ಚಂಡೀಗಢ, ನ. 22: ಯುವಕನೊಬ್ಬ ಬಾಸ್ಕೆಟ್‌ಬಾಲ್ ಆಡುತ್ತಿದ್ದಾಗ ಕಬ್ಬಿಣದ ಪೋಲ್ ಕುಸಿದು ಬಿದ್ದು ದುರಂತ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಯುವಕನನ್ನು 16 ವರ್ಷದ ಹಾರ್ದಿಕ್ ರಾಥಿ ಎಂದು ಗುರುತಿಸಲಾಗಿದೆ. ಅವರು ರಾಷ್ಟ್ರೀಯ ಮಟ್ಟದ ಆಟಗಾರರಾಗಿದ್ದರು. ಬಾಸ್ಕೆಟ್ ಬಾಲ್ ಅಭ್ಯಾಸದ ಸಂದರ್ಭದಲ್ಲಿ ಕಂಬ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಈ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಭಾರಿ ವೈರಲ್ (Viral Video) ಆಗಿದೆ. ವಿಡಿಯೊ ನೋಡಿದ ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ.
ರೋಹ್ಟಕ್‌ನ ಲಖನ್ ಮಾಜ್ರಾ ಬಳಿಯ ಮೈದಾನದಲ್ಲಿ ಈ ಘಟನೆ ಸಂಭವಿಸಿದೆ. ಅಭ್ಯಾಸದ ಸಮಯದಲ್ಲಿ ಕಂಬ ಕುಸಿದು ಬಿದ್ದ ನಂತರ ಹರಿಯಾಣದ ಬಾಸ್ಕೆಟ್‌ಬಾಲ್ ಆಟಗಾರ ಮೈದಾನ ದಲ್ಲೇ ಸಾವನ್ನಪ್ಪಿದ್ದಾರೆ. ಅಭ್ಯಾಸ ಮಾಡುತ್ತಿದ್ದ ಹಾರ್ದಿಕ್, ಬಾಸ್ಕೆಟ್‌ಬಾಲ್ ಹೂಪ್‌ಗೆ ತೂಗಾಡಲು ಪ್ರಯತ್ನಿಸುತ್ತಿದ್ದಾಗ, ಆಧಾರವಿಲ್ಲದ ಲೋಹದ ಕಂಬವು ಇದ್ದಕ್ಕಿದ್ದಂತೆ ಮುರಿದು ನೇರವಾಗಿ ಅವರ ಎದೆಗೆ ಬಿದ್ದಿದೆ. ಈ ಸಂದರ್ಭದಲ್ಲಿ ಆತ ಒಬ್ಬಂಟಿಯಾಗಿ ಅಭ್ಯಾಸ ಮಾಡುತ್ತಿದ್ದರು ಎನ್ನಲಾಗಿದೆ.
ವಿಡಿಯೊ ಇಲ್ಲಿದೆ:
ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊದಲ್ಲಿ, ಹಾರ್ದಿಕ್ ಬಾಸ್ಕೆಟ್‌ಬಾಲ್ ಹೂಪ್‌ನಿಂದ ನೇತಾಡಲು ಪ್ರಯತ್ನಿಸುತ್ತಿರುವುದನ್ನು ಕಂಡು ಬಂದಿದೆ. ಆಗ ಲೋಹದ ಕಂಬ ಇದ್ದಕ್ಕಿದ್ದಂತೆ ನೇರವಾಗಿ ಅವರ ಎದೆಯ ಮೇಲೆ ಬೀಳುತ್ತದೆ. ಸಿಸಿಟಿವಿ ದೃಶ್ಯಾ ವಳಿಗಳ ಪ್ರಕಾರ, ಬಲವಾದ ಹೊಡೆತದಿಂದಾಗಿ ಹಾರ್ದಿಕ್ ಕೆಲವೇ ಸೆಕೆಂಡುಗಳ ಕಾಲ ನೆಲಕ್ಕೆ ಕುಸಿದು ಬಿದ್ದಿದ್ದಾರೆ.
ಆಸ್ಪತ್ರೆಗೆ ಎಂಟ್ರಿ ಕೊಟ್ಟ ದೈತ್ಯ ಸರ್ಪ.... ಎದ್ನೋ ಬಿದ್ನೋ ಓಡಿದ ಜನ
ಪಕ್ಕದ ಕೋರ್ಟ್‌ನಲ್ಲಿದ್ದ ಆಟಗಾರರು ಧಾವಿಸಿ ಬಿದ್ದ ಹಾರ್ದಿಕ್‌ನ ಜೀವ ಉಳಿಸಲು ಪ್ರಯತ್ನಿ ಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹಾರ್ದಿಕ್ ರಾಥಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು ಮತ್ತು ಇತ್ತೀಚೆಗಷ್ಟೇ ತರಬೇತಿ ಶಿಬಿರದಿಂದ ಹಿಂದಿರುಗಿದ್ದರು. ಈ ದುರಂತದ ಹಿನ್ನೆಲೆಯಲ್ಲಿ, ಹರಿಯಾಣ ಒಲಿಂಪಿಕ್ ಅಸೋಸಿಯೇಷನ್ ರಾಜ್ಯಾದ್ಯಂತ ಎಲ್ಲಾ ಕ್ರೀಡಾ ಉತ್ಸವಗಳು ಮತ್ತು ಕಾರ್ಯಕ್ರಮಗಳನ್ನು ಮೂರು ದಿನಗಳ ಕಾಲ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.