ನ್ಯೂಯಾರ್ಕ್: ಕಂಪೆನಿ ಮಾರಿ ಉದ್ಯೋಗಿಗಳಿಗೆ ಬೋನಸ್ (bonus) ನೀಡಿದ ಅಮೆರಿಕನ್ ಸಿಇಒ (American CEO) ಗ್ರಹಾಂ ವಾಕರ್ (Graham Walker) ಅವರ ಔದಾರ್ಯ ಈಗ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಗ್ರಹಾಂ ಅವರು, ಇದು ನ್ಯಾಯಯುತವೆನಿಸಿತು ಎಂದು ಹೇಳಿದ್ದಾರೆ. ವಿದ್ಯುತ್ ಉಪಕರಣಗಳನ್ನು ತಯಾರಿಸುವ ಫೈಬರ್‌ಬಾಂಡ್‌ನ ಸಿಇಒ ಗ್ರಹಾಂ ವಾಕರ್ ಅವರು ಈ ವರ್ಷದ ಆರಂಭದಲ್ಲಿ ತಮ್ಮ ಕಂಪೆನಿಯನ್ನು 1.7 ಬಿಲಿಯನ್ ಡಾಲರ್ ಗೆ ಮಾರಾಟ ಮಾಡಿ ಬಳಿಕ ಕಂಪೆನಿಯ 540 ಉದ್ಯೋಗಿಗಳಿಗೆ 2,100 ಕೋಟಿ ರೂ. ಗಳನ್ನು ಬೋನಸ್ ಆಗಿ ವಿತರಿಸಿದ್ದಾರೆ.
ಕಂಪೆನಿಯ ಖರೀದಿದಾರರು ಉದ್ಯೋಗಿಗಳ ಆದಾಯದ ಶೇ. 15ರಷ್ಟನ್ನು ಮೀಸಲಿಡುವವರೆಗೆ ವಾಕರ್ ತಮ್ಮ ಕಂಪೆನಿಯನ್ನು ಮಾರಾಟ ಮಾಡಲು ಒಪ್ಪಲಿಲ್ಲ. ಕಳೆದ ಜೂನ್‌ನಲ್ಲಿ ಪ್ರತಿ ಕೆಲಸಗಾರನಿಗೆ ಸುಮಾರು 4 ಕೋಟಿ ರೂ. ಗಳ ಪಾವತಿಗಳನ್ನು ನೀಡಲು ಪ್ರಾರಂಭಿಸಲಾಯಿತು. ಹಂತಹಂತವಾಗಿ ಹಣ ವಿತರಣೆ ಕಾರ್ಯ ನಡೆಸುತ್ತಿರುವುದರಿಂದ ಐದು ವರ್ಷಗಳ ಅವಧಿಗೆ ಪಾವತಿ ವಿತರಣೆಯನ್ನು ವಿಸ್ತರಿಸಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಮೇಲೆ ಹಲ್ಲೆ: ಆಘಾತಕಾರಿ ಘಟನೆಗೆ ನೆಟ್ಟಿಗರ ಆಕ್ರೋಶ!
ಬೋನಸ್ ಪಡೆದ ಉದ್ಯೋಗಿಗಳಿಗೆ ಇದು ನಂಬುವುದು ಅಸಾಧ್ಯವಾಗಿದೆ. ಕೆಲವರು ಇದು ತಮಾಷೆ ಎಂದು ಭಾವಿಸಿದರು. ಇನ್ನು ಕೆಲವರು ತಮ್ಮ ಸಾಲ ತೀರಿಸಲು, ಕಾರು ಖರೀದಿಸಲು, ಕಾಲೇಜು ಬೋಧನಾ ಶುಲ್ಕ ಪಾವತಿಸಲು ಅಥವಾ ನಿವೃತ್ತಿಗಾಗಿ ಉಳಿಸಲು ಹಣವನ್ನು ಬಳಸಿದ್ದಾರೆ.
ಬೋನಸ್ ಪಡೆದ ಲೆಸಿಯಾ ಕೀ, ಇದಕ್ಕಾಗಿ ನಾನು ಸಿಇಒ ಅವರಿಗೆ ಕೃತಜ್ಞಳಾಗಿದ್ದೇನೆ. 1995ರಲ್ಲಿ 21 ನೇ ವಯಸ್ಸಿನಲ್ಲಿ ಫೈಬರ್‌ಬಾಂಡ್‌ಗೆ ಸೇರಿದ್ದೆ ಎಂದು ಅವರು ತಿಳಿಸಿದರು.
ಗ್ರಹಾಂ ವಾಕರ್ ಅವರು ಈ ವರ್ಷದ ಆರಂಭದಲ್ಲಿ ತಮ್ಮ ಕಂಪೆನಿಯನ್ನು ಈಟನ್ ಕಾರ್ಪೊರೇಷನ್‌ಗೆ ಮಾರಾಟ ಮಾಡಿದರು. ಕಂಪೆನಿಯಲ್ಲಿ ಯಾರೂ ಸ್ಟಾಕ್ ಹೊಂದಿಲ್ಲದಿದ್ದರೂ ಕೂಡ ಅದರ ಒಂದು ಭಾಗವನ್ನು ಉದ್ಯೋಗಿಗಳಿಗೆ ನೀಡಲು ಅವರು ನಿರ್ಧರಿಸಿದರು. ಗ್ರಹಾಂ ವಾಕರ್ ನೀಡಿದ ಬೋನಸ್‌ಗಳ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕ ಬಳಕೆದಾರರು ಅವರನ್ನು ಶ್ಲಾಘಿಸಿದರು.
ಒಬ್ಬರು ಪ್ರತಿಕ್ರಿಯಿಸಿ ಇದೊಂದು ಅದ್ಭುತ ಕಥೆ. ನಿಜವಾದ ಬಂಡವಾಳಶಾಹಿಯ ಕಥೆ ಎಂದು ಹೇಳಿದ್ದರೆ ಇನ್ನೊಬ್ಬರು ಇದು ನಿಜವಾದ ವ್ಯಕ್ತಿತ್ವ ಎಂದು ಹೇಳಿದರು. ಎಲ್ಲಾ ಸಿಇಒಗಳು ಲಕ್ಷ ಲಕ್ಷ ಸಂಪಾದಿಸುತ್ತಾರೆ. ಉದ್ಯೋಗಿಗಳಿಗೆ ಕನಿಷ್ಠ ವೇತನ ಹೆಚ್ಚಳವನ್ನು ಕೂಡ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಮತ್ತೊಬ್ಬರು ನಿಜವಾಗಿಯೂ ದಯೆ ಮತ್ತು ಉದಾರ ವ್ಯಕ್ತಿ ಎಂದು ಹೇಳಿದ್ದಾರೆ.
ಜಪಾನ್‌ನ ಟೈರ್ ಕಾರ್ಖಾನೆಯಲ್ಲಿ ಸಿಕ್ಕಸಿಕ್ಕವರಿಗೆ ಚಾಕುವಿನಿಂದ ಇರಿದ ದುಷ್ಕರ್ಮಿ; 14 ಮಂದಿಗೆ ಗಾಯ
1982ರಲ್ಲಿ ಫೈಬರ್‌ಬಾಂಡ್ ಅನ್ನು ವಾಕರ್ ಅವರ ತಂದೆ ಕ್ಲೌಡ್ ವಾಕರ್ ಅವರು ಇತರ 11 ಜನರೊಂದಿಗೆ ಸೇರಿ ಪ್ರಾರಂಭಿಸಿದರು. 1998ರಲ್ಲಿ ಇದು ಸುಟ್ಟು ಭಸ್ಮವಾಗಿತ್ತು. ಬಳಿಕ ಒಂದಲ್ಲ ಒಂದು ರೀತಿಯ ಸವಾಲುಗಳು ಎದುರಾದರೂ ಅನೇಕ ಉದ್ಯೋಗಿಗಳು ಕಂಪೆನಿಯೊಂದಿಗೆ ನಿಷ್ಠರಾಗಿ ಉಳಿದಿದ್ದರು.