ಕೋಲ್ಕತ್ತಾ, ಜ. 5: ಇತ್ತೀಚೆಗೆ ಟ್ಯಾಕ್ಸಿ, ಕ್ಯಾಬ್ ಚಾಲಕರು ಪ್ರಯಾಣಿಕರ ಜತೆ ಅಸಭ್ಯವಾಗಿ ನಡೆದುಕೊಳ್ಳುತ್ತಾರೆ, ಅಜಾಗರೂಕತೆಯಿಂದ ವಾಹನ ಚಾಲಾಯಿಸುತ್ತಾರೆ ಮತ್ತು ಅಗೌರವದಿಂದ ನಡೆದುಕೊಳ್ಳುತ್ತಾರೆ ಎಂಬ ದೂರು ಹೆಚ್ಚಾಗಿ ಕೇಳಿ ಬರುತ್ತಿದೆ. ಇದಕ್ಕೆ ಭಿನ್ನವಾದ ಘಟನೆಯೊಂದು ಇದೀಗ ನಡೆದಿದೆ. ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಕುಡಿದ ನಶೆಯಲ್ಲಿದ್ದ ಯುವತಿಯನ್ನು ಕ್ಯಾಬ್ ಚಾಲಕನೋರ್ವ ಸುರಕ್ಷಿತವಾಗಿ ಮನೆಗೆ ತಲುಪಿಸಿರುವುದು ಬೆಳಕಿಗೆ ಬಂದಿದೆ. ಕ್ಯಾಬ್ ಚಾಲಕನ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ (Viral Video).
ಕ್ರಿಸ್‌ಮಸ್ ಹಬ್ಬದಂದು ತಡರಾತ್ರಿ ಯುವತಿಯೊಬ್ಬಳು ಪಾರ್ಟಿ ಮುಗಿಸಿಕೊಂಡು ಮನೆಗೆ ವಾಪಾಸ್ ತೆರಳಲು ಕ್ಯಾಬ್ ಬುಕ್ ಮಾಡಿದ್ದಾಳೆ. ಡಿಸೆಂಬರ್ 24ರಂದು ರಾತ್ರಿ 10:30ರ ಸುಮಾರಿಗೆ ಮಹಿಳೆಯು ಕುಡಿದ ಮತ್ತಿನಲ್ಲಿ ಕ್ಯಾಬ್ ಏರಿ ಚಾಲಕನ ಜತೆಗೆ ಸಂವಹನ ನಡೆಸಿದ ವಿಡಿಯೊ ವೈರಲ್ ಆಗಿದೆ. 31 ವರ್ಷದ ಮುನ್ನಾ ಅಜಿಜ್ ಮೊಲಿಕ್ ಹೆಸರಿನ ಕ್ಯಾಬ್ ಚಾಲಕನು ಆ ಯುವತಿ ಜತೆ ಸಂಯಮದಿಂದ ವರ್ತಿಸಿದ್ದಾನೆ. ಯುವತಿಯು ತನ್ನನ್ನು ಸುರಕ್ಷಿತವಾಗಿ ಮನೆಗೆ ಕರೆದೊಯ್ಯಬಹುದೇ ಅಂಕಲ್? ಎಂದು ಕೇಳಿದ್ದಾಳೆ. ಅದಕ್ಕೆ ಚಾಲಕ ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸಿ, ಆಯಿತು ತಲುಪಿಸುತ್ತೇನೆ. ನೀವು ವಿಶ್ರಾಂತಿ ಪಡೆಯಿರಿ ಎಂದು ಹೇಳುವ ದೃಶ್ಯಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.
ವಿಡಿಯೊ ನೋಡಿ:
ಕ್ಯಾಬಿನಲ್ಲಿದ್ದ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಈ ವಿಡಿಯೊ ಸೆರೆಯಾಗಿದ್ದು, ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಕ್ಯಾಬ್ ಚಾಲಕರು ಕೂಡ ಪ್ರಾಮುಖ್ಯತೆ ನೀಡುತ್ತಾರೆ ಎಂಬುದನ್ನು ಈ ವಿಡಿಯೊ ಸಾರಿ ಹೇಳಿದೆ. ಆಕೆಯು ತಲುಪಬೇಕಿದ್ದ ಸ್ಥಳಕ್ಕೆ ತಲುಪಿದ ಬಳಿಕವು ಆಕೆಯ ತಾಯಿಗೆ ಕರೆ ಮಾಡಿ ಆಕೆಯನ್ನು ಸುರಕ್ಷಿತವಾಗಿ ತಲುಪಿಸಿದ್ದೇನೆ ಮನೆಗೆ ಬಂದಿದ್ದಾರೆಯೇ ಎಂದು ಕ್ಯಾಬ್ ಚಾಲಕ ಖಾತರಿ ಪಡಿಸಿಕೊಂಡಿದ್ದಾನೆ.
ಈ ವಿಡಿಯೊ ವೈರಲ್ ಆಗಿದ್ದು, ಕ್ಯಾಬ್ ಚಾಲಕ ಈ ಬಗ್ಗೆ ಮಾಧ್ಯಮ ಒಂದಕ್ಕೆ ಹೇಳಿಕೆ ನೀಡಿದ್ದಾನೆ. ʼʼಆಕೆ ತುಂಬಾ ಕುಡಿದಿದ್ದಳು, ಪ್ರಜ್ಞೆ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದಳು. ಆದ್ದರಿಂದ ನಾನು ರೆಕಾರ್ಡ್ ಮಾಡಲು ಪ್ರಾರಂಭಿಸಿದೆ. ಅವಳ ಫೋನ್ ಕೂಡ ಸರಿ ಇರಲಿಲ್ಲ. ಹೀಗಾಗಿ ನನ್ನ ಮೊಬೈಲ್ ಅನ್ನು ಅವಳಿಗೆ ನೀಡಿ ಅವಳ ತಾಯಿಯ ಬಳಿ ಮಾತನಾಡಲು ತಿಳಿಸಿದೆ. ಆದರೆ ಆಕೆ ಮಾತನಾಡಲಿಲ್ಲ. ಹೀಗಾಗಿ ನಾನೆ ನಂಬರ್ ಡಯಲ್ ಮಾಡಿ ಆಕೆಯ ತಾಯಿಯ ಜತೆ ಮಾತನಾಡಿ ಯುವತಿಯನ್ನು ಸುರಕ್ಷಿತವಾಗಿ ಮನೆಗೆ ಬಿಡುತ್ತೇನೆ ಎಂದು ಭರವಸೆ ನೀಡಿದ್ದೆ. ಅದು ನನ್ನ ಜವಾಬ್ದಾರಿಯಾಗಿದ್ದು, ಮನೆಗೆ ಬಿಟ್ಟ ಬಳಿಕವೂ ಆಕೆಯ ತಾಯಿಗೆ ಕಾಲ್ ಮಾಡಿ ವಿಚಾರಿಸಿರುವುದಾಗಿ ಹೇಳಿದ್ದಾರೆ.
ವಾಕಿಂಗ್ ಹೋಗಿದ್ದವರ ಬೆನ್ನಟ್ಟಿದ ಕರಡಿ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ!
ಮಾಧ್ಯಮದವರು ಆತನ ಹಿನ್ನಲೆ ಬಗ್ಗೆ ಕೇಳಿದಾಗ ಅನೇಕ ವಿಚಾರ ಹಂಚಿಕೊಂಡಿದ್ದಾನೆ. ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್ ಜಿಲ್ಲೆಯ ಮುನ್ನಾ ತನ್ನ ಪ್ರೌಢಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ತನ್ನ ಕುಟುಂಬದ ಪರಿಸ್ಥಿತಿಯನ್ನು ಮನಗಂಡು ಪಶ್ಚಿಮ ಬಂಗಾಳದಿಂದ ಕೋಲ್ಕತ್ತಾಕ್ಕೆ ಸ್ಥಳಾಂತರಗೊಂಡಿದ್ದಾನೆ. ಬಳಿಕ ಎಂಟು ವರ್ಷಗಳ ಕಾಲ ಭದ್ರತಾ ಸಿಬ್ಬಂದಿಯಾಗಿ ತಿಂಗಳಿಗೆ ಕೇವಲ 4,200 ರೂ. ಗಳಿಸುತ್ತಿದ್ದನಂತೆ. ಶ್ಯಾಮ ಪ್ರಸಾದ್ ಕಾಲೇಜಿನಲ್ಲಿ ರಾತ್ರಿ ತರಗತಿಗಳಿಗೆ ಹಾಜರಾಗುತ್ತಿದ್ದ ಆತ 2022ರಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ TETಯಲ್ಲಿ ಉತ್ತೀರ್ಣರಾಗಿದ್ದಾನೆ. ಆದರೆ ಶಿಕ್ಷಕ ಹುದ್ದೆ ಲಭಿಸಿಲ್ಲ ಎಂದು ವಿವರಿಸಿದ್ದಾನೆ.