Viral Video: ಕೆನಡಾದ ವ್ಯಕ್ತಿಯ ವಿಡಿಯೋ ವೈರಲ್ ಬಳಿಕ ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗ ಸ್ವಚ್ಛಗೊಳಿಸಿದ BBMP
ಕೆನಡಾದ ಕ್ಯಾಲೆಬ್ ಫ್ರೀಸನ್ ಎಂಬ ಯುವಕ ಬೆಂಗಳೂರಿನ ಸ್ವಚ್ಛತೆ ಬಗ್ಗೆ ಟೀಕೆ ಮಾಡಿದ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಿದ್ದು, ಮೆಜೆಸ್ಟಿಕ್ ಪ್ರದೇಶದ ಫುಟ್‌ಪಾತ್‌ಗಳನ್ನು ಸ್ವಚ್ಛಗೊಳಿಸಿದ್ದಾರೆ. ಈ ಘಟನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಘಟನೆಯ ದೃಶ್ಯ -

ಬೆಂಗಳೂರು: ಕೆನಡಾದ (Canada) ಯುವಕ ಕ್ಯಾಲೆಬ್ ಫ್ರೀಸನ್ (Caleb Friesen) ಬೆಂಗಳೂರಿನ (Bengaluru) ನಡೆಯಲಾಗದ ಫುಟ್‌ಪಾತ್‌ಗಳ (Footpaths) ಕುರಿತು ವೈರಲ್ ವಿಡಿಯೋವೊಂದನ್ನು (Viral Video) ಹಂಚಿಕೊಂಡ ಕೆಲವೇ ದಿನಗಳಲ್ಲಿ, ಗ್ರೇಟರ್ ಬೆಂಗಳೂರು ಅಥಾರಿಟಿ (GBA) ತ್ವರಿತ ಕ್ರಮ ಕೈಗೊಂಡಿದೆ. ಮೆಜೆಸ್ಟಿಕ್ ಸುತ್ತಮುತ್ತಲಿನ ಫುಟ್‌ಪಾತ್‌ಗಳನ್ನು ಸ್ವಚ್ಛಗೊಳಿಸಿ, ನಗರವಾಸಿಗಳಿಗೆ ಸುರಕ್ಷಿತ ಓಡಾಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು GBA ತಿಳಿಸಿದೆ.
ಸೆಪ್ಟೆಂಬರ್ 11ರಂದು ಕ್ಯಾಲೆಬ್ ಫ್ರೀಸನ್, ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಸ್ಟಾರ್‌ಬಕ್ಸ್‌ಗೆ 2.4 ಕಿಮೀ ನಡೆದುಕೊಂಡು ಹೋಗುವ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ವಿಡಿಯೋದಲ್ಲಿ ತೆರೆದ ಒಳಚರಂಡಿಗಳು, ಕಟ್ಟಿದ ತಂತಿ ಮತ್ತು ಕೊಚ್ಚೆಯಿಂದ ಜನರು ಸುರಕ್ಷಿತವಾಗಿ ನಡೆದು ಹೋಗಲು ಕಷ್ಟವಾಗಿತ್ತು. GBA ಈ ವಿಡಿಯೋಗೆ ಪ್ರತಿಕ್ರಿಯಿಸಿ, ಮೆಜೆಸ್ಟಿಕ್ ಸುತ್ತಲಿನ ಫುಟ್‌ಪಾತ್‌ಗಳಲ್ಲಿ ತೀವ್ರ ಸ್ವಚ್ಛತಾ ಕಾರ್ಯಾಚರಣೆ ನಡೆಸಲಾಗಿದೆ ಎಂದು ಎಕ್ಸ್‌ನಲ್ಲಿ ತಿಳಿಸಿದೆ. ಕ್ಯಾಲೆಬ್ ಫ್ರೀಸನ್, “GBAಗೆ ಧನ್ಯವಾದಗಳು, ಇನ್ನು ಕಟಿಗೆ, ತಂತಿಯ ಮೇಲೆ ಜಿಗಿಯುವ ಅಗತ್ಯವಿಲ್ಲ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ, ಕೆಲವರು GBAನ ಕ್ರಮವನ್ನು ಶ್ಲಾಘಿಸಿದರೆ, ಇತರರು “ವಿದೇಶಿಯರೇ ಸಮಸ್ಯೆ ತೋರಿಸಿದಾಗ ಮಾತ್ರ ಕ್ರಮ ಕೈಗೊಳ್ಳುತ್ತೀರಾ?” ಎಂದು ಪ್ರಶ್ನಿಸಿದರು. ಒಬ್ಬ ಬಳಕೆದಾರ, “ಪ್ರತಿ ತಿಂಗಳು ಸ್ವಚ್ಛತೆ ನಡೆಸಿ, ನಾಗರಿಕರನ್ನು ಸೇರಿಸಿಕೊಳ್ಳಿ” ಎಂದು ಸಲಹೆ ನೀಡಿದರೆ, ಮತ್ತೊಬ್ಬರು, “ಇದು ಒಂದು ಬಾರಿಯ ಕಾರ್ಯಕ್ರಮವೇ? ಶಾಶ್ವತವಾಗಿ ಮಾಡಿ” ಎಂದು ಟೀಕಿಸಿದರು. ಈ ಚರ್ಚೆಯು ಬೆಂಗಳೂರಿನ ಫುಟ್‌ಪಾತ್‌ಗಳ ಸ್ಥಿತಿಯ ಬಗ್ಗೆ ಗಮನ ಸೆಳೆದಿದೆ.
ಈ ಸುದ್ದಿಯನ್ನೂ ಓದಿ: Viral Video: ನಿಯತ್ತು ಅಂದ್ರೆ ಇದಪ್ಪಾ! ಪುಟ್ಟ ಕಂದಮ್ಮನ ಪ್ರಾಣ ಕಾಪಾಡಿದ ಶ್ವಾನ
ಇದು ಕ್ಯಾಲೆಬ್ ಫ್ರೀಸನ್‌ನ ಮೊದಲ ವಿಡಿಯೋ ಅಲ್ಲ. ಮೇ 2025ರಲ್ಲಿ ಆತ “Polite India Challenge” ಎಂಬ ವಿಡಿಯೋವನ್ನು ಹಂಚಿಕೊಂಡು, ದೈನಂದಿನ ವ್ಯವಹಾರದಲ್ಲಿ ಸೌಜನ್ಯತೆಯನ್ನು ಅಳವಡಿಸಿಕೊಳ್ಳುವಂತೆ ಭಾರತೀಯರಿಗೆ ಕರೆ ನೀಡಿದ್ದ. ಐದು ಸರಳ ಕ್ರಮಗಳ ಮೂಲಕ ಒಂದೇ ದಿನದಲ್ಲಿ ಸೌಜನ್ಯತೆಯನ್ನು ಅಭ್ಯಾಸ ಮಾಡಬಹುದು ಎಂದು ಆತ ತಿಳಿಸಿದ್ದ. ಈ ವಿಡಿಯೋ ಕೂಡ ಭಾರೀ ಚರ್ಚೆಗೆ ಕಾರಣವಾಗಿತ್ತು.
GBA ಅಧಿಕಾರಿಗಳು ಫುಟ್‌ಪಾತ್‌ಗಳ ಸ್ವಚ್ಛತೆ ಮತ್ತು ಸುರಕ್ಷತೆಗೆ ಒತ್ತು ನೀಡುವ ಭರವಸೆ ನೀಡಿದ್ದಾರೆ. ಆದರೆ, ಈ ಕಾರ್ಯಕ್ರಮ ಶಾಶ್ವತವಾಗಿರಬೇಕು ಎಂಬ ಒತ್ತಾಯ ಸಾಮಾಜಿಕ ಮಾಧ್ಯಮದಲ್ಲಿ ಕೇಳಿಬಂದಿದೆ. ಬೆಂಗಳೂರಿನ ಫುಟ್‌ಪಾತ್‌ಗಳ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ನಾಗರಿಕರ ಸಹಕಾರದೊಂದಿಗೆ ಯೋಜನೆ ರೂಪಿಸಲು GBAಗೆ ಸಲಹೆ ನೀಡಲಾಗಿದೆ.