ದೆಹಲಿ: ಹಾಡಹಗಲೇ ವೃದ್ಧ ವ್ಯಕ್ತಿಯೊಬ್ಬರ ಮೇಲೆ ಕ್ರೂರವಾಗಿ ಹಲ್ಲೆ ನಡೆಸುತ್ತಿರುವ ಆಘಾತಕಾರಿ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಆಗ್ನೇಯ ದೆಹಲಿಯ (Delhi) ಅಲಿ ಗಾಂವ್‌ನಲ್ಲಿ ಈ ಘಟನೆ ನಡೆದಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ ಮತ್ತು ಹೊಸ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಅಕ್ಟೋಬರ್ 24 ರಂದು ರಘುರಾಜ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯು, ಮನೆಯಿಂದ ಕಚೇರಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಈ ಹಲ್ಲೆ ನಡೆದಿದೆ. ಇದ್ದಕ್ಕಿದ್ದಂತೆ, ಮೋಹಿತ್ ಮತ್ತು ಆತನ ಸಹಚರರು ರಘುರಾಜ್ ಅವರನ್ನು ತಡೆದು, ಕಾರಿನ ವಿಂಡ್ ಷೀಲ್ಡ್ ಅನ್ನು ಒಡೆದು, ವಾಹನದಿಂದ ಹೊರಗೆ ಎಳೆದು ನಿರ್ದಯವಾಗಿ ಥಳಿಸಲು ಪ್ರಾರಂಭಿಸಿದರು.
ಆರೋಪಿಯು ವೃದ್ಧ ವ್ಯಕ್ತಿಯನ್ನು ಕೋಲುಗಳಿಂದ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದಾನೆ. ಹಲ್ಲೆಯಿಂದಾಗಿ ರಘುರಾಜ್ ಅವರ ಎರಡೂ ಕಾಲುಗಳು ಮುರಿದಿವೆ ಎಂದು ಪೊಲೀಸ್ ಅಧಿಕಾರಿಗಳು ದೃಢಪಡಿಸಿದರು. ಆರೋಪಿಯು ರಸ್ತೆಯ ಮಧ್ಯದಲ್ಲಿ ಕೋಲುಗಳಿಂದ ಹೊಡೆಯುತ್ತಲೇ ಇದ್ದಾಗ ರಘುರಾಜ್ ನೋವಿನಿಂದ ಅಳುತ್ತಿರುವುದನ್ನು ಈ ವಿಡಿಯೊ ತೋರಿಸುತ್ತದೆ. ಪಕ್ಕದಲ್ಲಿದ್ದವರು ದಾಳಿಯನ್ನು ತಡೆಯಲು ಪ್ರಯತ್ನಿಸಿದಾಗ, ದಾಳಿಕೋರರು ಅವರನ್ನೂ ಬೆದರಿಸಿ ದೂರ ಇರುವಂತೆ ಎಚ್ಚರಿಸಿದ್ದಾರೆ ಎನ್ನಲಾಗಿದೆ.
ವಿಡಿಯೊ ವೀಕ್ಷಿಸಿ:
ವರದಿಯ ಪ್ರಕಾರ, ಈ ದಾಳಿಯು ವೈಯಕ್ತಿಕ ದ್ವೇಷದಿಂದ ಪ್ರೇರಿತವಾಗಿದೆ ಎನ್ನಲಾಗಿದೆ. ಅಧಿಕಾರಿಗಳ ಪ್ರಕಾರ, ಎರಡು ವರ್ಷಗಳ ಹಿಂದೆ, ಪ್ರಮುಖ ಆರೋಪಿ ಮೋಹಿತ್ ಎಂಬಾತ ಅಲಿಗಾಂವ್‌ನಲ್ಲಿ ಒಂದು ಜಮೀನನ್ನು ಖರೀದಿಸಿ ಅದರ ಮೇಲೆ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದ್ದ. ದೆಹಲಿ ಅಭಿವೃದ್ಧಿ ಪ್ರಾಧಿಕಾರ (DDA) ಅನಧಿಕೃತ ನಿರ್ಮಾಣವನ್ನು ಉಲ್ಲೇಖಿಸಿ ಒಂದು ತಿಂಗಳೊಳಗೆ ನಿರ್ಮಾಣ ಹಂತದ ಕಟ್ಟಡವನ್ನು ಕೆಡವಿತು.
ಇದನ್ನೂ ಓದಿ: Viral Video: ಕಂಡ ಕಂಡವರ ಮೇಲೆ ಬೆಲ್ಟ್‌ನಿಂದ ಹಲ್ಲೆ ನಡೆಸಿ ಮಹಿಳಾ ಬೌನ್ಸರ್‌ಗಳ ಅಟ್ಟಹಾಸ!
ಅಕ್ರಮ ನಿರ್ಮಾಣದ ಬಗ್ಗೆ ರಘುರಾಜ್ ಡಿಡಿಎಗೆ ದೂರು ನೀಡಿದ್ದರಿಂದ ನಿರ್ಮಾಣ ಹಂತದಲ್ಲಿದ್ದ ಕಟ್ಟಡವನ್ನು ಕೆಡವಬೇಕಾಯಿತು ಎಂದು ಮೋಹಿತ್ ಅನುಮಾನ ವ್ಯಕ್ತಪಡಿಸಿದ್ದಾನೆ. ತನ್ನ ನಷ್ಟಕ್ಕೆ ರಘುರಾಜ್ ಕಾರಣ ಎಂದು ನಂಬಿದ್ದ ಮೋಹಿತ್, ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿ ಶುಕ್ರವಾರ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭ
ಇನ್ನು ಈ ಸಂಬಂಧ ದೆಹಲಿ ಪೊಲೀಸರು ಸರಿತಾ ವಿಹಾರ್ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಕ್ರಿಮಿನಲ್ ಬೆದರಿಕೆಗಾಗಿ ಭಾರತೀಯ ದಂಡ ಸಂಹಿತೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಸ್ತುತ ತಲೆಮರೆಸಿಕೊಂಡಿರುವ ಮೋಹಿತ್ ಮತ್ತು ಆತನ ಸಹಚರರನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ತಂಡಗಳನ್ನು ನಿಯೋಜಿಸಲಾಗಿದೆ.