ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪೊಲೀಸರ ಎದುರೇ ಯುವಕರ ಅಪಾಯಕಾರಿ ವ್ಹೀಲಿಂಗ್‌: ಕಾನೂನು ಸುವ್ಯವಸ್ಥೆ ಬಗ್ಗೆ ಸಾರ್ವಜನಿಕರ ಆಕ್ರೋಶ

Viral Video: ಮೈಸೂರಿನ ಜನ ನಿಬಿಡ ರಸ್ತೆಯಲ್ಲೇ ಯುವಕರ ಗುಂಪೊಂದು ಪುಂಡಾಟಿಕೆ ಮೆರೆದಿದ್ದು, ಪೊಲೀಸರ ಎದುರೇ ವ್ಹೀಲಿಂಗ್‌ ಮಾಡುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಪೊಲೀಸ್ ವಾಹನಗಳು ಹತ್ತಿರದಲ್ಲಿಯೇ ಇದ್ದಾಗಲೂ ಯುವಕರು ಈ ಸಾಹಸಕ್ಕೆ ಮುಂದಾಗಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮೈಸೂರಿನಲ್ಲಿ ಪೊಲೀಸರ ಮುಂದೆಯೇ ಯುವಕರ ವ್ಹೀಲಿಂಗ್‌

ಅಪಾಯಕಾರಿ ವ್ಹೀಲಿಂಗ್‌ ಮಾಡಿದ ಯುವಕರು -

Profile
Pushpa Kumari Jan 8, 2026 6:59 PM

ಮೈಸೂರು ,ಡಿ. 8: ಇತ್ತೀಚೆಗೆ ಅಪಘಾತಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಅತೀ ವೇಗದ ಜತೆಗೆ ಅಜಾಗರೂಕ ಚಾಲನೆಯೂ ಸಾವು ನೋವಿಗೆ ಕಾರಣವಾಗುತ್ತಿದೆ. ಈ ಬಗ್ಗೆ ಸಾರಿಗೆ ಇಲಾಖೆ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದ್ದರೂ ಕೆಲವರು ಇದಕ್ಕೆ ಕ್ಯಾರೇ ಎನ್ನದೆ ರೂಲ್ಸ್ ಬ್ರೇಕ್ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮೈಸೂರಿನ ಜನ ನಿಬಿಡ ರಸ್ತೆಯಲ್ಲೇ ಯುವಕರ ಗುಂಪೊಂದು ಪುಂಡಾಟಿಕೆ ಮೆರೆದಿದ್ದು ವ್ಹೀಲಿಂಗ್‌ ಮಾಡುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಅದರಲ್ಲೂ ಈ ಯುವಕರು ಪೊಲೀಸರ ಮುಂದೆಯೇ ಅಪಾಯಕಾರಿ ವ್ಹೀಲಿಂಗ್‌ ಮಾಡಲು ಮುಂದಾಗಿದ್ದಾರೆ. ಪೊಲೀಸ್ ವಾಹನಗಳು ಹತ್ತಿರದಲ್ಲಿಯೇ ಇದ್ದಾಗಲೂ ಯುವಕರು ಈ ದುಸ್ಸಾಹಸಕ್ಕೆ ಮುಂದಾಗಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಈ ಘಟನೆ ಮೈಸೂರಿನ ರಸ್ತೆಯೊಂದರಲ್ಲಿ ರಾತ್ರಿ ನಡೆದಿರುವುದಾಗಿ ವರದಿಯಾಗಿದೆ. ವೀಡಿಯೊ ದಲ್ಲಿ, ಇಬ್ಬರು ಯುವಕರು ಮುಂಭಾಗದ ಟೈರ್ ಅನ್ನು ನೆಲದಿಂದ ಎತ್ತಿ ಸ್ಕೂಟರ್ ಸವಾರಿ ಮಾಡುತ್ತಾ ವೀಲಿಂಗ್ ಮಾಡಿದ್ದಾರೆ. ಅವರು ಹಲವಾರು ಮೀಟರ್‌ಗಳವರೆಗೆ ಅದೇ ರೀತಿಯಾಗಿ ಸವಾರಿ ಮಾಡುವುದನ್ನು ಮುಂದುವರಿಸುತ್ತಾರೆ. ಅಚ್ಚರಿಯ ವಿಚಾರ ಏನಂದ್ರೆ ಇವರು ಈ ಸಾಹಸವನ್ನು ಮಾಡುತ್ತಿರುವಾಗಲೇ ಪಕ್ಕದಲ್ಲಿ ಪೊಲೀಸ್ ಜೀಪ್ ಸಾಗುತ್ತಿರುತ್ತದೆ.

ವಿಡಿಯೊ ನೋಡಿ:



ಅಷ್ಟೇ ಅಲ್ಲದೆ, ಮುಂದೆ ಹೋಗುತ್ತಿದ್ದ ಪೊಲೀಸ್ ಸಿಬ್ಬಂದಿಯ ಬೈಕನ್ನು ಕೂಡ ಓವರ್‌ಟೇಕ್ ಮಾಡಿದ್ದಾರೆ. ಪೊಲೀಸರ ವಾಹನದ ಕೆಂಪು-ನೀಲಿ ದೀಪಗಳು ಉರಿಯುತ್ತಿದ್ದರೂ, ಪೊಲೀಸರು ಪಕ್ಕದಲ್ಲೇ ಇದ್ದರೂ ಕಿಂಚಿತ್ತೂ ಭಯವಿಲ್ಲದೆ ಯುವಕರು ಕಿಲೋ ಮೀಟರ್‌ಗಟ್ಟಲೆ ವ್ಹೀಲಿಂಗ್‌ ಮುಂದುವರಿಸಿದ್ದಾರೆ. ಈ ವಿಡಿಯೊ 'ಕರ್ನಾಟಕ ಪೋರ್ಟ್‌ಫೋಲಿಯೋ' ಎಂಬ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮರೆಯಾದ ಮಾನವೀಯತೆ! ರಸ್ತೆಬದಿಯಲ್ಲಿ ಬಿದ್ದಿದ್ದ ವ್ಯಕ್ತಿಯ ಶೂ ಕದ್ದ ಕಸ ಆಯುವ ವ್ಯಕ್ತಿ

ಪೊಲೀಸರು ಹತ್ತಿರ ಇರುವಾಗಲೇ ಇಂತಹ ಕೃತ್ಯಗಳು ಹೇಗೆ ನಡೆಯಬಹುದು ಎಂದು ಹಲವರು ಪ್ರಶ್ನಿಸಿದ್ದಾರೆ. ವಾಹನ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಒಬ್ಬರು, ಅಧಿಕೃತ ಪೊಲೀಸ್ ಖಾತೆಗಳನ್ನು ಟ್ಯಾಗ್ ಮಾಡಿ, “ದಯವಿಟ್ಟು ಗಮನಿಸಿ... ಅಪರಾಧಿಗಳನ್ನು ಬಂಧಿಸಿ ಮತ್ತು ‌ಇತರರಿಗೆ ಹಾನಿ ಮಾಡಿಕೊಳ್ಳುವ ಮೊದಲು ಅವರಿಗೆ ದಂಡ ವಿಧಿಸಿ” ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ʼʼದಯವಿಟ್ಟು ಈ ಕೃತ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ ಜನರು ಪೊಲೀಸರ ಮೇಲಿನ ಭರವಸೆ ಕಳೆದು ಕೊಳ್ಳುತ್ತಾರೆʼʼ ಎಂದು ಬರೆದಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮೈಸೂರು ಪೊಲೀಸರು ಸಿಸಿಟಿವಿ ದೃಶ್ಯಾವಳಿ ಮತ್ತು ವೈರಲ್ ವಿಡಿಯೊ ಆಧರಿಸಿ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.