Viral News: ಬಡತನ ಬೇಗೆಯಲ್ಲಿ ಬೆಂದಿರುವ ಈ ಮಹಿಳೆ ಜೀವನಕ್ಕೆ ಮಾಡಿದ್ದೇನು ಗೊತ್ತಾ? ಈಕೆಯ ಕಥೆ ಎಲ್ಲರಿಗೂ ಸ್ಫೂರ್ತಿ
Bihar's mushroom lady Bina Devi: ಸಾಧನೆಗೆ ವಯಸ್ಸಿನ ಹಂಗಿಲ್ಲ. ಬಡತನವೇ ಶಾಪ ಎಂದು ಕೈಕಟ್ಟಿ ಕುಳಿತರೆ ಜೀವನಪೂರ್ತಿ ಹೆಣಗಾಡಬೇಕಾಗುತ್ತದೆ. ಬಡತನವನ್ನು ಮೆಟ್ಟಿ ನಿಂತು ಬದ್ಧತೆ, ಕಠಿಣ ಪರಿಶ್ರಮ, ದೃಢಸಂಕಲ್ಪವಿದ್ದರೆ ಏನೂ ಬೇಕಾದರೂ ಸಾಧಿಸಬಹುದು ಅನ್ನೋದಕ್ಕೆ ಈ ಮಹಿಳೆಯ ಕಥೆಯೇ ಸ್ಪೂರ್ತಿ.

-

ಪಟನಾ: ಸಾಧಿಸುವ ಛಲವಿದ್ದರೆ ಏನು ಬೇಕಾದರೂ ಮಾಡಬಹುದು ಅನ್ನೋದಕ್ಕೆ ಇಲ್ಲೊಬ್ಬರು ಮಹಿಳೆ ಸ್ಫೂರ್ತಿಯಾಗಿದ್ದಾರೆ. ಬಿಹಾರದ (Bihar) ಮುಂಗೇರ್ ಜಿಲ್ಲೆಯ ಮಹಿಳೆ ಬೀನಾ ದೇವಿ (Bina Devi) ಎಂಬುವವರು, ತನ್ನ ನಾಲ್ಕು ಮಕ್ಕಳನ್ನು ಪೋಷಿಸಲು ಹೆಣಗಾಡುತ್ತಿದ್ದರು. ಈ ಕುಟುಂಬಕ್ಕೆ ಬಡತನವೇ ಶಾಪವಾಗಿ ಪರಿಣಮಿಸಿತ್ತು. ಕೃಷಿ ಮಾಡಿ ಜೀವನ ಸಾಗಿಸೋಣ ಅಂದುಕೊಂಡರೆ ಭೂಮಿಯೂ ಇರಲಿಲ್ಲ, ಸ್ಥಿರ ಆದಾಯವೂ ಇರಲಿಲ್ಲ. ಮೂರು ಹೊತ್ತಿನ ಊಟಕ್ಕೂ ಕಷ್ಟಪಡಬೇಕಾದ ಪರಿಸ್ಥಿತಿಯಿತ್ತು. ಇಷ್ಟೊಂದು ಕಷ್ಟಕರ ಪರಿಸ್ಥಿತಿಯಲ್ಲೂ ಬೀನಾ ದೇವಿ ಅಣಬೆಗಳನ್ನು ಬೆಳೆಸಲು ಯೋಜಿಸಿದರು. ತಮಗೆ ಭೂಮಿಯಿಲ್ಲದಿದ್ದರೂ ಮಲಗಿದ್ದ ಹಾಸಿಗೆಯ ಕೆಳಗೆಯೇ ಅಣಬೆಗಳನ್ನು ಬೆಳೆಯಲು ಪ್ರಾರಂಭಿಸಿದರು. ಇವರ ಕಥೆ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ (Viral News).
ಇಕ್ಕಟ್ಟಾದ ಕೋಣೆಯಲ್ಲಿ ಸಣ್ಣ ಕೃಷಿಯಾಗಿ ಪ್ರಾರಂಭವಾದದ್ದು ಇಂದು ಗ್ರಾಮೀಣ ಸಬಲೀಕರಣದ ಚಳುವಳಿಯಾಗಿ ಮಾರ್ಪಟ್ಟಿದೆ. ಬೀನಾ ದೇವಿ ಈಗ ಮಶ್ರೂಮ್ ಮಹಿಳೆ ಎಂದೇ ಪ್ರಸಿದ್ಧರಾಗಿದ್ದಾರೆ. 100 ಕ್ಕೂ ಹೆಚ್ಚು ಹಳ್ಳಿಗಳ ಸಾವಿರಾರು ಮಹಿಳೆಯರ ಜೀವನದಲ್ಲಿ ಅವರು ಉಂಟುಮಾಡಿದ ಪರಿವರ್ತನೆಯ ಮೂಲಕ ಈ ಬಿರುದನ್ನು ಗಳಿಸಿದ್ದಾರೆ.
ತೇತಿಹಾ ಬಂಬೋರ್‌ನಲ್ಲಿರುವ ತಿಲ್ಕಾರಿ ಗ್ರಾಮದ ನಿವಾಸಿ ಬೀನಾ ದೇವಿ ಅವರಿಗೆ ಕಡಿಮೆ ಸಂಪನ್ಮೂಲಗಳಿದ್ದರೂ ಅಪಾರ ದೃಢಸಂಕಲ್ಪವಿತ್ತು. ನಾಲ್ಕು ಮಕ್ಕಳನ್ನು ಬೆಳೆಸುವುದು ಮತ್ತು ನಾಟಿ ವೈದ್ಯರಾಗಿರುವ ಅವರ ಪತಿಯ ಸಾಧಾರಣ ಆದಾಯದ ಮೇಲೆ ಮನೆ ನಡೆಯುವುದರಿಂದ, ಊಟಕ್ಕೂ ಪರದಾಡಬೇಕಾದ ಸ್ಥಿತಿಯಿತ್ತು. ಅವರಿಗೆ ಕೃಷಿ ಮಾಡಲು ಭೂಮಿ ಇರಲಿಲ್ಲ. ಹೂಡಿಕೆ ಮಾಡಲು ಬಂಡವಾಳವಿರಲಿಲ್ಲ. ಆದರೆ, ಬೀನಾ ಬಡತನದಿಂದ ಹೊರಬರಲು ದೃಢಸಂಕಲ್ಪ ಮಾಡಿಕೊಂಡರು.
ಸಾಂಪ್ರದಾಯಿಕ ಕೃಷಿ ಕೈಗೆಟುಕದಿದ್ದಾಗ, ಅವರು ಮಶ್ರೂಮ್ ಕೃಷಿಯನ್ನು ಆರಿಸಿಕೊಂಡರು. ಇದಕ್ಕೆ ದೊಡ್ಡ ಹೊಲಗಳು ಅಥವಾ ದುಬಾರಿ ಮೂಲಸೌಕರ್ಯಗಳ ಅಗತ್ಯವಿಲ್ಲ. ತನ್ನ ಮೊದಲ ಪ್ರಯತ್ನದಲ್ಲಿ, ಅವರು ಕೇವಲ ಒಂದು ಕಿಲೋಗ್ರಾಂ ಅಣಬೆ ಬೀಜಗಳನ್ನು ಆರ್ಡರ್ ಮಾಡಿ, ತನ್ನ ಹಾಸಿಗೆಯ ಕೆಳಗೆ ಇರುವ ಸೀಮಿತ ಜಾಗದಲ್ಲಿ ಅವುಗಳನ್ನು ಬೆಳೆಯಲು ಪ್ರಾರಂಭಿಸಿದರು.
ಬೀನಾ ದೇವಿ ಶೀಘ್ರದಲ್ಲೇ ಪ್ರಾರಂಭಿಸಿದ ಅಣಬೆ ಕೃಷಿ, ನೋಡುವಷ್ಟು ಸರಳವಾಗಿರಲಿಲ್ಲ. ತರಬೇತಿ ಅಥವಾ ಸೌಲಭ್ಯಗಳಿಲ್ಲದೆ ಆರ್ದ್ರತೆ, ತಾಪಮಾನ ಮತ್ತು ನೈರ್ಮಲ್ಯದ ನಿಖರವಾದ ನಿಯಂತ್ರಣದ ಅಗತ್ಯವಿತ್ತು. ಆರಂಭದಲ್ಲಿ ಕಡಿಮೆ ಇಳುವರಿ ಬಂದರೂ, ಬೀನಾ ಎದೆಗುಂದಲಿಲ್ಲ. ಭಾಗಲ್ಪುರದ ಸಬೋರ್‌ನಲ್ಲಿರುವ ಬಿಹಾರ ಕೃಷಿ ವಿಶ್ವವಿದ್ಯಾಲಯದಿಂದ ಮಾರ್ಗದರ್ಶನ ಪಡೆದರು. ಅಲ್ಲಿ ಅವರು ತಮ್ಮ ಜೀವನವನ್ನು ಬದಲಾಯಿಸುವ ತಾಂತ್ರಿಕ ಜ್ಞಾನವನ್ನು ಕಲಿತರು. ಉತ್ಪಾದನೆಯು ಸ್ಥಿರವಾಗಿ ಹೆಚ್ಚಾದಂತೆ ಆಕೆಯ ಪ್ರಯತ್ನಗಳು ಫಲ ನೀಡಿದವು.
ಸ್ಥಳೀಯ ಮಾರುಕಟ್ಟೆಯಲ್ಲಿ ಅಣಬೆಗಳಿಗೆ ಬೇಡಿಕೆ ಹೆಚ್ಚಿ, ಪ್ರತಿ ಕಿಲೋಗ್ರಾಂಗೆ 200 ರಿಂದ 300 ರೂ.ಗಳವರೆಗೆ ಬೆಲೆ ಏರಿದಾಗ, ಬೀನಾ ದೇವಿ ಲಾಭ ಗಳಿಸಲು ಪ್ರಾರಂಭಿಸಿದರು. ಅಂತಿಮವಾಗಿ ಅವರ ಆದಾಯವು ವಾರ್ಷಿಕವಾಗಿ ಹಲವಾರು ಲಕ್ಷಗಳನ್ನು ತಲುಪಿತು. ಇದು ಅವರ ಮನೆಯನ್ನೇ ಪರಿವರ್ತಿಸಿತು. ಒಂದು ಕಾಲದಲ್ಲಿ ಶೈಕ್ಷಣಿಕ ನಿರ್ಲಕ್ಷ್ಯದ ಅಂಚಿನಲ್ಲಿದ್ದ ಅವರ ಮಕ್ಕಳು ಇದೀಗ ಉತ್ತಮ ವ್ಯಾಸಾಂಗ ಮಾಡುತ್ತಿದ್ದಾರೆ. ಅವರ ಹಿರಿಯ ಮಗ ಎಂಜಿನಿಯರಿಂಗ್ ಓದುತ್ತಿದ್ದು, ಉಳಿದವರೂ ಸಹ ಗುಣಮಟ್ಟದ ಶಿಕ್ಷಣವನ್ನು ಪಡೆಯುತ್ತಿದ್ದಾರೆ.
ಬೀನಾ ದೇವಿಯ ಯಶಸ್ಸು ಬೆಳೆದಂತೆ, ಮಹತ್ವಾಕಾಂಕ್ಷೆಗಳು ಸಹ ಹೆಚ್ಚಾದವು. ತನಗಾಗಿ ಮಾತ್ರವಲ್ಲ, ಅವರಂತಹ ಇತರ ಮಹಿಳೆಯರೂ ಬೆಳೆಯಬೇಕು ಎಂಬುದು ಅವರ ಮಹದಾಸೆ. ಬೀನಾ ದೇವಿ ತನ್ನ ಯಶಸ್ಸು ಕೇವಲ ತನ್ನದಾಗಿರಬೇಕೆಂದು ಬಯಸಲಿಲ್ಲ. ಇತರ ಮಹಿಳೆಯರಿಗೆ ಅಣಬೆಗಳನ್ನು ಹೇಗೆ ಬೆಳೆಸಬೇಕೆಂದು ಕಲಿಸಲು ಪ್ರಾರಂಭಿಸಿದರು.
ಇಂದು 100 ಕ್ಕೂ ಹೆಚ್ಚು ಹಳ್ಳಿಗಳ ಮಹಿಳೆಯರು ಅಣಬೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಬೀನಾ ದೇವಿಯು ಅವರಿಗೆ ವೈಯಕ್ತಿಕವಾಗಿ ತರಬೇತಿ ನೀಡಿ, ಅವರು ಸ್ವಾವಲಂಬಿಗಳಾಗಲು ಸಹಾಯ ಮಾಡಲು ಬೆಂಬಲ ಮತ್ತು ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾದಾಗ, ಅವರ ಸ್ವಾಭಿಮಾನ ಹೆಚ್ಚಾಗುತ್ತದೆ ಎಂದು ಬೀನಾ ದೇವಿ ಹೇಳುತ್ತಾರೆ.
ರಾಷ್ಟ್ರೀಯ ಮನ್ನಣೆ
ಬೀನಾ ದೇವಿಯ ಈ ಸಾಧನೆಗೆ ರಾಷ್ಟ್ರೀಯ ಮನ್ನಣೆ ದೊರೆತಿದೆ. 2014 ರಲ್ಲಿ, ಅವರನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸನ್ಮಾನಿಸಿದರು. 2018 ರಲ್ಲಿ, ಅವರು ಮಹಿಳಾ ರೈತ ಪ್ರಶಸ್ತಿಯನ್ನು ಪಡೆದರು. ನಂತರ 2019 ರಲ್ಲಿ ಕಿಸಾನ್ ಅಭಿನವ ಪುರಸ್ಕಾರವನ್ನು ಪಡೆದರು. 2020 ರ ಅಂತಾರಾಷ್ಟ್ರೀಯ ಮಹಿಳಾ ದಿನದಂದು, ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅವರನ್ನು ಸನ್ಮಾನಿಸಿದರು. ಪ್ರಧಾನಿ ನರೇಂದ್ರ ಮೋದಿ ಕೂಡ ತಮ್ಮ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಅವರ ಕಥೆಯನ್ನು ಶ್ಲಾಘಿಸಿದರು.
ಅಣಬೆ ಕೃಷಿ ಪ್ರಾರಂಭಿಸಿದಾಗ ಜನರು ಈಕೆಗೆ ಹುಚ್ಚು ಎಂದು ಕರೆಯುತ್ತಿದ್ದರು. ತಾನು ಮಾಡುತ್ತಿದ್ದ ಕೆಲಸವನ್ನು ಗೇಲಿ ಮಾಡುತ್ತಿದ್ದರು. ಆದರೆ ನಾನು ಎಂದಿಗೂ ನಿಲ್ಲಿಸಲಿಲ್ಲ. ನಾನು ನಂಬಿದ್ದನ್ನು ಮಾಡುತ್ತಲೇ ಇದ್ದೆ. ನಾನು ಎಂದಿಗೂ ಹಿಂತಿರುಗಿ ನೋಡಲಿಲ್ಲ ಎಂದು ತಮ್ಮ ಕಥೆಯನ್ನು ಬೀನಾದೇವಿ ಹಂಚಿಕೊಂಡರು.
ಬೀನಾ ದೇವಿಯ ಧ್ಯೇಯವು ಕೇವಲ ಅಣಬೆ ಕೃಷಿಯೊಂದಿಗೆ ನಿಂತಿಲ್ಲ. ಅವರು ಈಗ ಸಾವಯವ ಕೃಷಿಯ ಪ್ರತಿಪಾದಕರಾಗಿದ್ದಾರೆ. ರೈತರು ರಾಸಾಯನಿಕ ಆಧಾರಿತ ಕೃಷಿಯಿಂದ ದೂರ ಸರಿಯುವಂತೆ ಪ್ರೋತ್ಸಾಹಿಸುತ್ತಿದ್ದಾರೆ. ರಾಸಾಯನಿಕ ಮುಕ್ತ ಕೃಷಿಯ ತಂತ್ರಗಳನ್ನು ಪ್ರತಿಪಾದಿಸುವ ಅವರು, ಆರೋಗ್ಯ ಪ್ರಯೋಜನಗಳು ಮತ್ತು ಪರಿಸರ ಜವಾಬ್ದಾರಿ ಎರಡನ್ನೂ ಒತ್ತಿ ಹೇಳುತ್ತಾರೆ.
ತನಗೆ ಯಾವುದೇ ಸರ್ಕಾರಿ ನೆರವು ಸಿಕ್ಕಿಲ್ಲ ಎಂದು ಬೀನಾ ದೇವಿ ಹೇಳಿದ್ದಾರೆ. ನಮ್ಮಂತಹ ಮಹಿಳೆಯರು ಉದ್ಯೋಗ ಯೋಜನೆಗಳಿಂದ ಪ್ರಯೋಜನ ಪಡೆಯುವುದನ್ನು ಖಚಿತಪಡಿಸಿಕೊಳ್ಳುವಂತೆ ನಾನು ಪ್ರಧಾನಿ ಮತ್ತು ಬಿಹಾರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು. ಒಟ್ಟಿನಲ್ಲಿ ಸೋಲನ್ನು ಒಪ್ಪಿಕೊಳ್ಳದೆ ದೃಢನಿಶ್ಚಯ, ಪರಿಶ್ರಮದಿಂದ ಮುಂದುವರಿದರೆ ಗೆಲುವು ಸಾಧ್ಯ ಅನ್ನೋದನ್ನು ಬೀನಾ ದೇವಿ ಸಾಧಿಸಿ ತೋರಿಸಿದ್ದಾರೆ.