ಬಿಹಾರ: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್(Reels) ಮಾಡುವ ಹುಚ್ಚು ಹೆಚ್ಚಾಗಿದೆ. ಮಗುವಿನ ಮೇಲೆ ಹಲ್ಲಿ ಬಿದ್ದಿದ್ದರೂ ಅಪ್ಪ-ಅಮ್ಮ ರೀಲ್ಸ್ ಮಾಡುವುದರಲ್ಲಿಯೇ ಬ್ಯುಸಿಯಾಗಿದ್ದ ವಿಡಿಯೊ ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ಬಿಹಾರದಲ್ಲಿ ಮಹಿಳಾ ಕಾನ್‌ಸ್ಟೇಬಲ್ ಪೊಲೀಸ್ ಠಾಣೆಯಲ್ಲಿ "ಹಮ್ ಹೈ ಬಿಹಾರಿ(Hum Hai Bihari) ಥೋಡಾ ಲಿಮಿಟ್ ಮೇ ರಹಿಯೇಗಾ" ಹಾಡಿಗೆ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾಳೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು ನೆಟ್ಟಿಗರು ವಿಡಿಯೊ ನೋಡಿ ಕಿಡಿಕಾರಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ "ಆರತಿ" ಎಂಬಾಕೆ ಪೊಲೀಸ್ ಸಮವಸ್ತ್ರದಲ್ಲಿ "ಹಮ್ ಹೈ ಬಿಹಾರಿ, ಥೋಡಾ ಲಿಮಿಟ್ ಮೇ ರಹಿಯೇಗಾ" ಎಂಬ ಟ್ರೆಂಡಿಂಗ್ ಹಾಡಿಗೆ ಲಿಪ್-ಸಿಂಕ್ ಮಾಡಿದ್ದಾಳೆ. ಈ ವಿಡಿಯೊವನ್ನು ಯಾವ ಪೊಲೀಸ್ ಠಾಣೆಯ ಹೊರಗೆ ಚಿತ್ರೀಕರಿಸಲಾಗಿದೆ ಮತ್ತು ಯಾವಾಗ ರೆಕಾರ್ಡ್ ಮಾಡಲಾಗಿದೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯು ಸಮವಸ್ತ್ರದ ಘನತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬಿಹಾರ ಪೊಲೀಸರ ಮಾರ್ಗಸೂಚಿಗಳ ಪ್ರಕಾರ, ಪೊಲೀಸರು ಕೆಲಸದ ಸ್ಥಳದಲ್ಲಿ ಸಮವಸ್ತ್ರದಲ್ಲಿ ವಿಡಿಯೊಗಳು/ರೀಲ್‌ಗಳನ್ನು ತಯಾರಿಸುವುದು ಮತ್ತು ಅವುಗಳನ್ನು ನೇರ ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ.
ವಿಡಿಯೊ ಇಲ್ಲಿದೆ ನೋಡಿ...
ಪೊಲೀಸ್ ಸಮವಸ್ತ್ರ ಧರಿಸಿ ಮಹಿಳಾ ಪೊಲೀಸ್ ಅಧಿಕಾರಿ ವಿಡಿಯೊ ಮಾಡಿದ್ದು,ಇದೇ ಮೊದಲಲ್ಲ. ಈ ಹಿಂದೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ಸಮವಸ್ತ್ರದಲ್ಲಿರುವ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ರೀಲ್ಸ್ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೊ ವೈರಲ್ ಆದ ನಂತರ ವಿವಾದ ಭುಗಿಲೆದ್ದಿತ್ತು.
ಇದರಲ್ಲಿ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ಪ್ರೊಲಿ ಭಾರದ್ವಾಜ್ ದೂರುದಾರರ ಮಗುವನ್ನು ಮುದ್ದಿಸುತ್ತಿರುವುದನ್ನು ಸೆರೆಹಿಡಿಯಲಾಗಿದೆ. ವಿಡಿಯೊದ ಹಿನ್ನೆಲೆಯಲ್ಲಿ 'ಹಾಯೇ ಮೇರಾ ದಿಲ್ ಚುರಾ ಕೆ ಲೇ ಗಯಾ' ಚಲನಚಿತ್ರ ಹಾಡು ಪ್ಲೇ ಆಗುತ್ತಿತ್ತು. ಘಟನೆಯ ನಂತರ ಪೊಲೀಸ್ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ತನಿಖೆಗೆ ಆದೇಶಿಸಿದ್ದರು. ಈ ವಿಷಯದ ಬಗ್ಗೆ ತನಿಖೆ ನಡೆಸಿದ ನಂತರ, ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿತ್ತು.
ಈ ಸುದ್ದಿಯನ್ನೂ ಓದಿ:Viral Video: ಕಚೇರಿಯಲ್ಲಿಯೇ ಅಧಿಕಾರಿಗೆ ಮನಸೋ ಇಚ್ಛೆ ಥಳಿಸಿದ ಯುವಕರ ಗುಂಪು; ವಿಡಿಯೋ ವೈರಲ್
ಸಮವಸ್ತ್ರದಲ್ಲಿ ರೀಲ್ ಮಾಡಿದ ಮಹಿಳಾ ಕಾನ್‌ಸ್ಟೇಬಲ್ ಅಮಾನತು
ಅದೇರೀತಿ ಬಾಘಾ ಪೊಲೀಸ್ ಠಾಣೆ ಆವರಣದಲ್ಲಿರುವ ನಿಯಂತ್ರಣ ಕೊಠಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕಾನ್‌ಸ್ಟೇಬಲ್ ಸಮವಸ್ತ್ರದಲ್ಲಿ ರೀಲ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದು ವೈರಲ್ ಆಗಿತ್ತು. ಇದು ಪೊಲೀಸ್ ಇಲಾಖೆಯ ಗಮನಕ್ಕೆ ಬಂದ ನಂತರ ಇಲಾಖೆಯ ಅಧಿಕಾರಿಗಳು ಇಡೀ ಪ್ರಕರಣದ ತನಿಖೆಯನ್ನು ನಡೆಸಿ ಮಹಿಳಾ ಕಾನ್‌ಸ್ಟೇಬಲ್‌ನನ್ನು ಅಮಾನತುಗೊಳಿಸಿದ್ದರು.