ಜೈಪುರ, ಆ. 10: ರೈತನೊಬ್ಬ ತಾನು ಕೂಡಿಟ್ಟ ಹಣವನ್ನು ಜಮೀನಿನಲ್ಲಿ ಹೂತಿಟ್ಟಿದ್ದು, ಅದನ್ನು ಗೆದ್ದಲು ತಿಂದು ನಾಶಪಡಿಸಿರುವ ಘಟನೆ ನಡೆದಿದೆ. ರಾಜಸ್ಥಾನದ ಬಲೋತ್ರಾ ಜಿಲ್ಲೆಯ ರೈತನೊಬ್ಬ ತಾನು ಕೂಡಿಟ್ಟ ಹಣದ ಬಗ್ಗೆ ಮನೆಯವರಿಗೆ ತಿಳಿಯಬಾರದೆಂದು ಹೊಲದಲ್ಲಿ ರಹಸ್ಯವಾಗಿ ಹೂತಿಟ್ಟಿದ್ದ. ಆದರೆ ಗೆದ್ದಲುಗಳು ಹಣವನ್ನು ನಾಶ ಪಡಿಸಿದ್ದು 5 ಲಕ್ಷ ರುಪಾಯಿ ಮೌಲ್ಯದ 500 ರುಪಾಯಿ ನೋಟುಗಳು ಸಂಪೂರ್ಣ ಹಾಳಾಗಿವೆ. ಈ ಹಾಳಾದ ನೋಟುಗಳ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.
ಪಚ್‌ಪದ್ರಾ ನಿವಾಸಿ ಮಂಗಿಲಾಲ್ ಮೇಘವಾಲ್ ಸುಮಾರು ಒಂದು ವರ್ಷದ ಹಿಂದೆ ಜಮೀನು ಮಾರಾಟ ಮಾಡಿದ್ದು, ಸುಮಾರು 5 ಲಕ್ಷ ರುಪಾಯಿ ಪಡೆದಿದ್ದರು. ಅವರು ತಮ್ಮ ಕೃಷಿ ಭೂಮಿಯಲ್ಲಿ ಸಣ್ಣ ಮನೆ ನಿರ್ಮಿಸಲು ಹಣವನ್ನು ಬಳಸಲು ಮುಂದಾಗಿದ್ದರು. ಆದರೆ ಹಣವನ್ನು ಕುಟುಂಬ ಸದಸ್ಯರು ಖರ್ಚು ಮಾಡಬಹುದೆಂದು ಭಾವಿಸಿ ಹೊಲದಲ್ಲಿ ಹೂತಿಟ್ಟಿದ್ದರು. ಆದರೆ ಇದಗ ಕೈಗೆ ಬಂದ ಬಾಯಿಗೆ ಬಂದಿಲ್ಲ ಎನ್ನುವಂತಾಗಿದೆ.
ವಿಡಿಯೊ ನೋಡಿ:
ಹಣವನ್ನು ಸುರಕ್ಷಿತವಾಗಿ ಇರಿಸಲು 500 ರುಪಾಯಿ ನೋಟುಗಳನ್ನು ಪಾಲಿಥಿನ್ ಚೀಲದೊಳಗೆ ಹಾಕಿ ಮನೆಯವರಿಗೆ ತಿಳಿಸದೆ ಹೊಲದಲ್ಲಿ ಹೂತುಹಾಕಿದ್ದರು. ಅದಾಗ್ಯೂ ನಂತರ ಅವರಿಗೆ ಹಣದ ಅಗತ್ಯವಿದ್ದಾಗ, ಅದನ್ನು ಎಲ್ಲಿ ಹೂತಿಟ್ಟಿದ್ದಾರೆಂದು ನಿಖರವಾಗಿ ನೆನಪಿರಲಿಲ್ಲ. ಅವರು ಹೊಲದಲ್ಲಿ ಹಲವು ದಿನಗಳವರೆಗೆ ಹುಡುಕಿದರೂ ಕಂಡು ಹಿಡಿಯಲಾಗಲಿಲ್ಲ. ಅಂತಿಮವಾಗಿ ಅವರು ತನ್ನ ಕುಟುಂಬಕ್ಕೆ ತಿಳಿಸಿದ್ದು ಎಷ್ಟೇ ಹುಡುಕಾಡಿದರೂ ಸಿಕ್ಕಿಲ್ಲ.
ಆಗ್ರಾದಲ್ಲಿ ಫ್ರಿಜ್ ಒಳಗೆ ಮೂಡಿ ಬಂದ ಹಿಮ ಶಿವಲಿಂಗ; ದರ್ಶನಕ್ಕೆ ಭಕ್ತರ ದಂಡು
ಇತ್ತೀಚೆಗೆ ಮಳೆ ಬಂದ ನಂತರ ಜಮೀನಿನಲ್ಲಿ ಬಿತ್ತನೆಗಾಗಿ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುತ್ತಿದ್ದಾಗ, ಹೂತಿಡಲಾಗಿದ್ದ ಪ್ಲಾಸ್ಟಿಕ್ ಚೀಲ ಮಣ್ಣಿನ ಮೇಲ್ಭಾಗಕ್ಕೆ ಬಂತು. ಮಂಗಿಲಾಲ್ ಅವರ ಪತ್ನಿ ಮತ್ತು ಮಗ ಚೀಲವನ್ನು ಗಮನಿಸಿ ಅದನ್ನು ತೆರೆದಾಗ, ಗೆದ್ದಲುಗಳಿಂದ ತೀವ್ರವಾಗಿ ಹಾನಿಗೊಳಗಾದ 500 ರುಪಾಯಿ ನೋಟುಗಳು ಸಿಕ್ಕಿವೆ. ನೋಟುಗಳು ಪೂರ್ಣ ಪ್ರಮಾಣದಲ್ಲಿ ಗೆದ್ದಲು ಹಿಡಿದು ನಾಶವಾಗಿವೆ.
ಕುಟುಂಬವು ಹಾನಿಗೊಳಗಾದ ನೋಟುಗಳೊಂದಿಗೆ ಪಚ್ಪದ್ರಾ ಮತ್ತು ಬಲೋತ್ರಾದಲ್ಲಿರುವ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಿದೆ. ಬ್ಯಾಂಕ್ ಅಧಿಕಾರಿಗಳು ಜೈಪುರದ ಬ್ಯಾಂಕ್ ಸಂಪರ್ಕಿಸಲು ಅವರಿಗೆ ಸೂಚಿಸಿದ್ದಾರೆ. ಆದರೆ ಆರ್ಥಿಕ ಸಂಕಷ್ಟ ಹಾಗೂ ಮಾಹಿತಿ ಕೊರತೆಯಿಂದ ಜೈಪುರಕ್ಕೆ ತೆರಳಲು ರೈತನ ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಗೆದ್ದಲು ಹಿಡಿದ ರಾಶಿ ರಾಶಿ ನೋಟುಗಳು ವಿಡಿಯೊದಲ್ಲಿದೆ. ಹಣ ರಹಸ್ಯವಾಗಿ ಇಡಲು ಹೋಗಿ ಸಂಪೂರ್ಣ ಧ್ವಂಸ ಆಗಿದ್ದಕ್ಕೆ ರೈತ ಕಣ್ಣೀರು ಹಾಕಿದ್ದಾರೆ.