Viral Video: ನಿಯತ್ತು ಅಂದ್ರೆ ಇದಪ್ಪಾ! ಪುಟ್ಟ ಕಂದಮ್ಮನ ಪ್ರಾಣ ಕಾಪಾಡಿದ ಶ್ವಾನ
Dog Rescues Baby: ಸ್ವಾಮಿನಿಷ್ಠೆಗೆ ಹೆಸರುವಾಸಿ ನಾಯಿ. ಇದೀಗ ಶ್ವಾನವೊಂದು ತನ್ನ ಮಾಲೀಕರ ಮಗುವನ್ನು ರಕ್ಷಿಸಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮಗುವನ್ನು ದೊಡ್ಡ ಅಪಘಾತದಿಂದ ರಕ್ಷಿಸಿದ್ದಕ್ಕಾಗಿ ನೆಟ್ಟಿಗರು ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆದರೆ, ಕೆಲವರು ಇದನ್ನು ಎಐ ವಿಡಿಯೊ ಎಂದಿದ್ದಾರೆ.

-

ನವದೆಹಲಿ: ಕೃತಕ ಬುದ್ಧಿಮತ್ತೆ (AI) ಅನೇಕ ದೈನಂದಿನ ಕೆಲಸಗಳನ್ನು ಸರಳಗೊಳಿಸಿದೆ. ಆದರೆ ಅದರ ಪ್ರಯೋಜನಗಳ ಜೊತೆಗೆ ಹೊಸ ಸವಾಲುಗಳು ಕೂಡ ಬರುತ್ತಿವೆ. ಸಾಮಾಜಿಕ ಮಾಧ್ಯಮ (Social media) ವು AI ರಚಿತ ವಿಡಿಯೊಗಳಿಂದ ತುಂಬಿದೆ. ಕೆಲವು ವಿಡಿಯೊಗಳು ಎಷ್ಟು ನೈಜವಾಗಿರುತ್ತದೆ ಎಂದರೆ ಅತ್ಯಂತ ಜಾಗರೂಕವಾಗಿ ವೀಕ್ಷಿಸಿದರೂ, ಕಣ್ಣುಗಳು ಮೋಸ ಹೋಗಬಹುದು.
ಪ್ರಸ್ತುತ ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿರುವ ವಿಡಿಯೊ ಇದಕ್ಕೆ ಸೂಕ್ತ ಉದಾಹರಣೆಯಾಗಿದೆ. ಮೊದಲ ನೋಟದಲ್ಲಿ, ಇದು ತಾಯಿ, ಆಕೆಯ ಮಗು ಮತ್ತು ಅವರ ನಾಯಿಯನ್ನು ಒಳಗೊಂಡ ಹೃದಯಸ್ಪರ್ಶಿ ಧೈರ್ಯದ ಕಥೆಯಂತೆ ಕಾಣುತ್ತದೆ. ಮಗುವನ್ನು ದೊಡ್ಡ ಅಪಘಾತದಿಂದ ರಕ್ಷಿಸಿದ್ದಕ್ಕಾಗಿ ನಾಯಿಯನ್ನು ಪ್ರಶಂಸಿಸಲಾಗುತ್ತಿದೆ. ಆದರೆ, ಪ್ರತಿಯೊಬ್ಬರೂ ಅದರ ಸತ್ಯಾಸತ್ಯತೆಯನ್ನು ಮನವರಿಕೆ ಮಾಡಿಕೊಳ್ಳುವುದಿಲ್ಲ. ಕೆಲವು ಬಳಕೆದಾರರು ಇದನ್ನು AI ಬಳಸಿ ರಚಿಸಲಾಗಿದೆ ಎಂದು ಖಚಿತವಾಗಿ ಹೇಳುತ್ತಿದ್ದಾರೆ. ಸದ್ಯ ಈ ವಿಡಿಯೊ ವೈರಲ್ (Viral Video) ಆಗಿದೆ.
ಈ ವಿಡಿಯೊದಲ್ಲಿ ಒಬ್ಬ ಮಹಿಳೆ ಬಟ್ಟೆ ಒಗೆಯುತ್ತಿರುವುದನ್ನು ತೋರಿಸಲಾಗಿದ್ದು, ಆಕೆಯ ಮಗು ಪಕ್ಕದಲ್ಲಿ ಸ್ಟ್ರಾಲರ್‌ನಲ್ಲಿ ಕುಳಿತಿದೆ. ನಾಯಿಯೂ ಸಹ ದೃಶ್ಯದಲ್ಲಿ ಕಾಣಿಸಿಕೊಂಡಿದೆ. ಇದ್ದಕ್ಕಿದ್ದಂತೆ, ಸ್ಟ್ರಾಲರ್ ಮಗುಚಿ ಮುಂದೆ ಸಾಗಲು ಪ್ರಾರಂಭಿಸುತ್ತದೆ. ಆ ಕ್ಷಣ ಭಯಾನಕವಾಗಿ ಕಾಣುತ್ತದೆ. ಈ ವೇಳೆ ಅಪಾಯವನ್ನು ಅರಿತ ನಾಯಿಯು ಹಾರಿ ಸ್ಟ್ರಾಲರ್ ಅಪ್ಪಳಿಸುವ ಮೊದಲೇ ಅದನ್ನು ತಡೆಯುತ್ತದೆ. ಈ ಮೂಲಕ ಮಗುವನ್ನು ರಕ್ಷಿಸುತ್ತದೆ. ಈ ವಿಡಿಯೊ ಅನೇಕರನ್ನು ಬೆರಗುಗೊಳಿಸಿದೆ.
ವಿಡಿಯೊ ವೀಕ್ಷಿಸಿ:
ಈ ವಿಡಿಯೊ ಹಂಚಿಕೊಂಡಾಗಿನಿಂದ ಇನ್ಸ್ಟಾಗ್ರಾಂ (Instagram) ನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ದಾಟಿದೆ. ವೀಕ್ಷಕರು ಕಾಮೆಂಟ್ ವಿಭಾಗವನ್ನು ಪ್ರತಿಕ್ರಿಯೆಗಳಿಂದ ತುಂಬಿದ್ದಾರೆ. ಡಾಗೇಶ್ ಭಾಯ್ ಎಂಬ ಟ್ರೆಂಡಿಂಗ್ ಪದವನ್ನು ಹೆಚ್ಚಿನವರು ಬಳಸಿದ್ದಾರೆ. ಅಂತಹ ತುರ್ತು ಪರಿಸ್ಥಿತಿಗಳಿಗಾಗಿ ಡಾಗೇಶ್ ಭಾಯ್ ಇಲ್ಲಿ ಕುಳಿತಿದ್ದಾರೆ ಎಂದು ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.
ಒಂದೇ ಹೃದಯವಿದೆ ಡಾಗೇಶ್ ಭಾಯ್, ನೀವು ಅದನ್ನು ಎಷ್ಟು ಬಾರಿ ಗೆಲ್ಲುತ್ತೀರಿ ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಅದಕ್ಕಾಗಿಯೇ ನಾನು ಡಾಗೇಶ್ ಭಾಯ್ ಅವರನ್ನು ಮನುಷ್ಯರಿಗಿಂತ ಹೆಚ್ಚಾಗಿ ಪ್ರೀತಿಸುತ್ತೇನೆ ಎಂದು ಮಗದೊಬ್ಬರು ಹಂಚಿಕೊಂಡಿದ್ದಾರೆ.
ಅನೇಕ ಜನರು ನಾಯಿಯ ವೀರ ಕೃತ್ಯವನ್ನು ಮೆಚ್ಚಿಕೊಂಡರೆ, ಇನ್ನು ಕೆಲವರು ಇದು ನೈಜವಲ್ಲ ಎಂದು ಪ್ರತಿಪಾದಿಸಿದ್ದಾರೆ. ಒಬ್ಬ ಬಳಕೆದಾರರು ಇದು AI ರಚಿತ ವಿಡಿಯೊ ಎಂದು ಬರೆದರೆ, ಮತ್ತೊಬ್ಬರು AI ಇನ್ನೂ ಉತ್ತಮವಾಗಿ ಮಾಡಬಹುದಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ. ಎಐ ಮಗುವನ್ನು ಬಚಾವ್ ಮಾಡಿದೆ ಎಂದು ಒಬ್ಬ ವ್ಯಕ್ತಿ ತಮಾಷೆ ಮಾಡಿದರು.
AI ಹಲವು ತಂತ್ರಗಳನ್ನು ಹೊಂದಿದೆ
ಎಐ ಆಧಾರಿತ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಜನರನ್ನು ಮೋಸಗೊಳಿಸುತ್ತಿರುವುದು ಇದೇ ಮೊದಲಲ್ಲ. ಕೆಲವೇ ತಿಂಗಳುಗಳ ಹಿಂದೆ, ಮಲೇಷಿಯಾದ ದಂಪತಿಗಳು ಸಾಮಾಜಿಕ ಮಾಧ್ಯಮದಲ್ಲಿ ಸುಂದರ ತಾಣವೊಂದರ ವಿಡಿಯೊವನ್ನು ವೀಕ್ಷಿಸಿದ ನಂತರ ಪ್ರಯಾಣ ಬೆಳೆಸಿದರು. ವಿಡಿಯೊವು ಪೆರಾಕ್‌ನಲ್ಲಿ ಅದ್ಭುತವಾದ ಕೇಬಲ್ ಕಾರ್ ಸವಾರಿಯನ್ನು ತೋರಿಸಿತ್ತು. ಆ ಸ್ಥಳವು ತುಂಬಾ ಸುಂದರವಾಗಿ ಕಾಣುತ್ತಿತ್ತು. ಇದಕ್ಕಾಗಿ ಅವರು ಕೌಲಾಲಂಪುರದಿಂದ 370 ಕಿ.ಮೀ.ಗಿಂತ ಹೆಚ್ಚು ದೂರ ಪ್ರಯಾಣಿಸಿದರು. ಆದರೆ, ಆ ಸ್ಥಳಕ್ಕೆ ಬಂದಾಗ ದಂಪತಿಗಳಿಗೆ ಭಾರಿ ನಿರಾಶೆಯಾಗಿದೆ. ಯಾಕೆಂದರೆ ಅವರು ವಿಡಿಯೊದಲ್ಲಿ ವೀಕ್ಷಿಸಿದ್ದ ಸ್ಥಳವು ಅಸ್ತಿತ್ವದಲ್ಲಿ ಇರಲೇ ಇಲ್ಲ. ಅವರ ದೀರ್ಘ ರಸ್ತೆ ಪ್ರವಾಸಕ್ಕೆ ಸ್ಫೂರ್ತಿ ನೀಡಿದ ಕನಸಿನಂತಹ ಭೂದೃಶ್ಯ ಮತ್ತು ಸವಾರಿಯು ಎಐ ರಚಿತ ದೃಶ್ಯಗಳಾಗಿತ್ತು.
ಇದನ್ನೂ ಓದಿ: Viral Video: ರೀಲ್ಸ್‌ಗಾಗಿ ಪ್ರಾಣ ಪಣಕ್ಕಿಟ್ಟ ಯುವಕ; ಕರಡಿಗೆ ಕುಡಿಯಲು ಕೊಟ್ಟ ಕಿಡಿಗೇಡಿಗೆ ಗತಿ ಏನಾಯ್ತು?