ದೆಹಲಿ, ಜ. 20: ಇತ್ತೀಚಿನ ದಿನಗಳಲ್ಲಿ ರೀಲ್ಸ್‌ಗಾಗಿ, ರಾತ್ರೋರಾತ್ರಿ ಜನಪ್ರಿಯತೆ ಪಡೆಯಲು ಕೆಲವರು ಎಂತಹ ಅಪಾಯಕಾರಿ ಸಾಹಸಕ್ಕೂ ಕೈ ಹಾಕುತ್ತಾರೆ. ತಮ್ಮ ಪ್ರಾಣವನ್ನಷ್ಟೇ ಅಲ್ಲದೆ ಇತರರ ಜೀವವನ್ನೂ ಪಣಕ್ಕಿಡುವ ಮೂಲಕ ವಿಕೃತಿ ಮೆರೆಯುತ್ತಾರೆ. ಅಂತಹದ್ದೇ ಘಟನೆಯೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ. ಯುವಕನೊಬ್ಬ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿರುವ ಟ್ರಕ್‌ನಲ್ಲಿ ಬೈಕ್ ಓಡಿಸುವ ಮೂಲಕ ಹುಚ್ಚಾಟ ಮೆರೆದಿದ್ದಾನೆ. ಸದ್ಯ ಈ ವಿಡಿಯೊ ನೋಡಿ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ (Viral Video). ಇನ್‌ಸ್ಟಾಗ್ರಾಮ್ ರೀಲ್ಸ್‌ಗಾಗಿ ಈ ಸಾಹಸ ಮಾಡಿದ್ದಾನೆ.
ಮತ್ತೊಂದು ಬೈಕ್‌ನಲ್ಲಿ ಸಾಗುತ್ತಿದ್ದ ವ್ಯಕ್ತಿ ಈ ದೃಶ್ಯವನ್ನು ಸೆರೆ ಹಿಡಿದಿದ್ದಾನೆ. ಬೃಹತ್ ಟ್ರಕ್ ಚಲಿಸುತ್ತಿರುವುದು, ಅದರ ಕೆಳಗೆ ಯುವಕ ಬೈಕ್ ನುಗ್ಗಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ವಿಡಿಯೊದಲ್ಲಿ ಏನಿದೆ?
ಟ್ರಕ್‌ನ ವೇಗಕ್ಕೆ ಸರಿಯಾಗಿ ಬೈಕ್ ಚಲಾಯಿಸುವ ಯುವಕ, ಎರಡು ಚಕ್ರದ ನಡುವಿನ ಜಾಗಕ್ಕೆ ನುಗ್ಗುವ ಮೂಲಕ ತನ್ನ ಪ್ರಾಣವನ್ನು ಪಣಕ್ಕೊಡ್ಡಿರುವುದು ಕಂಡುಬಂದಿದೆ. ಟ್ರಕ್‌ನ ಟೈರ್‌ಗಿಂದ ಕೆಲವೇ ಇಂಚುಗಳನ್ನು ಅಂತರದಲ್ಲಿ ಬೈಕ್ ಸವಾರ ಸಾಗುತ್ತಿರುವ ಅಪಾಯಕಾರಿ ದೃಶ್ಯ ಎಂತಹವರ ಗುಂಡಿಗೆಯನ್ನು ಕೆಲ ಹೊತ್ತು ಕಂಪಿಸುವಂತೆ ಮಾಡುತ್ತದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುಸ್ಸಾಹಸ ನಡೆದಿದ್ದು, ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ದರೆ ಭಾರಿ ಅನಾಹುತವಾಗುವ ಸಾಧ್ಯತೆ ಇತ್ತು.
ಅಪಾಯಕಾರಿ ವಿಡಿಯೊ ಇಲ್ಲಿದೆ:
ಟ್ರಕ್‌ನ ವೇಗಕ್ಕೆ ಹೊಂದಾಣಿಕೆ ಮಾಡಿಕೊಂಡು ಬೈಕರ್ ಎರಡು ಟೈರ್ ನಡುವಿನ ಜಾಗದಲ್ಲಿ ಸಾಗುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ ಎನ್ನುವುದನ್ನು ಸ್ಪಷ್ಟವಾಗಿ ಗೊಚರವಾಗುತ್ತದೆ. ಒಂದುವೇಳೆ ಟ್ರಕ್ ಚಾಲಕ ಒಮ್ಮೆಲೆ ಸ್ಪೀಡ್ ಹೆಚ್ಚಿಸಿದ್ದರೆ ಇಲ್ಲವೆ ಬ್ರೇಕ್ ಹಾಕಿದ್ದರೆ ಅಥವಾ ರಸ್ತೆಯಲ್ಲಿ ಹೊಂಡ ಎದುರಾಗಿದ್ದರೆ ಬೈಕ್ ಸವಾರ ಅಪ್ಪಚ್ಚಿಯಾಗುವ ಸಾಧ್ಯತೆ ಇತ್ತು. ಸದ್ಯ ಈ ಅಪಾಯಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯನ್ನೇ ಹುಟ್ಟು ಹಾಕಿದೆ. ಬೈಕರ್‌ಗೆ ಅನೇಕರು ಛಿಮಾರಿ ಹಾಕಿದ್ದಾರೆ. ಆತ ತನ್ನ ಜೀವವನ್ನು ಮಾತ್ರವಲ್ಲ ರಸ್ತೆಯಲ್ಲಿ ಸಾಗುವ ಇತರರ ಜೀವವನ್ನೂ ಅಪಾಯಕ್ಕೆ ಒಡ್ಡಿದ್ದಾನೆ ಎಂದು ಹೇಳಿದ್ದಾರೆ.
ಪೊಲೀಸರ ಎದುರೇ ಯುವಕರ ಅಪಾಯಕಾರಿ ವ್ಹೀಲಿಂಗ್: ಕಾನೂನು ಸುವ್ಯವಸ್ಥೆ ಬಗ್ಗೆ ಸಾರ್ವಜನಿಕರ ಆಕ್ರೋಶ
ನೆಟ್ಟಿಗರು ಹೇಳಿದ್ದೇನು?
ಸದ್ಯ ಈ ವಿಡಿಯೊ ನೆಟ್ಟಿಗರನ್ನು ಕೆರಳಿಸಿದೆ. ʼʼಒಂದು ರೀಲ್ಸ್ ಹಲವರ ಜೀವವನ್ನೇ ಕಸಿದುಕೊಳ್ಳುತ್ತಿದೆʼʼ ಎಂದು ಒಬ್ಬರು ಹೇಳಿದ್ದಾರೆ. ʼʼಇಂತಹವರನ್ನು ಕೂಡಲೇ ಜೈಲಿಗೆ ಹಾಕಬೇಕು. ಜತೆಗೆ ಶಾಶ್ವತವಾಗಿ ಪರವಾನಿಗೆಯನ್ನು ಮುಟ್ಟುಗೋಲು ಹಾಕಬೇಕುʼʼ ಎಂದು ಇನ್ನೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ʼʼವ್ಯೂವ್ಸ್, ಲೈಕ್ಸ್‌ಗಾಗಿ ನಿಮ್ಮ ಜೀವವನ್ನೇ ಪಣಕ್ಕಿಡುವುದು ಮೂರ್ಖತನʼʼ ಎಂದು ಮತ್ತೊಬ್ಬರು ಉಗಿದಿದ್ದಾರೆ. ʼʼಇಂತಹವರು ತಮ್ಮ ಜೀವವನ್ನು ಹೇಗೂ ಅಪಾಯಕ್ಕೆ ಸಿಲುಕಿಸುತ್ತಾರೆ. ಬೇರೆಯವರನ್ನೂ ಯಾಕೆ ಅಪಾಯಕ್ಕೆ ಎಳೆಯುತ್ತಾರೆ? ಅವರೇನಾದರೂ ಆಗಿ ಸಾಯಲಿ. ಉಳಿದವರಿಗೆ ಯಾಕೆ ಸಮಸ್ಯೆ ತಂದೊಡ್ಡುತ್ತಾರೆ? ಇಂತಹವರಿಗೆ ಕಠಿಣ ಶಿಕ್ಷೆ ನೀಡಬೇಕುʼʼ ಎಂದು ಮಗದೊಬ್ಬರು ಆಗ್ರಹಿಸಿದ್ದಾರೆ.
ಇದು ಅಜಾಗರೂಕತೆ ಮಾತ್ರವಲ್ಲದೆ ಕಾನೂನಿನ ಉಲ್ಲಂಘನೆಯೂ ಆಗಿದೆ. ಸಾರ್ವಜನಿಕ ರಸ್ತೆಗಳಲ್ಲಿ ಇಂತಹ ಸಾಹಸಗಳನ್ನು ಮಾಡುವುದು ಕಾನೂನುಬಾಹಿರ ಮಾತ್ರವಲ್ಲದೆ ಸಮಾಜಕ್ಕೆ ಅತ್ಯಂತ ಹಾನಿಕಾರಕ ಎಂದು ಅಧಿಕಾರಿಗಳೂ ಪ್ರತಿಕ್ರಿಯಿಸಿದ್ದಾರೆ. ಆತನ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.