ಲಖನೌ: ಉತ್ತರ ಪ್ರದೇಶದ ದಂಕೌರ್ ಬಳಿಯ ಬಿಲಾಸ್ಪುರ ಪಟ್ಟಣದಲ್ಲಿ ಬಿಜೆಪಿ ನಾಯಕನೊಬ್ಬ ಹಾಡಹಗಲೇ ಮಹಿಳೆ ಮತ್ತು ಆಕೆಯ ಮಗನನ್ನು ಚಪ್ಪಲಿಯಿಂದ ಕ್ರೂರವಾಗಿ ಥಳಿಸಿದ್ದ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಈ ಆಘಾತಕಾರಿ ಘಟನೆಯ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಈ ಘಟನೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು,ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕಸ್ನಾ ಮಂಡಲದಲ್ಲಿ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಅತಿಕ್ ಅಹ್ಮದ್ ಎಂಬಾತ ಮಹಿಳೆ ಮತ್ತು ಆಕೆಯ ಮಗನ ಮೇಲೆ ಹಲ್ಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದ್ದು, ಇದೀಗ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
ಅಧಿಕಾರಿಗಳ ಪ್ರಕಾರ, ಅಸ್ಸಾಂ ಮೂಲದ ಈ ಸಂತ್ರಸ್ತ ಮಹಿಳೆ ಮತ್ತು ಆಕೆಯ ಮಗ ಬಿಲಾಸ್ಪುರದ ಅತಿಕ್ ಅಹ್ಮದ್ ಅವನ ಜಮೀನಿನಲ್ಲಿ ತಾತ್ಕಾಲಿಕ ಗುಡಿಸಲನ್ನು ಕಟ್ಟಿಕೊಂಡು ವಾಸವಾಗಿದ್ದರು. ಇಬ್ಬರೂ ತ್ಯಾಜ್ಯ ಸಂಗ್ರಹಿಸುವ ಮೂಲಕ ಜೀವನ ನಡೆಸುತ್ತಿದ್ದರು. ಆದರೆ ಈ ಬಿಜೆಪಿ ನಾಯಕನಿಂದ ಮಹಿಳೆ ಸಾಲ ಪಡೆದಿದ್ದು, ಈ ಸಾಲದ ವಿವಾದಕ್ಕೆ ಸಂಬಂಧಿಸಿದಂತೆ ಈ ಹಲ್ಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಡ್ಡಿಗೆ ಹಣ ನೀಡುವ ಅತಿಕ್ ಅಹ್ಮದ್, ಒಪ್ಪಂದದ ಸಮಯದೊಳಗೆ ಸಾಲ ಪಡೆದ ಮೊತ್ತವನ್ನು ಮರುಪಾವತಿಸಲು ಮಹಿಳೆ ವಿಫಲವಾದ ಕಾರಣ ಆಕೆ ಹಾಗೂ ಆಕೆಯ ಮಗನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಮೂಲಗಳು ಬಹಿರಂಗಪಡಿಸಿವೆ. ವೈರಲ್ ಆದ ವಿಡಿಯೊದಲ್ಲಿ,ಆತ ಮಹಿಳೆ ಮತ್ತು ಆಕೆಯ ಮಗನನ್ನು ನಿಂದಿಸುತ್ತಾ ಚಪ್ಪಲಿಯಿಂದ ಪದೇ ಪದೇ ಹೊಡೆಯುತ್ತಿರುವುದು ಸೆರೆಯಾಗಿದೆ.
ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಯಾವುದೇ ಔಪಚಾರಿಕ ದೂರು ನೀಡಿಲ್ಲ ಎಂದು ವರದಿಯಾಗಿದೆ. ಆದರೆ, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಗೋಡೆ ಕೊರೆದು ಮೊಬೈಲ್ ಅಂಗಡಿಗೆ ಕನ್ನ ಹಾಕಿದ ಕಿಲಾಡಿ ಕಳ್ಳ- ವಿಡಿಯೊ ಇಲ್ಲಿದೆ ನೋಡಿ
ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 151 ರ ಅಡಿಯಲ್ಲಿ ಅತಿಕ್ ಅಹ್ಮದ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.