Viral Video: ರಸ್ತೆಗುಂಡಿಗಳಿಂದ ಬೇಸತ್ತ ಈ ಜನ ಮಾಡಿದ್ದೇನು ಗೊತ್ತಾ? ಇಂತಹ ಪ್ರತಿಭಟನೆ ನೀವೆಲ್ಲೂ ನೋಡಿರಲ್ಲ!
Protest Against Potholes: ದೇಶದಲ್ಲಿ ಎಲ್ಲಿ ನೋಡಿದರೂ ರಸ್ತೆ ಗುಂಡಿಗಳದ್ದೇ ಸಮಸ್ಯೆ. ರಸ್ತೆಗುಂಡಿಯಿಂದ ಸಾರ್ವಜನಿಕರು ಒದ್ದಾಡುತ್ತಿದ್ದರೆ, ನಮ್ಮನ್ನಾಳುವ ರಾಜಕಾರಣಿಗಳು ಮಾತ್ರ ಗಾಢ ನಿದ್ರೆಯಲ್ಲಿದ್ದಾರೆ. ಇದೀಗ ಭೋಪಾಲ್‍ನಲ್ಲಿ ರಸ್ತೆ ಗುಂಡಿಗಳಿಗೆ 10 ವರ್ಷ ಪೂರ್ಣಗೊಂಡ ಕಾರಣ ಕೇಕ್ ಕತ್ತರಿಸುವ ಮೂಲಕ ಪ್ರತಿಭಟಿಸಿದ್ದಾರೆ.

-

ಭೋಪಾಲ್: ರಸ್ತೆ ಗುಂಡಿಗಳಿಗೆ 10 ವರ್ಷ ಪೂರ್ಣಗೊಂಡ ಕಾರಣ ಸ್ಥಳೀಯರು ಕೇಕ್ ಕತ್ತರಿಸುವ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದ್ದಾರೆ. ಮಧ್ಯಪ್ರದೇಶ (Madhya Pradesh) ದ ಭೋಪಾಲ್‌ನಲ್ಲಿ ನಿವಾಸಿಗಳು ಡ್ರಮ್‌ರೋಲ್‌ಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಧರಣಿ ಮಾಡಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ವರದಿಯ ಪ್ರಕಾರ, ಐಶ್‌ಬಾಗ್ ಹಾಕಿ ಕ್ರೀಡಾಂಗಣದ ಬಳಿ ನಿವಾಸಿಗಳು ಈ ಅಸಾಮಾನ್ಯ ಪ್ರತಿಭಟನೆ ನಡೆಸಿದ್ದಾರೆ. ರಸ್ತೆಯಲ್ಲಿ ಕೇಕ್ ಕತ್ತರಿಸುವ ಮೂಲಕ, ಕಳೆದ 10 ವರ್ಷಗಳಿಂದ ತಮ್ಮನ್ನು ತೊಂದರೆಗೊಳಿಸುತ್ತಿರುವ ಗುಂಡಿಗಳ ಬಗ್ಗೆ ತಮ್ಮ ಹತಾಶೆಯನ್ನು ಎತ್ತಿ ತೋರಿಸಿದ್ದಾರೆ. ಈ ವಿಶಿಷ್ಟ ಪ್ರತಿಭಟನೆಯ ವಿಡಿಯೊವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದ್ದು, ಅದು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ.
ಇದು ಒಂದು ವಿಶಿಷ್ಟ ಪ್ರತಿಭಟನೆ ಮಾತ್ರವಲ್ಲದೆ, ಪ್ರತಿಭಟನಾಕಾರರು ವಿಶೇಷ ಕೇಕ್ ಅನ್ನು ಸಹ ತಂದಿದ್ದರು. ಕೇಕ್‌ನಲ್ಲಿ 10 ವರ್ಷಗಳು ಎಂದು ಬರೆಯಲಾಗಿದ್ದು, ಮೇಣದಬತ್ತಿಯೊಂದಿಗೆ ಕೊಚ್ಚೆಗುಂಡಿಯ ಚಿತ್ರವನ್ನು ಸಹ ಹಾಕಲಾಗಿತ್ತು, ಜೊತೆಗೆ ಅದರಲ್ಲಿ ಕಮಲದ ಹೂವುಗಳನ್ನು ಇಡಲಾಗಿತ್ತು. ಇನ್ನು ಕೊಚ್ಚೆಗುಂಡಿಯಲ್ಲಿ ಚೆಂಡು ಹೂವುಗಳು, ಗುಲಾಬಿ ದಳಗಳು ಮತ್ತು ಬಲೂನ್‌ಗಳು ತೇಲುತ್ತಿದ್ದವು. ಪ್ರತಿಭಟನಾಕಾರರು ಕೊಚ್ಚೆ ಗುಂಡಿಯಲ್ಲಿ ಕುಳಿತು ಘೋಷಣೆಗಳನ್ನು ಕೂಗಿದ್ದಾರೆ.
ವಿಡಿಯೊ ವೀಕ್ಷಿಸಿ:
ಇನ್ನು ಈ ಸಂಬಂಧ ಅಧಿಕಾರಿಗಳಿಗೆ ಪದೇ ಪದೇ ದೂರು ನೀಡಿದರೂ ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ ಈ ಸಾಂಕೇತಿಕ ಪ್ರತಿಭಟನೆ ನಡೆಸಬೇಕಾಯಿತು ಎಂದು ಸ್ಥಳೀಯರು ಹೇಳಿದ್ದಾರೆ. ಈ ರಸ್ತೆಯಲ್ಲಿ ಪ್ರತಿದಿನ ನಾವು ಅಪಘಾತಗಳನ್ನು ಎದುರಿಸುತ್ತಿದ್ದೇವೆ. ಸರ್ಕಾರ ಇದನ್ನು ಸರಿಪಡಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ಪಕ್ಷ ಅವರು ನಮ್ಮೊಂದಿಗೆ ಅದರ ವಾರ್ಷಿಕೋತ್ಸವವನ್ನು ಆಚರಿಸಬೇಕು ಎಂದು ಒಬ್ಬ ನಿವಾಸಿ ವ್ಯಂಗ್ಯವಾಡಿದರು.
ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ನಿವಾಸಿಗಳು ಒತ್ತಾಯಿಸಿದ್ದಾರೆ. ಸಮಸ್ಯೆಯನ್ನು ನಿರ್ಲಕ್ಷಿಸುವುದು ಹೀಗೆ ಮುಂದುವರಿದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲೂ ರಸ್ತೆಗುಂಡಿ ಸಮಸ್ಯೆಯಿದ್ದು, ಜನರ ಆಕ್ರೋಶ ಭುಗಿಲೆದ್ದಿದೆ. ಮೊನ್ನೆಯಷ್ಟೇ ಮಂಗಳೂರಿನಲ್ಲಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಮಹಿಳೆಯೊಬ್ಬರು ರಸ್ತೆಗುಂಡಿಗೆ ಬಿದ್ದು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದರಿಂದ ಸಾರ್ವಜನಿಕರು ತಾವು ಚುನಾಯಿಸಿದ ಶಾಸಕರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಇನ್ನೆಷ್ಟು ಸಾವು ಆಗಬೇಕು ಎಂದು ಖಂಡಿಸಿದ್ದರು. ಅಷ್ಟೇ ಅಲ್ಲದೆ, ಸಾಮಾಜಿಕ ಮಾಧ್ಯಮದಲ್ಲಿ ರಸ್ತೆ ಗುಂಡಿಗಳ ಮೀಮ್‍ಗಳ ಸುರಿಮಳೆಯೇ ಇದ್ದು, ರಾಜಕಾರಣಿಗಳನ್ನು ಅಣಕಿಸುತ್ತಿದ್ದಾರೆ. ಇನ್ನಾದರೂ ರಸ್ತೆಗುಂಡಿ ಸರಿಪಡಿಸುವ ಕಾರ್ಯಕ್ಕೆ ಮುಂದಾಗುತ್ತಾರಾ ಕಾದುನೋಡಬೇಕಿದೆ.
ಇದನ್ನೂ ಓದಿ: Viral Video: ರೀಲ್ಸ್‌ಗಾಗಿ ಪ್ರಾಣ ಪಣಕ್ಕಿಟ್ಟ ಯುವಕ; ಕರಡಿಗೆ ಕುಡಿಯಲು ಕೊಟ್ಟ ಕಿಡಿಗೇಡಿಗೆ ಗತಿ ಏನಾಯ್ತು?