ನವದೆಹಲಿ, ಅ. 25: ಪ್ರತಿಯೊಬ್ಬರಿಗೂ ಸ್ವಂತ ವಾಹನ ಖರೀದಿಸಬೇಕು, ಕುಟುಂಬ ಜತೆ ಟ್ರಿಪ್ ಹೋಗಬೇಕು ಹೀಗೆ ನಾನಾ ರೀತಿಯ ಕನಸು ಇರುತ್ತದೆ. ಆದರೆ ಎಲ್ಲರಿಗೂ ಈ ಕನಸನ್ನು ನನಸು ಮಾಡಲು ಸಾಧ್ಯ ಆಗೋದಿಲ್ಲ. ಇದೀಗ ಡೆಲಿವರಿ ಬಾಯ್ ಒಬ್ಬರಿಗೆ ಅನಂತ್ ಅಂಬಾನಿ ಸ್ಕೂಟರ್ ಉಡುಗೊರೆಯಾಗಿ ನೀಡಿದ್ದಾರೆ (Viral News). ಬ್ಲಿಂಕ್‌ಇಟ್‌ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಸುಜಿತ್ ಪ್ರತಿದಿನ ಸೈಕಲ್ ಮೂಲಕವೇ ಸರಕುಗಳನ್ನು ತಲುಪಿಸಿ ಜೀವನ ಸಾಗಿಸುತ್ತಿದ್ದರು. ಇದೀಗ ಅವರು ಉಡುಗೊರೆಯಾಗಿ ಸಿಕ್ಕ ಸ್ಕೂಟರ್ ನೋಡಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.
ಬ್ಲಿಂಕ್‌ಇಟ್ ವಿತರಣಾ ಕೆಲಸಗಾರನೊಬ್ಬ ಹೊಚ್ಚಹೊಸ ಸ್ಕೂಟರ್ ನೋಡಿ ಆಶ್ಚರ್ಯ ಚಕಿತನಾದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಸಾಮಾಜಿಕ ಕಾರ್ಯಕರ್ತ ಹುಸೇನ್ ಮನ್ಸೂರ್ ಸ್ಕೂಟರ್ ವ್ಯವಸ್ಥೆ ಮಾಡಿದ್ದು, ಸುಜಿತ್ ಕಣ್ಣಿಗೆ ಬಟ್ಟೆ ಕಟ್ಟಿ ಕರೆತಂದು ಉಡುಗೊರೆಯಾಗಿ ನೀಡಿದ್ದಾರೆ.
ವಿಡಿಯೊ ನೋಡಿ:
ವಿಡಿಯೊದಲ್ಲಿ ಸುಜಿತ್ ಜತೆಗೆ ಕಾಣಿಸಿಕೊಂಡಿರುವ ಸಾಮಾಜಿಕ ಕಾರ್ಯಕರ್ತ ಹುಸೇನ್ ಮನ್ಸೂರಿ ಈ ಉಡುಗೊರೆಯನ್ನು ಅನಂತ್ ಅಂಬಾನಿ ನೀಡಿದ್ದಾಗಿ ಹೇಳಿದ್ದಾರೆ. ಸದ್ಯ ಅಂಬಾನಿ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯುವಕರಿಗೆ ಕಿರುಕುಳ ನೀಡಿ ತಾವೇ ಬಟ್ಟೆ ಹರಿದುಕೊಂಡ ಕಿʼಲೇಡಿʼಗಳು
ಡೆಲಿವರಿ ಸಿಬ್ಬಂದಿಯ ಕಣ್ಣಿನ ಬಟ್ಟೆ ಬಿಚ್ಚಿದ ತಕ್ಷಣವೇ ತನಗೆ ಸಿಕ್ಕ ಹೊಸ ಸ್ಕೂಟರ್ ನೋಡಿ ಸುಜಿತ್ ಆನಂದಭಾಷ್ಪ ಸುರಿಸಿದ್ದಾರೆ. ಈ ಭಾವುಕ ಪ್ರತಿಕ್ರಿಯೆ ನೆಟ್ಟಿಗರ ಮನಸ್ಸು ಗೆದ್ದಿದೆ.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಅನಂತ್ ಅಂಬಾನಿ ಅವರ ನಿಸ್ವಾರ್ಥ ಸೇವೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಳಕೆದಾರರೊಬ್ಬರು ಈ ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದು, "ಹಣವಿರುವುದು ಬೇರೆ. ಆದರೆ ಬೇರೆಯವರ ಸಂತೋಷಕ್ಕಾಗಿ ಮಿಡಿಯುವುದು ಬೇರೆ. ಅನಂತ್ ಅಂಬಾನಿ ಅವರ ಈ ಉಡುಗೊರೆ ಎಲ್ಲರನ್ನು ಭಾವುಕವಾಗುವಂತೆ ಮಾಡಿದೆ'' ಎಂದು ಹೇಳಿದ್ದಾರೆ.