ಮಧ್ಯಪ್ರದೇಶ,ಅ.5: ಖರ್ಗೋನ್ ಕ್ಷೇತ್ರದ ಬಿಜೆಪಿ ಸಂಸದ ಗಜೇಂದ್ರ ಸಿಂಗ್ ಪಟೇಲ್ ಅವರ ಹೇಳಿಕೆಯೊಂದು ಇದೀಗ ಚರ್ಚೆಗೆ (Viral News) ಗ್ರಾಸವಾಗಿದೆ. ಮಧ್ಯಪ್ರದೇಶದ ಬರ್ವಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಮದುವೆ ಮತ್ತು ಮಕ್ಕಳ ಕುರಿತು ಚರ್ಚಾತ್ಮಕ ಹೇಳಿಕೆ ನೀಡಿದ್ದಾರೆ. ಸನಾತನ ಧರ್ಮದ ಜನರು ಕನಿಷ್ಠ 4 ರಿಂದ 5 ಮಕ್ಕಳನ್ನು ಹೊಂದಬೇಕು ಹಾಗೂ ಇಪ್ಪತ್ತರ ಹರೆಯದಲ್ಲೇ ಮದುವೆಯಾಗುವ ರೂಢಿ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದ್ದಾರೆ.
ಸಾಂಪ್ರದಾಯಿಕ ಕುಟುಂಬ ಒಗ್ಗೂಡುವಿಕೆಯ ಬಗ್ಗೆ ಮಾತನಾಡಿದ ಅವರು ಹಿಂದೆ ಕುಟುಂಬಗಳು ದೊಡ್ಡದಾಗಿದ್ದವು. ಆದರೆ ಇಂದು ಕುಟುಂಬವನ್ನು ಬೆಳೆಸುವ ಮೌಲ್ಯ ಕಡಿಮೆಯಾಗಿದೆ. ಹಿಂದಿನ ಕಾಲದಲ್ಲಿ ಜನರು ಐದು, ಏಳು ಅಥವಾ ಹತ್ತು ಒಡಹುಟ್ಟಿದವರನ್ನು ಹೊಂದಿದ್ದರು. ಇಂದಿನ ಆಧುನಿಕ ಜಗತ್ತಿನಲ್ಲಿ ಕುಟುಂಬದ ಗಾತ್ರಗಳು ಚಿಕ್ಕದಾಗಿವೆ ಎಂದು ಅವರು ಹೇಳಿದರು.
ವಿಡಿಯೋ ನೋಡಿ:
ಪಟೇಲ್ ಅವರು ಸಮುದಾಯವು ತನ್ನ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ತನ್ನ ಕುಟುಂಬ ವಂಶಾವಳಿಯನ್ನು ವಿಸ್ತರಿಸಲು ಒತ್ತಾಯಿಸಿದ್ದಾರೆ. ಅದೇ ರೀತಿ ಪ್ರಸ್ತುತ ಜನರು 30 ರಿಂದ 35 ವರ್ಷಕ್ಕೆ ಮದುವೆಯಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಅವರು, ಸನಾತನ ಧರ್ಮದ ಯುವಕರು 20, 22 ಅಥವಾ 23 ನೇ ವಯಸ್ಸಿನಲ್ಲೇ ಮದುವೆಯಾಗುವ ಅಭ್ಯಾಸ ಬೆಳೆಸಿಕೊಳ್ಳಿ ಎಂದರು.
ಕುಟುಂಬದ ಗಾತ್ರವನ್ನು ಹೆಚ್ಚಿಸುವುದು ಮತ್ತು ಸಮುದಾಯದ ಜನಸಂಖ್ಯೆಯನ್ನು ಕಾಯ್ದು ಕೊಳ್ಳುವುದು ದೇಶದ ಏಕತೆಯನ್ನು ಬಲಪಡಿಸುತ್ತದೆ ಎಂದು ಕರೆ ನೀಡಿದ್ದಾರೆ. ಸದ್ಯ ಅವರ ಈ ಹೇಳಿಕೆಯು ದೇಶದಲ್ಲಿ ಜನಸಂಖ್ಯಾ ನಿಯಂತ್ರಣ, ಕುಟುಂಬ ಯೋಜನೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.