ನವದೆಹಲಿ, ಡಿ. 21: ತಂದೆ ಮತ್ತು ಮಕ್ಕಳ ನಡುವಿನ ಬಾಂಧವ್ಯಕ್ಕೆ ಸರಿಸಾಟಿ ಬೇರೊಂದಿಲ್ಲ. ಮಕ್ಕಳ ಏಳ್ಗೆಗಾಗಿ ಏನು ಬೇಕಾದರು ಮಾಡುವ ತಂದೆ ತಾನು ಕಷ್ಟ ಪಟ್ಟಿದ್ದನ್ನು ಮರೆಯಲ್ಲಿರಿಸಿ ಮಕ್ಕಳ ಖುಷಿಯಲ್ಲಿ ತನ್ನ ಖುಷಿಯನ್ನು ಕಾಣುವನು. ಮಕ್ಕಳ ಆಸೆಗಳನ್ನು, ಕನಸುಗಳನ್ನು ಈಡೇರಿ ಸುವ ತಂದೆಯ ಅನೇಕ ಕಥೆಗಳನ್ನು ನಾವು ಕೇಳಿದ್ದೇವೆ. ತೆಲುಗಿನ ʼವಿಮಾನಂʼ ಹೆಸರಿನ ಸಿನಿಮಾದಲ್ಲಿ ಮಗನ ವಿಮಾನ ಏರುವ ಕನಸನ್ನು ನನಸು ಮಾಡುವ ತಂದೆ ಮನ ಮುಟ್ಟುವ ಕಥೆ ಇದೆ. ಇದೀಗ ಇದೇ ಸಿನಿಮಾ ಕಥೆಯ ಮಾದರಿಯ ಘಟನೆ ರಿಯಲ್ ಲೈಫ್‌ನಲ್ಲಿಯೂ ನಡೆದಿದೆ. ಪೈಲಟ್ ಒಬ್ಬರು ತನ್ನ ಮಗನನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದೊಯ್ದ ಘಟನೆ ಇತ್ತೀಚೆಗಷ್ಟೇ ನಡೆದಿದೆ. 8 ತಿಂಗಳ ಪುಟ್ಟ ಮಗುವನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದುಕೊಂಡು ಹೋದ ಪೈಲಟ್ ತಂದೆಯ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ವಿಮಾನದಲ್ಲಿ ಪೈಲಟ್ ಆಗಿ ಕೆಲಸ ಮಾಡುತ್ತಿರುವ ಆಕಾಶ್ ಖನ್ನಾ ಎನ್ನುವವರು ತಮ್ಮ ಮಗ ಅಗಸ್ತ್ಯನನ್ನು ವಿಮಾನದಲ್ಲಿ ಕರೆದುಕೊಂಡು ಹೋಗಬೇಕು ಎಂಬ ಆಸೆ ಇಟ್ಟುಕೊಂಡಿದ್ದರು. ಹೀಗಾಗಿ ಅವರು ಪತ್ನಿ ಜತೆಗೆ ತಮ್ಮ ವಿಮಾನದಲ್ಲಿ 8 ತಿಂಗಳ ತಮ್ಮ ಮಗ ಅಗಸ್ತ್ಯನನ್ನು ಕರೆದುಕೊಂಡು ಹೋಗಿದ್ದಾರೆ. ತಂದೆ ಪೈಲೆಟ್ ಆಗಿದ್ದ ವಿಮಾನದಲ್ಲಿ ಮಗನು ಪ್ರಯಾಣಿಕನಾಗಿ ತೆರಳಿರುವ ಈ ವಿಶೇಷ ಕ್ಷಣಗಳನ್ನು ವಿಡಿಯೊದಲ್ಲಿ ಸೆರೆ ಹಿಡಿಯಲಾಗಿದೆ.
ವಿಡಿಯೊ ನೋಡಿ:
ಆಕಾಶ್ ಖನ್ನಾ ಅವರ ಪತ್ನಿ, ಯೋಗ ಮಾರ್ಗದರ್ಶಿ ಗುಂಜನ್ ಆಪ್ಟೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೊ ಹಂಚಿಕೊಂಡಿದ್ದಾರೆ. ಪೈಲಟ್ ಪುತ್ರನಿಗೆ ಇದು ಮೊದಲ ಫ್ಲೈಟ್ ಜರ್ನಿಯಾಗಿದೆ. ತಂದೆ ಜತೆ ಪುಟ್ಟ ಕಂದಮ್ಮನೂ ಪೈಲಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದೆ. ಕಾಕ್ ಪಿಟ್ ಅನನು ಮಗು ಕುತೂಹಲದಿಂದ ನೋಡುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಬ್ಯಾಂಕ್‍ನಲ್ಲಿ ಹಣವಿಟ್ಟರೆ ಸುರಕ್ಷಿತ ಅಂದುಕೊಂಡಿದ್ದೀರಾ? ಗ್ರಾಹಕರ ದುಡ್ಡನ್ನೇ ಕದ್ದ ಕ್ಯಾಶಿಯರ್
ವೈರಲ್ ಆದ ಈ ವಿಡಿಯೋದಲ್ಲಿ ಮಗು ಅಗಸ್ತ್ಯನ ಜತೆಗೆ ಗುಂಜನ್ ಆಪ್ಟೆ ಕೂಡ ಇರುವುದನ್ನು ಕಂಡುಬಂದಿದೆ. ಮಗುವಿಗೆ ಪೈಲಟ್‌ನ ಸಮವಸ್ತ್ರವನ್ನು ತೊಡಿಸಲಾಗಿದ್ದು, ವಿಮಾನದ ಬೋರ್ಡಿಂಗ್ ಪಾಸ್ ತೆಗೆದುಕೊಳ್ಳುವುದು, ವಿಮಾನದ ಒಳಕ್ಕೆ ಹೋಗಿ ಪೈಲಟ್ ಸೀಟ್‌ನಲ್ಲಿ ಕೂರುವ ದೃಶ್ಯ ಗಳನ್ನು ವಿಡಿಯೊದಲ್ಲಿ ಕಾಣಬಹುದು. ತನ್ನ ಮಗನಿಗೆ ವಿಮಾನದ ಬಗ್ಗೆ ಮಾರ್ಗದರ್ಶನ ಮಾಡುವ ಭಾವನಾತ್ಮಕ ದೃಶ್ಯ ಮನ ಸೆಳೆಯುವಂತಿದೆ. ತನ್ನ ತಂದೆಯ ವಿಮಾನದೊಳಗಿನ ತಾಂತ್ರಿಕ ಕೆಲಸ ಕಾರ್ಯಗಳನ್ನು ವಿಸ್ಮಯದಿಂದ ಮಗು ನೋಡುವ ದೃಶ್ಯ ವಿಶೇಷ ಎನಿಸಿಕೊಂಡಿದೆ.
ʼʼಕಿರಿಯ ಕೋ ಪೈಲಟ್ ಅಗಸ್ತ್ಯ ಖನ್ನಾ ಮೊದಲ ಬಾರಿಗೆ ತನ್ನ ತಂದೆಯ ವಿಮಾನದಲ್ಲಿ ಪ್ರಯಾಣಿಸಿದ್ದಾನೆ. ಈ ಕ್ಷಣ ತುಂಬಾ ಸುಂದರವಾಗಿದೆ. ಧನ್ಯವಾದಗಳು ಅಪ್ಪಾʼʼ ಎಂದು ಆಪ್ಟೆ ಬರೆದುಕೊಂಡಿದ್ದಾರೆ. ಈ ವಿಡಿಯೊಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನೆಟ್ಟಿಗರೊಬ್ಬರು ಕಮೆಂಟ್ ಮಾಡಿ, ಭವಿಷ್ಯದ ಪೈಲಟ್ ಆಗಲು ಮಗುವಿಗೆ ಈಗಲೇ ಮಾರ್ಗದರ್ಶನ ನೀಡಿದಂತಿದೆ. ಬೆಳೆವ ಸಿರಿ ಮೊಳಕೆಯಲ್ಲಿ ಎಂಬಂತೆ ಹೆತ್ತವರು ಈಗಲೇ ಮಗುವಿಗೆ ಭವಿಷ್ಯದ ಗುರಿ ಬಗ್ಗೆ ಮನದಟ್ಟು ಮಾಡಿ ಆತ್ಮವಿಶ್ವಾಸ ಮೂಡಿಸಿದ್ದಾರೆ ಎಂದು ಬರೆದಿದ್ದಾರೆ. ಇದು ಅತ್ಯಂತ ಸುಂದರ ಕ್ಷಣವಾಗಿದ್ದು ಮುಂದೊಂದು ದಿನ ಆ ಮಗು ಈ ವಿಡಿಯೊ ಕಂಡು ಜೀವನ ಪೂರ್ತಿ ಈ ಕ್ಷಣ ಸ್ಮರಣಿಸಬಹುದು ಎಂದು ಮತ್ತೊಬ್ಬರು ಅಬಿಪ್ರಾಯ ಪಟ್ಟಿದ್ದಾರೆ.