ಬೆಂಗಳೂರು, ಅ. 22: ಆಧುನಿಕ ಜಗತ್ತಿನಲ್ಲಿ ಪ್ರಾಮಾಣಿಕತೆ ಅನ್ನೋದು ಮರೆಯಾಗಿ ಬಿಟ್ಟಿದೆ. ಅದರಲ್ಲೂ ಮೋಸ, ವಂಚನೆ ಅನ್ನೋದು ಮಿತಿ ಮೀರಿದೆ ಎನ್ನುವ ಮಾತು ಆಗಾಗ ಕೇಳಿ ಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ವ್ಯಕ್ತಿಯೊಬ್ಬರು ರ್ಯಾಪಿಡೋದಲ್ಲಿ ಪ್ರಯಾಣಿಸುವಾಗ ತಮ್ಮ ಮೊಬೈಲ್ ಫೋನ್ ಮರೆತು ಬಿಟ್ಟಿದ್ದರು. ಬಳಿಕ ವಿಚಾರಿಸಿದಾಗ ಚಾಲಕ ಫೋನ್ ಸಿಕ್ಕರೂ ಇಲ್ಲವೆಂದು ಸುಳ್ಳು ಹೇಳಿದ್ದ. ಯಾವುದೇ ಪರಿಹಾರ ಸಿಗದಿದ್ದಾಗ ಮೊಬೈಲ್ ಕಳೆದುಕೊಂಡ ವ್ಯಕ್ತಿ ಬೆಂಗಳೂರು ಪೊಲೀಸರನ್ನು (Viral News) ಸಂಪರ್ಕಿಸಿದ್ದರು.
ರೆಡ್ಡಿಟ್ ಪೋಸ್ಟ್ ಒಂದರಲ್ಲಿ, ತಾವು ತಮ್ಮ ಮ್ಯಾನೇಜರ್ ಜತೆಗೆ ಕೆಲಸದ ನಿಮಿತ್ತ ನಗರಕ್ಕೆ ಬಂದಿದ್ದಾಗಿ ಆ ವ್ಯಕ್ತಿ ವಿವರಿಸಿದ್ದಾರೆ. ಕೆಲಸ ಮುಗಿದ ನಂತರ, ಇಬ್ಬರೂ ಊಟಕ್ಕಾಗಿ ಯಲಹಂಕಕ್ಕೆ ತೆರಳಲೆಂದು ರ್ಯಾಪಿಡೋ ಕ್ಯಾಬ್ ಬುಕ್ ಮಾಡಿದ್ದರು. ಆದರೆ ರೆಸ್ಟೋರೆಂಟ್ಗೆ ತಲುಪಿದ ನಂತರ ತಮ್ಮ ಫೋನ್ ಕ್ಯಾಬ್ನಲ್ಲೇ ಬಿಟ್ಟು ಬಂದಿರುವುದನ್ನು ಗಮನಿಸಿದ್ದಾರೆ.
ಈ ಬಗ್ಗೆ ವಿಚಾರಿಸಿದಾಗ ಚಾಲಕ ಫೋನ್ ಸಿಕ್ಕರೂ ಆರಂಭದಲ್ಲಿ ಇಲ್ಲವೆಂದು ಸುಳ್ಳು ಹೇಳಿ, ನಂತರ ಅದನ್ನು ವಾಪಸ್ ನೀಡಲು 3,000 ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ. ಈ ಬಗ್ಗೆ ಬೇಸರಗೊಂಡ ಪ್ರಯಾಣಿಕ ಯಾವುದೇ ಪರಿಹಾರ ಸಿಗದಿದ್ದಾಗ ಚಿಕ್ಕಜಾಲ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರು.
ವಿಶೇಷವಾಗಿ ಕನ್ನಡ ಬಾರದಿದ್ದ ಕಾರಣ ಕಷ್ಟವಾದರೂ ಪೊಲೀಸರು ತುಂಬಾ ಸಹಾಯ ಮಾಡಿದ್ದಾರೆ ಎಂದು ನೆನಪಿಸಿಕೊಂಡಿದ್ದಾರೆ. ಅವರಲ್ಲಿ ಒಬ್ಬರು ಹಿಂದಿಯಲ್ಲಿ ಸಂವಹನ ನಡೆಸಲು ನಮಗೆ ಸಹಾಯ ಮಾಡಿದರು. ಅವರು ಚಾಲಕನ ವಿವರಗಳನ್ನು ಪಡೆದುಕೊಂಡು, ನೇರವಾಗಿ ಸಂಪರ್ಕಿಸಿದರು ಎಂದಿದ್ದಾರೆ.
ಹರಿಹರ ಕೋಟೆಯ ಕಿರಿದಾದ ಮೆಟ್ಟಿಲ ಮೇಲೆ ಜನಸಾಗರ
ಪೊಲೀಸರು ಚಾಲಕನನ್ನು ಹಿಡಿದು ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿದ್ದಾರೆ. ನಂತರ ಆತನ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿದೆ. ಅವನು ಮತ್ತೆ ಕರೆ ಮಾಡಿ, ಫೋನ್ ಹಿಂತಿರುಗಿಸಲು ಒಪ್ಪಿಕೊಂಡಿದ್ದಾನೆ.
ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಸಕಾಲಕ್ಕೆ ಸ್ಪಂದಿಸಿ ಸಹಾಯ ಮಾಡಿದ ಬೆಂಗಳೂರು ಪೊಲೀಸರ ಕಾರ್ಯಕ್ಕೆ ಆ ವ್ಯಕ್ತಿ ಮತ್ತು ಇಂಟರ್ನೆಟ್ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕರು ಸಹಾಯ ಮಾಡಿದ ಪೊಲೀಸರನ್ನು ಶ್ಲಾಘಿಸಿದ್ದಾರೆ. ಒಬ್ಬರು "ಅಬ್ಬಾ, ಇಂತಹ ಘಟನೆ ಪೊಲೀಸರ ಮೇಲಿನ ನಂಬಿಕೆಯನ್ನು ಮತ್ತೆ ಚಿಗುರಿಸುತ್ತದೆ'' ಎಂದಿದ್ದಾರೆ.