ನವದೆಹಲಿ,ಆ. 21: ಪ್ಲಾಸ್ಟಿಕ್ ಸಮಸ್ಯೆ ಎನ್ನುವುದು ಇಂದು ಪರಿಸರ ಸಂರಕ್ಷಣೆಗೆ ದೊಡ್ಡ ಸವಾಲಾಗಿದೆ. ಈ ತ್ಯಾಜ್ಯಗಳು ನೂರಾರು ವರ್ಷಗಳ ಕಾಲ ಪರಿಸರದಲ್ಲಿ ಹಾಗೆಯೇ ಉಳಿ ಯಲಿದ್ದು ಕೊಳೆತು ಹೋಗುವುದಿಲ್ಲ. ಹೀಗಾಗಿ ಪ್ಲಾಸ್ಟಿಕ್ ಬಳಕೆ ಕೆಲವೆಡೆ ನಿಷೇಧ ಮಾಡಲಾಗಿದೆ. ಆದರೆ ಇಲ್ಲೊಬ್ಬರು ಅದೇ ಹಳೆಯ ಪ್ಲಾಸ್ಟಿಕ್ ಮತ್ತು ಕಸ ತ್ಯಾಜ್ಯ ಉಪಯೋಗಿಸಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಕೆಜಿಗೆ 13 ರೂ.ಗೆ ಬಿಸಾಕುವ ಪ್ಲಾಸ್ಟಿಕ್ ಖರೀದಿಸಿ ಅದನ್ನು ಮಾಸಿಕ 40 ಲಕ್ಷ ರೂ.ಗಳ ವ್ಯವಹಾರವನ್ನಾಗಿ ಮಾಡುತ್ತಿದ್ದಾರೆ. ಅದನ್ನು ಸಂಸ್ಕರಿಸಿ ಲಾಭಗಳಿಸುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ (Viral News) ಸುದ್ದಿಯಾಗಿದ್ದಾರೆ.
ಖ್ಯಾತ ಉದ್ಯಮಿಯೊಬ್ಬರು ಕಡಿಮೆ ದರದಲ್ಲಿ ಬಿಸಾಡುವ ಪ್ಲಾಸ್ಟಿಕ್ ಅನ್ನು ಖರೀದಿಸುತ್ತಾರೆ. ನಂತರ ಅದನ್ನು ಮರುಬಳಕೆ ಮಾಡಿ ಪ್ಲಾಸ್ಟಿಕ್ ಅಗತ್ಯವಿರುವ ಕೈಗಾರಿಕೆಗಳಿಗೆ ಮಾರಾಟ ಮಾಡುವ ಮೂಲಕ ಉದ್ಯಮ ಆರಂಭ ಮಾಡಿದ್ದಾರೆ. ಅವರ ವ್ಯವಹಾರದ ವಿವರಗಳನ್ನು ಪ್ರಥಮ್ ಎಂಬ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.
ಮದುವೆ ಕಾರ್ಯಕ್ರಮವೊಂದರಲ್ಲಿ ಉದ್ಯಮಿಯೂ ರೋಲೆಕ್ಸ್ ವಾಚ್ ಧರಿಸಿರುವುದನ್ನು ಪ್ರಥಮ್ ಎಂಬವರು ಗಮನಿಸಿದ್ದಾರೆ. ಬಳಿಕ ಅವರು ಹಣವನ್ನು ಹೇಗೆ ಗಳಿಸುತ್ತಾರೆ ಎಂಬುದರ ಬಗ್ಗೆ ಕುತೂಹಲದಿಂದ ಕೇಳಿದರು. ಇದಕ್ಕೆ ಅವರು ಸರಳವಾಗಿ "ಪ್ಲಾಸ್ಟಿಕ್ ಬಿಸಿನೆಸ್" ಎಂದು ಹೇಳಿದ್ದು ಬಳಿಕ ಈ ಉದ್ಯಮದ ಹಿಂದಿರುವ ಹಂತದ ಬಗ್ಗೆ ಮಾತನಾಡಿದ್ದಾರೆ.
ಮೊದಲಿಗೆ ತ್ಯಾಜ್ಯ ಬಾಟಲಿಗಳು, ಡಬ್ಬಿಗಳು ಮತ್ತು ಇತರ ಪ್ಲಾಸ್ಟಿಕ್ ಸ್ಕ್ರ್ಯಾಪ್‌ಗಳನ್ನು ಸಂಗ್ರಹಿಸಲಾಗುತ್ತದೆ. ನಂತರ ವಸ್ತುಗಳನ್ನು ವಿಂಗಡಣೆ ಮಾಡಿ ಸ್ವಚ್ಛಗೊಳಿಸಲಾಗುತ್ತದೆ. ಬಳಿಕ ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ ಅನ್ನು ಹರಳಿನ ರೂಪಕ್ಕೆ ಪರಿವರ್ತಿಸಲಾಗುತ್ತದೆ. ಹೀಗೆ ತಯಾರಿಸಿದ ಪ್ಲಾಸ್ಟಿಕ್ ಹರಳುಗಳನ್ನು ಪ್ರತಿ ಕಿಲೋಗೆ 80 ರಿಂದ 90ರ ದರದಲ್ಲಿ ವಿವಿಧ ಉತ್ಪಾದನಾ ಕಂಪನಿಗಳಿಗೆ ಮಾರಾಟವನ್ನು ಮಾಡಲಾಗುತ್ತದೆ.
Viral Video: ಟಿಕೆಟ್ ರಹಿತವಾಗಿ ಪ್ರಯಾಣಿಸಲು ರೈಲಿನ ಶೌಚಾಲಯದಲ್ಲಿ ಕುಳಿತ ಪ್ರಯಾಣಿಕರು
ಈ ಪ್ಲಾಸ್ಟಿಕ್ ಕಣಗಳನ್ನು ವಿವಿಧ ಕೈಗಾರಿಕೆಗಳು ಕಾರಿನ ಭಾಗಗಳು, ಪ್ಯಾಕೇಜಿಂಗ್, ಬಟ್ಟೆ ನಾರುಗಳು, ಪೈಪ್‌ಗಳು, ಗೃಹೋಪಯೋಗಿ ವಸ್ತುಗಳು ಮತ್ತು ಇತರ ಕೈಗಾರಿಕೆಗಳಲ್ಲಿ ಉತ್ಪನ್ನ ಗಳನ್ನು ತಯಾರಿಸಲು ಬಳಸಬಹುದು. ಇಲ್ಲಿನ ಕಾರ್ಖಾನೆಯು ಪ್ರತಿ ತಿಂಗಳು ಸುಮಾರು 50 ಟನ್ ವಸ್ತುಗಳನ್ನು ಸಂಸ್ಕರಿಸುತ್ತದೆ ಎಂದು ಹೇಳಿದ್ದಾರೆ.
ತಿಂಗಳಿಗೆ 50 ಟನ್, ಕೆಜಿಗೆ 80 ರೂ. ಎಂದರೆ ಮಾಸಿಕ ಮಾರಾಟ ಸುಮಾರು 40 ಲಕ್ಷ ರೂ ಎಂದು ಅವರು ಬರೆದಿದ್ದಾರೆ. ಈ ಪೋಸ್ಟ್ ಬಳಕೆದಾರರಿಂದ ಗಮನ ಸೆಳೆದಿದೆ. ತಿರಸ್ಕರಿಸಿದ ವಸ್ತುಗಳನ್ನು ಕೈಗಾರಿಕೆಗಳು ಮತ್ತೆ ಬಳಸಬಹುದಾದ ವಸ್ತುವಾಗಿ ಪರಿವರ್ತಿಸುವ ವಿಧಾನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಳಕೆದಾರರೊಬ್ಬರು ನಾವು ಎಸೆಯುವ ತ್ಯಾಜ್ಯವು ಕೋಟಿಗಟ್ಟಲೆ ಹಣ ಗಳಿಸುತ್ತಿದೆ. ನಿಜಕ್ಕೂ ಬಹಳ ಬುದ್ದಿವಂತಿಕೆಯ ಕೆಲಸ ಅಂದರು. ಮತ್ತೊಬ್ಬರು ಇದು ನಿಜವಾದ ಸೃಜನಶೀಲತೆ, ಕಸವನ್ನು ಹಣವಾಗಿ ಪರಿವರ್ತಿಸಿದ್ದಾರೆ ಎಂದರು.