ನವದೆಹಲಿ, ಆ. 8: ಪ್ರಾಣಿಗಳು ಕೂಡ ಮನುಷ್ಯರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತವೆ ಎಂಬುದನ್ನು ನೀವು ಕೇಳಿರಬಹುದು. ದುಃಖದಲ್ಲಿದ್ದಾಗ ಅಥವಾ ನೋವಿನಲ್ಲಿದ್ದಾಗ ಸಾಕು ಪ್ರಾಣಿಗಳು ಹತ್ತಿರ ಬಂದು ಕುಳಿತುಕೊಳ್ಳುವ ಮೂಲಕ ಅಥವಾ ನೆಕ್ಕುವ ಮೂಲಕ ನಮ್ಮನ್ನು ಸಮಾಧಾನ ಪಡಿಸಲು ಪ್ರಯತ್ನಿಸುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಮಕ್ಕಳ ಕ್ರಿಕೆಟ್ ಪಂದ್ಯಾಟಕ್ಕೆ ಶ್ವಾನಗಳು ಸಾಥ್ ನೀಡಿವೆ. ಕ್ರಿಕೆಟ್ ಆಡಲೆಂದು ಬೆಟ್ಟ ಗುಡ್ಡದ ನಡುವೆ ಗುಂಪು ಸೇರಿದ ಮಕ್ಕಳಿಗೆ ಜನ ಸಾಕಾಗಿಲ್ಲ ಏನು ಮಾಡುವುದೆಂದು ಯೋಚಿಸಿದಾಗ ಸಿಕ್ಕಿದ್ದು ಅಪರೂಪದ ಫೀಲ್ಡರ್‌ಗಳು. ತಮ್ಮ ಜತೆಗಿದ್ದ ನಾಯಿಗಳಿಗೆ ಕೀಪಿಂಗ್, ಫೀಲ್ಡಿಂಗ್ ಜವಾಬ್ದಾರಿಯನ್ನು ಮಕ್ಕಳು ನೀಡಿದ್ದಾರೆ. ನಾಯಿಗಳು ಕೂಡ ತಾವೇನು ಕಮ್ಮಿಯಿಲ್ಲಪ್ಪ ಎಂಬಂತೆ ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿ ಆಟಕ್ಕೆ ಸಾಥ್ ನೀಡಿವೆ. ಈ ಕ್ಯೂಟ್ ವಿಡಿಯೊ (Viral News) ನೆಟ್ಟಿಗರ ಮನ ಗೆದ್ದಿದೆ.
ಮಕ್ಕಳ ಗುಂಪೊಂದು ಕ್ರಿಕೆಟ್ ಆಡಲು ಬಯಸಿದ್ದು, ತಂಡದ ಸದಸ್ಯರು ಕಡಿಮೆ ಇದ್ದ ಕಾರಣ ಏನು ಮಾಡುವುದೆಂದು ಯೋಚಿಸುತ್ತಿದ್ದರು. ಅಷ್ಟರಲ್ಲೇ ಅವರು ತಮ್ಮ ನಾಲ್ಕು ಕಾಲಿನ ಫ್ರೆಂಡ್ಸ್ ಅನ್ನು ಆಟಕ್ಕೆ ಕರೆತಂದಿದ್ದಾರೆ. ಈ ಕ್ರಿಕೆಟ್ ಪಂದ್ಯವು ಸೋಷಿಯಲ್ ಮೀಡಿಯಾದಲ್ಲಿ ಜನರ ಗಮನ ಸೆಳೆದಿದೆ. ಬಳಕೆದಾರರು ನಾಯಿಗಳ ಕೌಶಲ್ಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಮಕ್ಕಳ ಜತೆ ಕ್ರಿಕೆಟ್ ಆಡಿದ ಶ್ವಾನಗಳು:
ವೈರಲ್ ಆದ ವಿಡಿಯೊದಲ್ಲಿ ಮೂರರಿಂದ ನಾಲ್ಕು ಬಾಲಕರು ಗುಡ್ಡಗಾಡು ಪ್ರದೇಶದ ಸುಂದರ ಪರಿಸರದಲ್ಲಿ ಕ್ರಿಕೆಟ್ ಆಡುತ್ತಿರುವುದನ್ನು ಕಂಡು ಬಂದಿದೆ. ಎರಡು ನಾಯಿಗಳು ಮತ್ತು ಕೆಲವು ಹಸುಗಳು ಮೈದಾನದ ಸುತ್ತಲೂ ನಿಂತಿದ್ದವು. ಮಕ್ಕಳಿಗೆ ಆಡಲು ಫೀಲ್ಡರ್‌ಗಳು ಇಲ್ಲವೆಂದು ಅಲ್ಲಿದ್ದ ನಾಯಿಗಳು ಆಡಲು ಮುಂದೆ ಬಂದವರು.
ಮಳೆಯಿಂದ ಜಲಾವೃತಗೊಂಡ ಮದುವೆ ಮಂಟಪ: ವಧುವನ್ನು ಎತ್ತಿಕೊಂಡು ಹೆಜ್ಜೆಹಾಕಿದ ವರ
ಒಂದು ನಾಯಿ ವಿಕೆಟ್ ಕೀಪರ್ ಆಗಿ ಬಾಲ್ ಹಿಡಿಯಲು ಪ್ರಯತ್ನಿಸಿದರೆ ಇನ್ನೊಂದು ನಾಯಿ ಬಂಡೆಗಳ ಹತ್ತಿರ ಓಡಿ ಹೋಗಿ ಚೆಂಡನ್ನು ಹಿಡಿದು ಬೌಲರ್‌ಗೆ ನೀಡಿ ಫೀಲ್ಡರ್ ಆಗಿ ಗಮನ ಸೆಳೆದಿದೆ. ಒಂದು ಹಂತದಲ್ಲಿ, ಒಂದು ನಾಯಿ ಸೂಪರ್ ಕ್ಯಾಚ್ ಹಿಡಿಯುವ ಮೂಲಕ ಬ್ಯಾಟರ್ ಅನ್ನು ಔಟ್ ಮಾಡಲು ಯಶಸ್ವಿಯಾಯಿತು. ಈ ವಿಕೆಟ್ ಕಳೆದುಕೊಂಡ ಬಾಲಕನೇ ಅಚ್ಚರಿಗೆ ಒಳಗಾಗಿದ್ದ.
ಶ್ವಾನ ಮಾತ್ರ ಅತ್ಯಂತ ಸುಲಭವಾಗಿ ತನ್ನ ಫೀಲ್ಡಿಂಗ್ ಕರ್ತವ್ಯ ಮುಂದುವರಿಸಿದೆ. ಅಲ್ಲಿದ್ದ ಬಾಲಕರು ಕ್ರಿಕೆಟ್ ಪಂದ್ಯವನ್ನು ಸಂಪೂರ್ಣವಾಗಿ ಆನಂದಿಸುತ್ತಿದ್ದರು. ಈ ವಿಡಿಯೊದ ನಿಖರ ಸ್ಥಳ ತಿಳಿಯದಿದ್ದರೂ, ಮಕ್ಕಳು ಮತ್ತು ನಾಯಿಗಳ ನಡುವಿನ ಬಾಂಧವ್ಯ ಜನರನ್ನು ರಂಜಿಸಿದೆ. ಒಬ್ಬರು "ಫೀಲ್ಡರ್, ಕೀಪರ್ ಮುದ್ದಾಗಿದ್ದಾರೆ" ಎಂದು ಬರೆದಿದ್ದಾರೆ. ಮತ್ತೊಬ್ಬರು "ನಾಯಿಗಳಿಗೂ ಬುದ್ಧಿಯಿದೆ ಎಂದು ಸಾಬೀತಾಯಿತು. ಎಂಥಾ ಅದ್ಭುತ ದೃಶ್ಯವಿದು" ಎಂದು ಪ್ರತಿಕ್ರಿಯೆ ನೀಡಿದ್ದಾರೆ.