ಮುನ್ನಾರ್ : ಇತ್ತೀಚೆಗಷ್ಟೇ ಕೇರಳ ಸರಕಾರವು ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೊಳಿಸುವ ಸಲುವಾಗಿ ಡಬಲ್ ಡೆಕ್ಕರ್‌ನಂತಹ ವಿಶೇಷ ಬಸ್ ಸಂಚಾರ ವ್ಯವಸ್ಥೆ ಜಾರಿ ಮಾಡಿದೆ. ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಪ್ರಕೃತಿ ವೀಕ್ಷಣೆಯ ವಿಶೇಷ ಅನುಭವ ಪಡೆಯಲು ಡಬ್ಬಲ್ ಡೆಕ್ಕರ್ ಬಸ್ ರಸ್ತೆಗಿಳಿಯಲು ತಯಾರಿ ನಡೆಸಿದೆ. ಮುನ್ನಾರ್ ಗಿರಿಧಾಮಗಳಿಗೆ ತೆರಳುವ ಪ್ರಯಾಣಿಕರಿಗೆ ಈ ಬಸ್ ವ್ಯವಸ್ಥೆ ಅನುಕೂಲವಾಗಲಿದ್ದು ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಭರವಸೆ ಮೂಡಿಸಿದಂತಿದೆ. ಆದರೆ ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಈ ವ್ಯವಸ್ಥೆ ಅನುಕೂಲವೇ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆಯನ್ನುಂಟು ಮಾಡಿದೆ. ಈ ನಿಟ್ಟಿನಲ್ಲಿ ಗೋ ಕೇರಳ ಎಕ್ಸ್ ಪ್ರೆಸ್ ಎಂಬ ಟಿಟ್ಟರ್ ಖಾತೆಯಲ್ಲಿ ಈ ಬಗ್ಗೆ ವಿಡಿಯೊವೊಂದನ್ನು ಹಂಚಿಕೊಂಡಿದ್ದು(Viral Video) ನೆಟ್ಟಿಗರು ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.
ಮುನ್ನಾರ್ ನ ಪ್ರಕೃತಿ ಸೌಂದರ್ಯ ವೀಕ್ಷಿಸುವ ಸಲುವಾಗಿ ಡಬಲ್ ಡೆಕ್ಕರ್ ಬಸ್ ವ್ಯವಸ್ಥೆ ಜಾರಿಮಾಡಲಾಗಿದೆ. ಮುನ್ನಾರ್ ನ ಚಹಾ ತೋಟ, ಎತ್ತರದ ಗಿರಿಧಾಮಗಳ ವೀವ್ಸ್ ಎಲ್ಲವನ್ನು 360° ವೀಕ್ಷಣೆಗೆ ಅನುವು ಮಾಡಿಕೊಡಲಾಗಿದ್ದು, ಈ ಬಸ್ ಪ್ರಯಾಣವನ್ನು ಮುನ್ನಾರ್‌ನಿಂದ ದೇವಿಕುಲಂವರೆಗೆ ದಿನಕ್ಕೆ ನಾಲ್ಕು ಬಾರಿ ಸಂಚಾರಕ್ಕಾಗಿ ಅವಕಾಶ ಮಾಡಿಕೊಡಲಾಗಿದೆ. ಆದರೆ ಈ ಬಗ್ಗೆ ಎಕ್ಸ್ ಖಾತೆಯಲ್ಲಿ ವಿಡಿಯೊ ಹಂಚಿಕೊಳ್ಳಲಾಗಿದ್ದು ಡಬಲ್ ಡೆಕ್ಕರ್ ಪ್ರಯಾಣದಿಂದ ಉಂಟಾಗುವ ಸಾಂಭವ್ಯ ಅಪಘಾತಗಳ ಬಗ್ಗೆ ಅನೇಕ ಬಳಕೆದಾರರು ಟ್ವೀಟ್ ಮಾಡಿದ್ದಾರೆ.
ಇದು ಘಾಟ್ ಪ್ರದೇಶವಾಗಿರುವುದರಿಂದ ಇಂತಹ ಪ್ರದೇಶಗಳಲ್ಲಿ ಡಬಲ್ ಡೆಕ್ಕರ್ ಬಸ್ ಬಳಕೆ ಮಾಡುವುದರಿಂದ ಕಡಿದಾದ ತಿರುವಿನಲ್ಲಿ ಪ್ರಯಾಣಿಸುವುದು ಅಷ್ಟು ಸುರಕ್ಷಿತವಲ್ಲ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದ್ದು ಅಪಘಾತ ಆಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಕೆಲವು ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಈ ವ್ಯವಸ್ಥೆ ಪ್ರವಾಸಿಗರಿಗೆ ಒಳ್ಳೆಯ ಪ್ರವಾಸಿ ಅನುಭವ ನೀಡಿದರೂ ತಿರುವು ಬರುವಾಗ ಭಯದಲ್ಲೇ ಪ್ರಯಾಣ ಮಾಡಬೇಕಾಗುತ್ತದೆ. ಹಾಗಾಗಿ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಇದು ಒಳಿತಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನು ಓದಿ: Viral Video: ಕೋತಿಗೆ ಆಹಾರದ ಆಮಿಷವೊಡ್ಡಿ ಚಪ್ಪಲಿಯಿಂದ ಹೊಡೆದ ನೀಚ; ಇದೆಂಥಾ ವಿಕೃತಿ!ವಿಡಿಯೊ ನೋಡಿ
ಅಪಾಯ ಇದೆಯಾ?
ಇಂತಹ ಡಬಲ್ ಡೆಕ್ಕರ್ ಬಸ್ ಅನೇಕ ಪ್ರವಾಸಿ ಸ್ಥಳಗಳಲ್ಲಿ ಈಗಾಗಲೇ ಪರಿಚಯಿಸಲಾಗಿದ್ದು ಕೆಲವೆಡೆ ಜಾರಿಯಲ್ಲಿದೆ. ಆದರೆ ಡಬಲ್ ಡೆಕ್ಕರ್ ಬಸ್ ನಿಂದ ಅಪಾಯ ಆಗುವ ಸಾಧ್ಯತೆಯು ಇದೆ. 2018 ರಲ್ಲಿ ದಕ್ಷಿಣ ಅಮೇರಿಕಾದ ಪೆರುವಿನ ರಸ್ತೆಯಲ್ಲಿ ಡಬಲ್ ಡೆಕ್ಕರ್ ಬಸ್ ಸಾಗುವಾಗ ಅಪಘಾತವಾಗಿ 100 ಮೀಟರ್ ದೂರಕ್ಕೆ ಬಸ್ ಉರುಳಿ ಬಿದ್ದ ಪರಿಣಾಮ 44 ಜನರು ಪ್ರಾಣ ಕಳೆದುಕೊಂಡಿದ್ದರು. 2023ರಲ್ಲಿ ಥೈಲ್ಯಾಂಡ್ ನ ಪ್ರಚು ವಾಪ್ ಖಿರಿಖಾನ್ ಪ್ರದೇಶದಲ್ಲಿ ಡಬಲ್ ಡೆಕ್ಕರ್ ಬಸ್‌ಗೆ ಅಪಘಾತವಾಗಿ 14 ಜನರು ಅಸುನೀಗಿರುವ ಘಟನೆಯು ನಡೆದಿತ್ತು. ಹಾಗಾಗಿ ತಜ್ಞರು ಕೂಡ ಈ ಡಬಲ್ ಡೆಕ್ಕರ್ ಬಸ್ ಘಾಟ್ ವಿಭಾಗದಲ್ಲಿ ಪ್ರಯಾಣಕ್ಕೆ ಸುರಕ್ಷಿತ ಅಲ್ಲ ಎಂದೇ ಹೇಳುತ್ತಾರೆ. ಒಟ್ಟಾರೆಯಾಗಿ ಕೇರಳದ ಸಾರಿಗೆ ನಿಗಮದ ಈ ವಿಡಿಯೊ ಕುರಿತಾಗಿ ಮಿಶ್ರಪ್ರತಿಕ್ರಿಯೆ ಇದ್ದರೂ ಕೇರಳ ಸಾರಿಗೆ ನಿಗಮ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.