ಚೆನ್ನೈ, ಸೆ. 29: ಸಿನಿಮಾ ಸನ್ನಿವೇಶವನ್ನು ಮೀರಿಸುವಂತಹ ಘಟನೆಯೊಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ತಂಬಾಕು ಕಳ್ಳ ಸಾಗಣೆ ಶಂಕಿತರನ್ನು ಬೆನ್ನಟ್ಟಲು ಕಾನ್ಸ್‌ಟೇಬಲ್ ಒಬ್ಬರು ಕಾರಿನ ರೂಫ್ ಹಿಡಿದು 40 ಕಿಲೋ ಮೀಟರ್‌ವರೆಗೆ ಪ್ರಯಾಣಿಸಿದ್ದಾರೆ. ಈ ಘಟನೆಯು (Viral News) ರೋಚಕವಾಗಿದ್ದು, ಕೊನೆಗೂ ಪೊಲೀಸರು ಕೊಯಮತ್ತೂರು ಜಿಲ್ಲೆಯ ಗಡಿಯ ಸಮೀಪವಿರುವ ಪೆಟ್ರೋಲ್ ಬಂಕ್ ಬಳಿ ವಾಹನವನ್ನು ತಡೆಯುವಲ್ಲಿ ಯಶಸ್ವಿಯಾದರು.
ಅಕ್ರಮ ತಂಬಾಕು ಗುಟ್ಕಾ ಸಾಗಾಟ ನಡೆಯುತ್ತಿರುವ ಬಗ್ಗೆ ಮೊದಲೇ ಮಾಹಿತಿ ಸಿಕ್ಕಿದ್ದು, ತಮಿಳುನಾಡಿನ ವಿಲಂಕುರಿಚಿ ಪ್ರದೇಶದಲ್ಲಿ ಪೊಲೀಸರು ತಪಾಸಣೆಗಾಗಿ ಚೆಕ್‌ಪೋಸ್ಟ್ ಹಾಕಿದ್ದರು. ಈ ವೇಳೆ ಕರ್ನಾಟಕದ ನೋಂದಣಿ ಸಂಖ್ಯೆ ಹೊಂದಿದ್ದ 'ಹ್ಯುಂಡೈ ಕ್ರೇಟಾ' ಕಾರ್ ವೇಗವಾಗಿ ಆಗಮಿಸಿತ್ತು. ನಿಲ್ಲಿಸುವಂತೆ ಪೊಲೀಸರು ಸೈರನ್ ಹಾಕಿದ್ದರೂ ಚಾಲಕ ವೇಗವಾಗಿ ಕಾರ್ ಚಲಾಯಿಸಿ ಪರಾರಿಯಾಗಲು ಮುಂದಾಗಿದ್ದಾನೆ. ಆಗ ನಡೆದದ್ದೇ ಯಾವ ಚಿತ್ರಕ್ಕೂ ಕಡಿಮೆ ಇಲ್ಲದ ರೋಚಕ ಘಟನೆ.
ವಿಡಿಯೊ ನೋಡಿ:
ಅಕ್ರಮ ಸರಕು ಸಾಗಣೆಯಾಗುತ್ತಿರಬಹುದು ಎಂದು ಶಂಕಿಸಿದ ಪೊಲೀಸರು ತಕ್ಷಣವೇ ಕಾರ್ ಬೆನ್ನಟ್ಟಲು ಪ್ರಾರಂಭಿಸಿದರು. ಆದರೆ ಕಾರಿನ ಚಾಲಕ ಸ್ಪೀಡ್ ಹೆಚ್ಚು ಮಾಡುತ್ತಿದ್ದಂತೆ ಹೆಡ್ ಕಾನ್ಸ್‌ಟೇಬಲ್ ಚಲಿಸುತ್ತಿದ್ದ ಕಾರಿನ ಚಾವಣಿಯನ್ನು ಏರಿ ಅದರ ಮೇಲೆ ನೇತಾಡಿಕೊಂಡೇ ಪ್ರಯಾಣಿಸಿದರು. ರೂಫ್ ಹಿಡಿದು ಬರೋಬ್ಬರಿ 40 ಕಿಲೋ ಮೀಟರ್‌ವರೆಗೆ ಪ್ರಯಾಣಿಸಿದ್ದಾರೆ.
ಸಾರ್ವಜನಿಕರ ಮುಂದೆಯೇ ನದಿಗೆ ಕಸ ಎಸೆದ ದಂಪತಿ; ತಲೆ ತಗ್ಗಿಸಿದ ನಾಗರಿಕ ಸಮಾಜ
ಬಳಿಕ ಕಂಟ್ರೋಲ್ ರೂಮ್ ಹಾಗೂ ಆಂಬ್ಯುಲೆನ್ಸ್‌ಗೆ ಮಾಹಿತಿ ರವಾನಿಸಿದ್ದು, ಕಾರ್ ಸುಮಾರು 40 ಕಿ.ಮೀ. ದೂರ ಸಾಗಿದರೂ ಕಾನ್ಸ್‌ಟೇಬಲ್ ರೂಫ್ ಮೇಲೆಯೇ ತೂಗಾಡುತ್ತಾ ಹೋಗಿದ್ದಾರೆ. ಹಿಂಬದಿಯಲ್ಲಿ ಬರುತ್ತಿದ್ದ ಆಂಬ್ಯುಲೆನ್ಸ್ ಸಿಬ್ಬಂದಿ ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ವಿಡಿಯೋದಲ್ಲಿ ಕಾನ್ಸ್‌ಟೇಬಲ್ ಕಾರಿನ ಮೇಲೆ ಕುಳಿತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.
ನಂತರ ಪೊಲೀಸರು ಕಾರಿನಿಂದ ಸುಮಾರು 200 ಕೆಜಿ ಗುಟ್ಕಾವನ್ನು ವಶಪಡಿಸಿಕೊಂಡರು. ಮೂವರು ಆರೋಪಿಗಳು ರಾಜಸ್ಥಾನದವರಾಗಿದ್ದು, ಕರ್ನಾಟಕದಿಂದ ಪ್ರಯಾಣಿಸಿದ್ದರು ಎಂದು ವರದಿಯಾಗಿದೆ. ವಶಪಡಿಸಿಕೊಂಡ ವಸ್ತುಗಳ ಮೂಲ ಮತ್ತು ಅವುಗಳನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರನ್ನು ವಿಚಾರಣೆಗೊಳಪಡಿಸಲಾಗುತ್ತಿದೆ.