ಡೆಹ್ರಾಡೂನ್, ಮೇ 22: ಇತ್ತೀಚೆಗೆ ರಸ್ತೆಯಲ್ಲಿ ಮೀತಿಮೀರಿದ ವಾಹನ, ಸುರಕ್ಷತೆ ಕಾಯ್ದುಕೊಳ್ಳದೆ ಇರುವುದು ಹೀಗೆ ನಾನಾ ಕಾರಣದಿಂದ ಅಪಘಾತ ಪ್ರಕರಣ ಹೆಚ್ಚುತ್ತಿದೆ. ಇದೀಗ ಉತ್ತರಾಖಂಡದಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಶಿಕ್ಷಕಿಯೊಬ್ಬರು ಪ್ರಯಾಣಿಸುತ್ತಿದ್ದ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಕಾಡಾನೆಯ ದಂತವೇ ಮುರಿದು ರಸ್ತೆಗೆ ಬಿದ್ದಿದೆ. ಸದ್ಯ ಈ ಘಟನೆಯ ದೃಶ್ಯ ವೈರಲ್ (Viral News) ಆಗುತ್ತಿದ್ದಂತೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಆನೆ ಎದುರಾದರೆ ಎಂತಹವರಾದರೂ ಒಂದು ಕ್ಷಣ ದಂಗಾಗುವುದು ಸಹಜ. ಅದೇ ರೀತಿ ಉತ್ತರಾಖಂಡದ ಖತಿಮಾ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕಿಯೊಬ್ಬರು ಪ್ರಯಾಣಿಸುತ್ತಿದ್ದಾಗ ಆನೆ ಹಠಾತ್ತನೆ ರಸ್ತೆಗೆ ಎಂಟ್ರಿ ನೀಡಿದೆ. ಈ ವೇಳೆ ಸ್ಕೂಟರ್ ಓಡಿಸುತ್ತಿದ್ದ ಶಿಕ್ಷಕಿಗೆ ಗಾಬರಿಯಾಗಿದ್ದು, ಆನೆಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಆನೆಯ ದಂತವೇ ಮುರಿದು ಹೋಗಿದೆ.
ವಿಡಿಯೊ ನೋಡಿ:
ಶಿಕ್ಷಕಿ ತಮ್ಮ ಆಕ್ಟಿವಾ ಸ್ಕೂಟರ್‌ನಲ್ಲಿ ವೇಗವಾಗಿ ಶಾಲೆಗೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಆನೆಯೊಂದು ರಸ್ತೆಗೆ ಎಂಟ್ರಿ ನೀಡಿದೆ. ಶಿಕ್ಷಕಿಯ ಸ್ಕೂಟರ್ ನೇರವಾಗಿ ಆನೆಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಎಷ್ಟು ಪ್ರಬಲವಾಗಿತ್ತೆಂದರೆ ಆನೆಯ ದಂತಗಳು ಮುರಿದು ರಸ್ತೆಗೆ ಬಿದ್ದವು. ಅಪಘಾತದ ನಂತರ ಗಾಯಗೊಂಡ ಆನೆ ಭಯದಿಂದ ತಕ್ಷಣವೇ ಸಮೀಪದ ಅರಣ್ಯದೊಳಗೆ ಓಡಿ ಕಣ್ಮರೆಯಾಗಿದೆ. ಸದ್ಯ ಅರ್ಣು ಇಲಾಖೆ ಸಿಬ್ಬಂದಿ ಆನೆಯ ದಂತ ವಶಕ್ಕೆ ಪಡೆದಿದ್ದಾರೆ.
ಅತ್ತೆಯನ್ನು ನೋಡಿಕೊಳ್ಳಲು ಕೆಲಸ ಬಿಡಲು ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡಿದ ಪತಿ!
ಸ್ಕೂಟರ್ ಸಂಪೂರ್ಣ ಜಖಂಗೊಂಡಿದ್ದು, ಪ್ರತ್ಯಕ್ಷದರ್ಶಿಗಳು ಘಟನೆಯ ಬಗ್ಗೆ ಆತಂಕ ವ್ಯಕ್ತ ಪಡಿಸಿದ್ದಾರೆ. ಅಪಘಾತದಲ್ಲಿ ಶಿಕ್ಷಕಿಯೂ ಗಾಯವಾಗಿದ್ದು, ಸ್ಕೂಟರ್ ಜಖಂಗೊಂಡಿದೆ. ಈ ಘಟನೆಯ ಫೋಟೊಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತೀವ್ರ ಕಳವಳ ವ್ಯಕ್ತ ಪಡಿಸಿದರು. ಒಬ್ಬರು, “ಈ ಮಹಿಳೆ ಎಷ್ಟು ವೇಗವಾಗಿ ಸ್ಕೂಟರ್ ಚಾಲನೆ ಮಾಡುತ್ತಿದ್ದಾಳೆಂದು ಊಹಿಸಿ" ಎಂದಿದ್ದಾರೆ. ಮತ್ತೊಬ್ಬರು, ʼʼಆನೆಗೆ ಡಿಕ್ಕಿಯಾದ ಮೇಲೂ ಆ ಮಹಿಳೆ ಬದುಕುಳಿದಿದ್ದಾರಲ್ಲ, ಅದೇ ಆಶ್ಚರ್ಯʼʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ʼʼಆನೆಗಳು ಸಹ ರಸ್ತೆಗಳಲ್ಲಿ ಸುರಕ್ಷತವಾಗಿಲ್ಲʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.