ಹೈದರಾಬಾದ್, ಜ. 4: ಮದ್ಯ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಆಟೋ ರಿಕ್ಷಾ ಚಾಲಕನೊಬ್ಬನನ್ನು (Auto-rickshaw driver) ಸಂಚಾರ ಪೊಲೀಸ್ ಸಿಬ್ಬಂದಿ ತಡೆದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಚಾಲಕ ಸತ್ತ ಹಾವನ್ನು ಕೈಯಲ್ಲಿ ಹಿಡಿದುಕೊಂಡು ಪೊಲೀಸ್‍ಗೆ ಬೆದರಿಕೆ ಹಾಕಿದ್ದಾನೆ. ಇದರ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ವೈರಲ್ (viral video) ಆಗಿದೆ. ಹೈದರಾಬಾದ್‍ನ ಚಂದ್ರಾಯನಗುಟ್ಟ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ (ಜನವರಿ 3) ಈ ಘಟನೆ ನಡೆದಿದೆ.
ಅಧಿಕಾರಿಗಳ ಪ್ರಕಾರ, ಸಂಚಾರ ಪೊಲೀಸರು ನಿಯಮಿತ ವಾಹನ ತಪಾಸಣೆ ನಡೆಸುತ್ತಿದ್ದಾಗ, ಮದ್ಯದ ಅಮಲಿನಲ್ಲಿ ಆಟೋ ರಿಕ್ಷಾ ಚಲಾಯಿಸುತ್ತಿದ್ದ ವ್ಯಕ್ತಿಯನ್ನು ತಡೆದು ನಿಲ್ಲಿಸಿದರು. ತಕ್ಷಣವೇ ವಾಹನವನ್ನು ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಯಿತು.
ಹೀಗೊಬ್ಬ ಪ್ರಾಮಾಣಿಕ ಕಳ್ಳ! ಗಿಟಾರ್ ಕದ್ದು ಕ್ಷಮೆ ಕೇಳಿ ಹಿಂದಿರುಗಿಸಿದ ವ್ಯಕ್ತಿ
ಈ ವೇಳೆ ಚಾಲಕ ಇದ್ದಕ್ಕಿದ್ದಂತೆ ಸತ್ತ ಹಾವನ್ನು ಹೊರತೆಗೆದು ಸಂಚಾರ ಸಿಬ್ಬಂದಿಗೆ ಬೆದರಿಕೆ ಹಾಕಲು ಪ್ರಯತ್ನಿಸಿದ್ದಾನೆ. ತನ್ನ ವಿರುದ್ಧ ಯಾವುದೇ ಪ್ರಕರಣ ದಾಖಲಿಸಬಾರದು ಎಂದು ಬೆದರಿಕೆ ಹಾಕಿದ್ದಲ್ಲದೆ, ತನ್ನ ವಾಹನವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ದುಂಬಾಲು ಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಮತ್ತು ಪೊಲೀಸ್ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಕ್ಕಾಗಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಂತರ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಯ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ದೃಶ್ಯದಲ್ಲಿ ಚಾಲಕನು ಸತ್ತ ಹಾವನ್ನು ಹಿಡಿದುಕೊಂಡು ಸಂಚಾರ ಪೊಲೀಸರ ಕಡೆಗೆ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ತನ್ನ ವಾಹನವನ್ನು ಹಿಂತಿರುಗಿಸುವಂತೆ ಪದೇ ಪದೆ ಒತ್ತಾಯಿಸುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು.
ಇಲ್ಲಿದೆ ವಿಡಿಯೊ:
ಕ್ಯಾಬ್ ಚಾಲಕನ ಮೇಲೆ ಟ್ರಾಫಿಕ್ ಪೊಲೀಸ್ ಹಲ್ಲೆ
ಪ್ರತ್ಯೇಕ ಘಟನೆಯೊಂದರಲ್ಲಿ ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸುತ್ತಿರುವ ಆಘಾತಕಾರಿ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಘಟನೆಯನ್ನು ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬರು ಸೆರೆಹಿಡಿದಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ.
ನಗರದ ಶೆಲ್ ಪೆಟ್ರೋಲ್ ಬಂಕ್ ಪಕ್ಕದಲ್ಲಿರುವ ಆರ್‌ಟಿ ನಗರ ಫ್ಲೈಓವರ್ ಬಳಿ ಈ ಘಟನೆ ನಡೆದಿದೆ. ಕ್ಯಾಬ್ ಚಾಲಕ ಕೇವಲ ಐದು ನಿಮಿಷಗಳ ಕಾಲ ತನ್ನ ವಾಹನವನ್ನು ನಿಲ್ಲಿಸಿದ್ದಾಗ ಅಧಿಕಾರಿ ಅವನ ಮೇಲೆ ಕೂಗಾಡಲು ಪ್ರಾರಂಭಿಸಿದರು ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಪರಿಸ್ಥಿತಿ ತೀವ್ರ ಸ್ವರೂಪ ಪಡೆಯಿತು, ಅಧಿಕಾರಿಯು ಸಾರ್ವಜನಿಕರ ಮುಂದೆಯೇ ಚಾಲಕನಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ, ಸಮವಸ್ತ್ರದಲ್ಲಿರುವ ಅಧಿಕಾರಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಚಾಲಕನ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ತೋರಿಸಲಾಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಅಧಿಕಾರಿಯ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.