂಭೀರವಾಗಿತ್ತೆಂದರೆ, ವಿಮಾನದ ಮುಖ್ಯ ಪರಿಚಾರಕಿ ತಕ್ಷಣವೇ ಕಾಕ್‌ಪಿಟ್ ಸಿಬ್ಬಂದಿಯನ್ನು ಎಚ್ಚರಿಸಿದ್ದಾರೆ. ವಿಮಾನವು ತನ್ನ ನಿಗದಿತ ಗಮ್ಯಸ್ಥಾನದ ಕಡೆಗೆ ಹಾರಾಟವನ್ನು ಮುಂದುವರಿಸುತ್ತಿರುವಾಗಲೇ, ವಿಮಾನದ ಪೈಲಟ್‌ಗಳು ಹಾಗೂ ವಿಮಾನಯಾನ ಸಂಸ್ಥೆಯ ಕಾರ್ಯಾಚರಣಾ ಕೇಂದ್ರದ ನಡುವೆ ಈ ಭದ್ರತಾ ಬಿಕ್ಕಟ್ಟಿನ ಕುರಿತು ನಿರಂತರ ವೈರ್‌ಲೆಸ್ ಸಂವಹನ ನಡೆದಿದೆ.
Woman strips naked in flight, performs 'explicit, indecent' acts in full view of other passengers pic.twitter.com/TobyQggmS6
— D. Scott @eclipsethis2003 (@eclipsethis2003) September 14, 2026
ಅಮೆರಿಕನ್ ಏರ್‌ಲೈನ್ಸ್‌ನ ಇಂಟಿಗ್ರೇಟೆಡ್ ಆಪರೇಷನ್ಸ್ ಸೆಂಟರ್‌ಗೆ ರವಾನಿಸಲಾದ ಎಸಿಎಆರ್‌ಎಸ್ (ACARS) ಸಂದೇಶದ ಪ್ರಕಾರ, 9ಡಿ ಸೀಟಿನಲ್ಲಿ ಕುಳಿತಿದ್ದ ಮಹಿಳೆ ತನ್ನ ಬಟ್ಟೆಗಳನ್ನು ಕಳಚಿ ಅಸಭ್ಯವಾಗಿ ವರ್ತಿಸಿದ್ದಾಳೆ. ಈ ಘಟನೆಯ ಬಗ್ಗೆ ಸಿಬ್ಬಂದಿಯು ಕಾರ್ಯಾಚರಣಾ ಕೇಂದ್ರಕ್ಕೆ ಮಾಹಿತಿ ನೀಡಿ, ವಿಮಾನ ಬಂದಿಳಿದ ಕೂಡಲೇ ಕಾನೂನು ಜಾರಿ ಅಧಿಕಾರಿಗಳನ್ನು ನಿಯೋಜಿಸುವಂತೆ ಕೋರಿದರು.
ಆದರೆ ವಿಮಾನದ ಸಿಬ್ಬಂದಿಯು ಮಾರ್ಗ ಬದಲಾಯಿಸದೆ ಫ್ಲೋರಿಡಾದತ್ತ ಪ್ರಯಾಣ ಮುಂದುವರಿಸಿದರು. ವಿಮಾನವು ಮಿಯಾಮಿ ತಲುಪಿದ ಕೂಡಲೇ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದರು. ಸ್ಥಳೀಯ ಕಾಲಮಾನ ರಾತ್ರಿ ಸುಮಾರು 11:23ಕ್ಕೆ ವಿಮಾನವು ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಎನ್‍ನಲ್ಲಿರುವ ಗೇಟ್ ಡಿ2ನಲ್ಲಿ ಬಂದಿಳಿಯಿತು.
ಸೆಪ್ಟೆಂಬರ್ 11ರಂದು ಬಾಲ್ಟಿಮೋರ್‌ನಿಂದ ಮಿಯಾಮಿಗೆ ಹೊರಟಿದ್ದ ಅಮೆರಿಕನ್ ಏರ್‌ಲೈನ್ಸ್‌ನ ಎಎ1779 ವಿಮಾನದಲ್ಲಿ ನಡೆದ ಈ ಘಟನೆ ಎಸಿಎಆರ್‌ಎಸ್ ಸಂವಹನದ ಮೂಲಕ ಬೆಳಕಿಗೆ ಬಂದಿದೆ. ವಿಮಾನದ ಸಿಬ್ಬಂದಿ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಿದರು ಮತ್ತು ಮಹಿಳೆಯ ವರ್ತನೆಗೆ ಕಾರಣವೇನು ಎಂಬ ಬಗ್ಗೆ ತಕ್ಷಣಕ್ಕೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಈ ವಿಮಾನವು 160 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಮಹಿಳೆಯ ಗುರುತು, ಈ ವರ್ತನೆಗೆ ಕಾರಣವೇನು ಅಥವಾ ಆಕೆ ವಿರುದ್ಧ ಯಾವುದೇ ಆರೋಪಗಳಿವೆಯೇ ಎಂಬುದರ ಕುರಿತು ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ.