ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪ್ರಧಾನಿ ಮೋದಿಯ ಎಡಿಟೆಡ್‌ ಫೋಟೊ ಹರಿಯಬಿಟ್ಟ ಕಾಂಗ್ರೆಸ್‌ ನಾಯಕನಿಗೆ ಸೀರೆ ಉಡಿಸಿದ ಬಿಜೆಪಿ ಕಾರ್ಯಕರ್ತರು

Viral Video: ಪ್ರಧಾನಿ ಮೋದಿ ಅವರ ಮೋರ್ಪ್‌ ಮಾಡಿರುವ ಫೋಟೊವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ಮಹಾರಾಷ್ಟ್ರದ ಕಾಂಗ್ರೆಸ್‌ ನಾಯಕ ಪ್ರಕಾಶ್‌ ಮಾಮ ಪಗಾರೆ ವಿರುದ್ಧ ಬಿಜೆಪಿ ಕಾರ್ಯಕರ್ತರು ಸೇಡು ತೀರಿಸಿಕೊಂಡಿದ್ದಾರೆ. ಅವರಿಗೆ ಸೀರೆ ಉಡಿಸಿ ಅದನ್ನು ವಿಡಿಯೊ ಮಾಡಿದ್ದಾರೆ. ಸದ್ಯ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಮೋದಿಯ ಎಡಿಟೆಡ್‌ ಫೋಟೊ ಪೋಸ್ಟ್‌ ಮಾಡಿದವನಿಗೆ ಸೀರೆ ಉಡಿಸಿದರು!

-

Ramesh B Ramesh B Sep 23, 2025 9:05 PM

ಮುಂಬೈ: ಪ್ರಧಾನಿ ಮೋದಿ (PM Modi) ಅವರ ಮೋರ್ಪ್‌ (ಎಡಿಟ್‌ ಮಾಡಲ್ಪಟ್ಟ) ಮಾಡಿರುವ ಫೋಟೊವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ಮಹಾರಾಷ್ಟ್ರದ ಕಾಂಗ್ರೆಸ್‌ ನಾಯಕನ ವಿರುದ್ಧ ಬಿಜೆಪಿ ಕಾರ್ಯಕರ್ತರು ವಿಭಿನ್ನವಾಗಿ ಸೇಡು ತೀರಿಸಿಕೊಂಡಿದ್ದು, ಸೀರೆ ಉಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಚಾರ ದೇಶಾದ್ಯಂತ ಚರ್ಚೆ ಹುಟ್ಟು ಹಾಕಿದ್ದು, ತಮ್ಮನ್ನು ಅವಮಾನಿಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ದೂರು ನೀಡುವುದಾಗಿ ಕಾಂಗ್ರೆಸ್‌ ನಾಯಕ ಪ್ರಕಾಶ್‌ ಮಾಮ ಪಗಾರೆ (Prakash "Mama" Pagare) ಗುಡುಗಿದ್ದಾರೆ. ಸದ್ಯ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ (Viral Video) ಆಗಿದೆ.

ಉಲ್ಹಾಸ್‌ನಗರದ ಕಾಂಗ್ರೆಸ್‌ ನಾಯಕ, 73 ವರ್ಷದ ಪ್ರಕಾಶ್‌ ಪಗಾರೆ ಎಡಿಟ್‌ ಮಾಡಲಾದ, ಪ್ರಧಾನಿ ಮೋದಿ ಅವರನ್ನು ಅವಹೇಳನಕಾರಿಯಾಗಿ ಚಿತ್ರಿಸಿರುವ ಫೋಟೊವನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದರು. ಇದರಿಂದ ಅಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕ ಸ್ಥಳದಲ್ಲಿ ಅವರಿಗೆ ಬಲವಂತವಾಗಿ ಸೀರೆ ಉಡಿಸಿ ಅದನ್ನು ಚಿತ್ರೀಕರಿಸಿದ್ದಾರೆ. ಮಹಾರಾಷ್ಟ್ರದ ಡೊಂಬಿವಲಿಯಲ್ಲಿ ಮಂಗಳವಾರ (ಸೆಪ್ಟೆಂಬರ್‌ 23) ಘಟನೆ ನಡೆದಿದೆ.

ವೈರಲ್‌ ವಿಡಿಯೊ:



ಈ ಸುದ್ದಿಯನ್ನೂ ಓದಿ: Viral News: ರಿಸರ್ವೇಶನ್‌ ಸೀಟಿನಲ್ಲಿ ಕಾಲು ಚಾಚಿ ಕೂತ ಸಹಪ್ರಯಾಣಿಕ; ಆಮೇಲೆ ಆಗಿದ್ದೇನು ಗೊತ್ತಾ?

ವಿಡಿಯೊದಲ್ಲಿ ಏನಿದೆ?

ಮಂಗಳವಾರ ಬೆಳಗ್ಗೆ ಬಿಜೆಪಿಯ ಕಲ್ಯಾಣ್‌ ಘಟಕದ ಅಧ್ಯಕ್ಷ ನಂದು ಪರಬ್‌ ಮತ್ತು ಕಾರ್ಯಕರ್ತರು ಪಗಾರೆ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ಅಂಗಡಿ ಮುಂದೆ ಪಗಾರೆ ಒಂಟಿಯಾಗಿ ನಿಂತಿದ್ದಾಗ ಬಿಜೆಪಿ ಕಾರ್ಯಕರ್ತರು ಅವರ ಬಳಿಗೆ ತೆರಳಿದರು. ಬಳಿಕ ಕೆಲವರು ಅವರನ್ನು ಹಿಡಿದುಕೊಂಡರೆ ಇನ್ನು ಕೆಲವರು ಪಿಂಕ್‌ ಬಣ್ಣದ ಸೀರೆಯನ್ನು ಪಗಾರೆ ಅವರಿಗೆ ಬಲವಂತವಾಗಿ ಉಡಿಸಿದರು. ಈ ವೇಳೆ ಪಗಾರೆ ವಿರೋಧಿಸಿದರೂ ಅದನ್ನು ಗಣನೆಗೆ ತೆಗೆದುಕೊಳ್ಳದ ಬಿಜೆಪಿ ಕಾರ್ಯಕರ್ತರು ಸೀರೆ ಉಡಿಸಿ ಅದನ್ನು ವಿಡಿಯೊ ಮೂಲಕ ಸೆರೆ ಹಿಡಿದರು. ಸದ್ಯ ಈ ದೃಶ್ಯ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ.

ಪಗಾರೆ ʼʼಏನು ಮಾಡುತ್ತೀರಿ?ʼʼ ಎಂದು ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಮೋದಿ ಸೀರೆ ಉಟ್ಟಿರುವಂತೆ ಚಿತ್ರಿಸಿರುವ ಫೋಟೊವನ್ನು ಈ ಹಿಂದೆ ಪಗಾರೆ ಹಂಚಿಕೊಂಡಿದ್ದರಿಂದ ಬಿಜೆಪಿ ಕಾರ್ಯಕರ್ತರು ಈ ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ನಂದು ಪರಬ್‌ ಮಾತನಾಡಿ, ʼʼಪ್ರಧಾನಿ ಮೋದಿ ಅವರನ್ನು ಅವಹೇಳನಕಾರಿಯಾಗಿ ಚಿತ್ರಿಸಿರುವ ಪೋಸ್ಟ್‌ ಶೇರ್‌ ಮಾಡಿರುವುದು ಅಪರಾಧ ಮಾತ್ರವಲ್ಲ ಅದನ್ನು ಕ್ಷಮಿಸಲು ಸಾಧ್ಯವಿಲ್ಲ. ಇದೇ ರೀತಿಯ ತಪ್ಪು ಮುಂದೆಯೂ ಮಾಡಿದರೆ ಬಿಜೆಪಿ ಇದಕ್ಕಿಂತ ಕಠಿಣ ಶಿಕ್ಷೆ ನೀಡಲಿದೆʼʼ ಎಂದು ಎಚ್ಚರಿಸಿದ್ದಾರೆ.



ಮತ್ತೋರ್ವ ಬಿಜೆಪಿ ನಾಯಕ ನರೇಂದ್ರ ಶರ್ಮಾ ಆಕ್ರೋಶ ವ್ಯಕ್ತಪಡಿಸಿ, ʼʼಕಾಂಗ್ರೆಸ್‌ ನಾಯಕ ಪ್ರಕಾಶ್‌ ಪಗಾರೆ ಅವರಂತೆ ಪ್ರಧಾನಿ ಮೋದಿ ಅವರನ್ನು ಅವಮಾನಿಸಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಇದೇ ರೀತಿಯ ಘಟನೆ ಪುನರಾವರ್ತನೆಯಾದರೆ ನಮ್ಮ ಕಾರ್ಯಕರ್ತರು ಇಂತಹ ಶಿಕ್ಷೆಯನ್ನೇ ನೀಡಲಿದ್ದಾರೆʼʼ ಎಂದು ತಿಳಿಸಿದ್ದಾರೆ.

ಈ ಘಟನೆಯನ್ನು ಕಾಂಗ್ರೆಸ್‌ ಖಂಡಿಸಿದೆ. ತಮ್ಮ ಮೇಲೆ ದಾಳಿ ನಡೆಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ದೂರು ನೀಡುವುದಾಗಿ ಪ್ರಕಾಶ್‌ ಪಗಾರೆ ತಿಳಿಸಿದ್ದಾರೆ. ಇದು ಅಭಿವ್ಯಕ್ತಿ ಸ್ವಾತಂತ್ರದ ಮೇಲಿನ ದಾಳಿ ಎಂದು ಕಾಂಗ್ರೆಸ್‌ ಬಣ್ಣಿಸಿದೆ.