ಮುಂಬೈ, ಜೂ. 6: ಫೈವ್ ಸ್ಟಾರ್ ಹೊಟೇಲ್ ಅಂದಾಕ್ಷಣ ಅಲ್ಲಿನ ದುಬಾರಿ ಬಿಲ್ ಕಣ್ಣ ಮುಂದೆ ಬರುತ್ತದೆ. ಅಲ್ಲಿನ ಆಹಾರಕ್ಕಿಂತ ಹೆಚ್ಚಾಗಿ ಎಸಿ ರೂಮ್, ಐಷಾರಾಮಿ ಸೌಲಭ್ಯಗಳಿಗೆ ಹಣ ವ್ಯಯಿಸಬೇಕಾಗುತ್ತದೆ. ಇದೆಲ್ಲ ಓಕೆ, ಆದರೆ ಆಹಾರ ಪದಾರ್ಥಗಳಿಗೆ ಗಗನಚುಂಬಿ ಬೆಲೆ ವಿಧಿಸಿದರೆ ಯಾರಿಗಾದರೂ ಅಚ್ಚರಿಯಾಗುತ್ತದೆ. ಹೌದು, ಇದೀಗ ಮಹಾರಾಷ್ಟ್ರದ ಮುಂಬೈಯ (Mumbai) ಪ್ರತಿಷ್ಠಿತ ಹೊಟೇಲ್‌ನ ಬಿಲ್ ಕಂಡು ನೆಟ್ಟಿಗರು ದಂಗಾಗಿದ್ದಾರೆ.
ಗ್ರಾಹಕ ಆಲೂ ಪರಾಠಾ, ಬೇಯಿಸಿದ ಮೊಟ್ಟೆ, ಮೊಸರು ಮತ್ತು ವೆನಿಲ್ಲಾ ಮಿಲ್ಕ್ ಶೇಕ್ ಆರ್ಡರ್ ಮಾಡಿದ್ದಾನೆ. ಇವು ಸಾಮಾನ್ಯ ಆಹಾರಗಳೇ. ಆದರೆ ಇದರ ಬಿಲ್ ನೋಡಿ ನೆಟ್ಟಿಗರೇ ಅಚ್ಚರಿಗೆ ಒಳಗಾಗಿದ್ದಾರೆ. ಈ ಸಾಧಾರಣ ಮೆನುಗೆ 2,300 ರುಪಾಯಿ ಬಿಲ್ ಬಂದಿರುವುದನ್ನು ನೋಡಿ ಗ್ರಾಹಕ ಶಾಕ್‌ಗೆ ಒಳಗಾಗಿದ್ದಾನೆ. ಮುಂಬೈಯ ಪ್ರಖ್ಯಾತ 'ಹಿಲ್ಟನ್' ಹೊಟೇಲ್‌ನಲ್ಲಿ ತಂಗಿದ್ದಾಗ ಈ ಘಟನೆ ನಡೆದಿದೆ.
ವಿಡಿಯೊ ನೋಡಿ:
ವಿಡಿಯೊದಲ್ಲಿ ಗ್ರಾಗಕ ವೀಕ್ಷಕರಿಗೆ ಊಟದ ಮೆನುವನ್ನು ತೋರಿಸಿದ್ದಾನೆ. "ಇದನ್ನು ನೋಡಿ, ನಾನು ಭೋಜನವನ್ನು ಆರ್ಡರ್ ಮಾಡಿದೆ. ಇದು ಹೆಚ್ಚು ಅಲಂಕಾರಿಕವಾಗಿಲ್ಲ. ಕೇವಲ ಆಲೂ ಪರಾಠ, ಕೆಲವು ಬೇಯಿಸಿದ ಮೊಟ್ಟೆಗಳು ಮತ್ತು ವೆನಿಲ್ಲಾ ಮಿಲ್ಕ್ ಶೇಕ್ ಮಾತ್ರ. ಆದರೆ, ಕೈ ಸೇರಿದ ಬಿಲ್ ನೋಡಿ ತಲೆ ತಿರುಗಿದಂತೆ ಆಗಿದೆʼʼ ಎಂದು ಹೇಳಿದ್ದಾನೆ. ಇದರಲ್ಲಿ 3 ಬೇಯಿಸಿದ ಮೊಟ್ಟೆಗಳು 499 ರುಪಾಯಿ, ಆಲೂ ಪರಾಠಕ್ಕೆ 1,100 ರುಪಾಯಿ- ಒಟ್ಟು ಬಿಲ್ 2,300 ರುಪಾಯಿ ಆಗಿದೆ.
ಪ್ರಿಯಕರನಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಯುವತಿ
'ʼ3 ಮೊಟ್ಟೆಗೆ 500 ರುಪಾಯಿಯಾ?'ʼ ಗ್ರಾಹಕ ಪ್ರಶ್ನಿಸಿದ್ದಾನೆ. ಇದಕ್ಕೆ ಫೈವ್ ಸ್ಟಾರ್ ಹೊಟೇಲ್ ಸಿಬ್ಬಂದಿ ಉತ್ತರಿಸಿ, ಮೂಲ ಸೌಕರ್ಯ, ಸೇವೆ ಹಾಗೂ ನಿರ್ವಹಣಾ ವೆಚ್ಚ ತಿಳಿಸಿದ್ದಾರೆ. ʼʼಬೆಲೆ ವಿಧಿಸುವುದರಲ್ಲೂ ಅರ್ಥವಿದೆ. ಕೇವಲ 3 ಬೇಯಿಸಿದ ಮೊಟ್ಟೆಗಳಿಗೆ 500 ರುಪಾಯಿ ಚಾರ್ಜ್ ಮಾಡುವುದು ಎಷ್ಟು ಸರಿ?ʼʼ ಎಂದು ಮರು ಪ್ರಶ್ನಿಸಿದ್ದಾನೆ. ಮಾರುಕಟ್ಟೆಯಲ್ಲಿ ಕೇವಲ 10ರಿಂದ 12 ರುಪಾಯಿಗೆ ಸಿಗುವ ಸಾಮಾನ್ಯ ಮೊಟ್ಟೆಗಳಿವು. ಇಲ್ಲಿ ಒಂದು ಮೊಟ್ಟೆಯ ಬೆಲೆ ಸುಮಾರು 160 ರುಪಾಯಿಯಿಂದ 170 ರುಪಾಯಿ ಆಗಿದೆ.
ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ಒಬ್ಬರು "ಈ ಮೊಟ್ಟೆಗಳನ್ನು ತಿಂದರೆ ಬಹುಶಃ ಕ್ಯಾನ್ಸರ್ ಕೂಡ ಗುಣವಾಗಬಹುದು. ಅದಕ್ಕೇ ಇಷ್ಟು ರೇಟ್!" ಎಂದು ಬರೆದಿದ್ದಾರೆ. ಮತ್ತೊಬ್ಬರು, ʼʼಅವು ಸಾಮಾನ್ಯ ಬೇಯಿಸಿದ ಮೊಟ್ಟೆಗಳಾಗಿರಲಿಲ್ಲ. ಅವು ಕರಕುಶಲ, ಪ್ರೀಮಿಯಂ ಕುಶಲಕರ್ಮಿಗಳ ಮೊಟ್ಟೆಗಳುʼʼ ಎಂದು ತಮಾಷೆ ಮಾಡಿದ್ದಾರೆ.