31 ವರ್ಷದ ಜ್ಯೋತಿರಾದಿತ್ಯ ಸಿಂದ್ಯಾ ಪುತ್ರನ ಕಾಲಿಗೆರಗಿದ 73 ವರ್ಷದ ಬಿಜೆಪಿ ಶಾಸಕ; ವಿಡಿಯೊ ವೈರಲ್
ಮಧ್ಯ ಪ್ರದೇಶದ ಶಿವಪುರಿಯ ಬಿಜೆಪಿ ಶಾಸಕ, 73 ವರ್ಷದ ದೇವೇಂದ್ರ ಕುಮಾರ್ ಜೈನ್ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಸಂಸದ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂದ್ಯಾ ಅವರ ಪುತ್ರ 31 ವರ್ಷದ ಮಹಾಆರ್ಯಮನ್ ಸಿಂದ್ಯಾ ಅವರ ಕಾಲಿಗೆ ಎರಗಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ದೇವೇಂದ್ರ ಕುಮಾರ್ ಜೈನ್ ಮತ್ತು ಮಹಾಆರ್ಯಮನ್ ಸಿಂದ್ಯಾ -
ಭೋಪಾಲ್, ಜ. 8: 73 ವರ್ಷದ ಬಿಜೆಪಿ ಶಾಸಕ ದೇವೇಂದ್ರ ಕುಮಾರ್ ಜೈನ್ (Devendra Kumar Jain) ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಸಂಸದ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂದ್ಯಾ ಅವರ ಪುತ್ರ 31 ವರ್ಷದ ಮಹಾಆರ್ಯಮನ್ ಸಿಂದ್ಯಾ (Mahaaryaman Scindia) ಅವರ ಕಾಲಿಗೆ ಎರಗಿದ್ದು, ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ (Virla Video). ಮಧ್ಯ ಪ್ರದೇಶದ ಶಿವಪುರಿಯಲ್ಲಿ ಆಯೋಜಿಸಿದ್ದ ಕ್ರೀಡಾ ಕಾರ್ಯಕ್ರಮವೊಂದರಲ್ಲಿ ಸ್ಥಳೀಯ ಶಾಸಕ ದೇವೇಂದ್ರ ಕುಮಾರ್ ಜೈನ್ ತಮಗಿಂತ 42 ವರ್ಷ ಕಿರಿಯವರಾದ ಮಹಾಆರ್ಯಮನ್ ಸಿಂದ್ಯಾ ಅವರ ಆಶೀರ್ವಾದ ಪಡೆದಿದ್ದು ಸಾಕಷ್ಟು ಟೀಕೆಗೆ ಗುರಿಯಾಗಿದೆ.
ಶಿವಪುರಿ ಜಿಲ್ಲಾ ಮೈದಾನದಲ್ಲಿ ಸೋಮವಾರ (ಜನವರಿ 5) ಆಯೋಜಿಸಿದ್ದ 69ನೇ ರಾಷ್ಟೀಯ ಸ್ಕೂಲ್ ಗೇಮ್ಸ್ ಉದ್ಘಾಟನೆ ವೇಳೆ ನಡೆದ ಈ ಘಟನೆಯ 11 ಸೆಕೆಂಡ್‌ನ ವಿಡಿಯೊ ಇದೀಗ ಚರ್ಚೆಯ ಕೇಂದ್ರ ಬಿಂದು ಎನಿಸಿಕೊಂಡಿದೆ.
ಜನವರಿ 5ರಂದು ದೇವೇಂದ್ರ ಕುಮಾರ್ ಜೈನ್ ಅವರ ಜನ್ಮದಿನವೂ ಹೌದು. ರಾಷ್ಟೀಯ ಸ್ಕೂಲ್ ಗೇಮ್ಸ್ ಉದ್ಘಾಟನೆಯ ವೇಳೆ ಅವರು ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು. ಇದೇ ವೇಳೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಮಹಾಆರ್ಯಮನ್ ಸಿಂದ್ಯಾ ಅವರ ಕಾಲಿಗೆ ದೇವೇಂದ್ರ ಕುಮಾರ್ ಜೈನ್ ಎರಗಿದ್ದು ವಿಡಿಯೊದಲ್ಲಿ ಕಂಡು ಬಂದಿದೆ.
ವೈರಲ್ ವಿಡಿಯೊ ಇಲ್ಲಿದೆ:
ये शिवपुरी से 3 दफे बीजेपी विधायक श्री देवेन्द्र जैन हैं, उम्र 73 साल
— Anurag Dwary (@Anurag_Dwary) January 8, 2026
जिनके पैर छू रहे हैं वो महाआर्यमन सिंधिया हैं, उम्र 31 साल.
सवाल उठे तो माननीय ने कहा किस संविधान में लिखा है कि अपने से छोटे व्यक्ति के पैर छूना गलत है. महाआर्यमन ने उनके जन्मदिन पर केक मंगवाया, कटवाया और खड़े… pic.twitter.com/FyLokpjP0D
ವೈಯಕ್ತಿಕ ನಿರ್ಧಾರ
ಆರಂಭದಲ್ಲಿ ಕೇಕ್ ಕತ್ತರಿಸಿದ ದೇವೇಂದ್ರ ಕುಮಾರ್ 31 ವರ್ಷದ ಮಹಾಆರ್ಯಮನ್ ಸಿಂದ್ಯಾ ಆಶೀರ್ವಾದ ಪಡೆದರು. ತಮಗಿಂತ ಕಿರಿಯ ವ್ಯಕ್ತಿಯ ಕಾಲಿಗೆರಗಿದ ದೇವೇಂದ್ರ ಕುಮಾರ್ ಅವರ ನಡೆಗೆ ನೆಟ್ಟಿಗರು ಕಿಡಿಕಾರಿದ್ದಾರೆ. ಈ ಬಗ್ಗೆ ಸುದ್ದಿಸಂಸ್ಥೆ ಎನ್‌ಡಿಟಿವಿ ಜತೆ ಮಾತನಾಡಿದ ಶಾಸಕ ದೇವೇಂದ್ರ ಕುಮಾರ್, ʼʼವ್ಯಕ್ತಿಯೊಬ್ಬರ ಪಾದ ಸ್ಪರ್ಶಿಸುವ ಮೂಲಕ ಅವರಿಗೆ ಗೌರವ ಸಲ್ಲಿಸುವುದು ವೈಯಕ್ತಿಕ ನಿರ್ಧಾರ. ಇದು ಯಾವುದೇ ನಿಯಮದ ಉಲ್ಲಂಘನೆಯಲ್ಲʼʼ ಎಂದು ತಿಳಿಸಿದ್ದಾರೆ.
ʼʼನಮಗಿಂತ ಕಿರಿಯರ ಕಾಲಿಗೆ ಎರಗಬಾರದು ಎಂದು ಸಂವಿಧಾನದಲ್ಲಿ ಬರೆದಿಲ್ಲ. ಕೆಲವರು, ನನ್ನ ವಿರೋಧಿಗಳು ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟು ವೈರಲ್ ಮಾಡುತ್ತಿದ್ದಾರೆ. ಇದರಿಂದ ನನಗೆ ಯಾವ ತೊಂದರೆಯೂ ಆಗುವುದಿಲ್ಲʼʼ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.
ಕೇರಳದಲ್ಲಿ ಯುಡಿಎಫ್ ಗೆದ್ದರೆ ಗೃಹ ಇಲಾಖೆಯನ್ನು ಜಮಾತೆ ಇಸ್ಲಾಮಿ ನಿರ್ವಹಿಸಲಿದೆ; ಸಿಪಿಎಂ ನಾಯಕ
ತಮ್ಮ ಹುಟ್ಟುಹಬ್ಬ ಇರುವ ಬಗ್ಗೆ ಮೊದಲೇ ಮಹಾಆರ್ಯಮನ್ ಸಿಂದ್ಯಾಗೆ ತಿಳಿದಿತ್ತು ಎಂದು ಹೇಳಿದ್ದಾರೆ. ʼʼಅಂದು ನನ್ನ ಹುಟ್ಟುಹಬ್ಬ ಎಂದು ತಿಳಿದು ಸಿಂದ್ಯಾ ಕೇಕ್ ತರಿಸಿ ಅದನ್ನು ವೇದಿಕೆ ಮೇಲೆ ಕಟ್ ಮಾಡಿಸಿದರು. ಜತೆಗೆ ಜನ್ಮದಿನದ ಸಾಂಪ್ರಾದಾಯಿಕ ಹಾಡು ಹಾಡಿದರು. ಇದು ನನ್ನನ್ನು ತುಂಬ ಭಾವುಕನನ್ನಾಗಿತು. ಅವರ ಪ್ರೀತಿ ನನ್ನನ್ನು ಮೂಕನನ್ನಾಗಿಸಿತು. ಅ ಕ್ಷಣಕ್ಕೆ ಏನು ಮಾಡಬೇಕೆಂದು ತೋಚಲಿಲ್ಲ. ಅವರ ಕಾಲು ಸ್ಪರ್ಶಿಸಿ ನನ್ನ ಗೌರವ ಸಲ್ಲಿಸಿದೆ. ಇದು ನನ್ನ ತೀರಾ ವೈಯಕ್ತಿಕ ನಿರ್ಧಾರʼʼ ಎಂದು ತಿಳಿಸಿದ್ದಾರೆ. ಆ ಮೂಲಕ ಈ ಬಗ್ಗೆ ಚರ್ಚೆಯ ಅಗತ್ಯವಿಲ್ಲ ಎನ್ನುವ ಸಂದೇಶವನ್ನು ಪರೋಕ್ಷವಾಗಿ ಸಾರಿದ್ದಾರೆ.
ʼʼಹೇಗೆ ವರ್ತಿಸಬೇಕು ಎನ್ನುವುದನ್ನು ತಿಳಿಯದ ಚಿಕ್ಕ ಮಗುವೇನಲ್ಲ ನಾನು. 3 ಬಾರಿ ಶಾಸಕನಾಗಿದ್ದೇನೆʼʼ ಎಂದು ಕಿಡಿಕಾರಿದ್ದಾರೆ. ಸದ್ಯ ವಿಡಿಯೊ ಬಗ್ಗೆ ಬಿಜೆಪಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.