ಲಖನೌ, ಜೂ. 15: ಇತ್ತೀಚಿಗೆ ವಿದೇಶದಲ್ಲಿ ಭಾರತೀಯರು ನಿಯಮ ಉಲ್ಲಂಘಿಸಿ ನಾಗರಿಕ ಪ್ರಜ್ಞೆಯನ್ನೇ ಮರೆತು ವರ್ತಿಸುತ್ತಿದ್ದಾರೆ ಎನ್ನುವ ದೂರುಗಳು ಹೆಚ್ಚಾಗಿ ಕೇಳಿ ಬರುತ್ತಿದೆ. ಐತಿಹಾಸಿಕ ಸ್ಥಳದಲ್ಲಿ ಫೋಟೊ ಶೂಟ್, ಸಾರ್ವಜನಿಕ ಸ್ಥಳದಲ್ಲಿ ಶಿಸ್ತು ಕಾಪಾಡದೇ ಇರುವ ಬಗ್ಗೆ ವಿದೇಶಿಗರೂ ದೂರಿದ್ದರು. ಆದರೆ ಇದೀಗ ಭಾರತದಲ್ಲಿ ವಿದೇಶಿಗರೇ ನಿಯಮ ಗಾಳಿಗೆ ತೂರಿದ ಘಟನೆಯೊಂದು ನಡೆದಿದೆ. ಈಜುಕೊಳದ ಬಳಿ ವಿದೇಶಿ ಮಹಿಳೆಯರ ಗುಂಪೊಂದು ಗಾಂಜಾ ಸೇವಿಸುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗಿದೆ. ವಿದೇಶಿ ಪ್ರಜೆಗಳಿಗೆ ಈಗ ನಾಗರಿಕ ಪ್ರಜ್ಞೆ ಇಲ್ಲವೆ? ಅಥವಾ ಕಾನೂನು ಅನ್ವಯಿಸುವುದಿಲ್ಲವೇ? ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ನೋಯ್ಡಾದ ಐಷಾರಾಮಿ ವಸತಿ ಸಂಕೀರ್ಣವಾದ ಸೂಪರ್ ನೋವಾ ಸ್ಪೈರಾ ಟವರ್ಸ್‌ನಲ್ಲಿ ಈ ಘಟನೆ ನಡೆದಿದೆ. ಸಾರ್ವಜನಿಕ ನಡವಳಿಕೆ ಮತ್ತು ಸ್ಥಳೀಯ ನಿಯಮಗಳ ಉಲ್ಲಂಘನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಈಜುಕೊಳದ ಹತ್ತಿರ ಸ್ವಿಮ್ ಸೂಟ್ ಹಾಕಿದ್ದ ಮೂವರು ವಿದೇಶಿ ಮಹಿಳೆಯರು ಧೂಮಪಾನ ಮಾಡಿರುವುದು ಕಂಡು ಬಂದಿದೆ. ಅದರಲ್ಲೂ ಮಕ್ಕಳು ಸೇರಿ ಸ್ಥಳೀಯ ನಿವಾಸಿಗಳು ಹೆಚ್ಚಾಗಿ ಭೇಟಿ ನೀಡುವ ಸಾಮಾನ್ಯ ಮನರಂಜನಾ ಸ್ಥಳವಾದ ಪೂಲ್‌ಸೈಡ್ ಪ್ರದೇಶದ ಬಳಿ ಮಹಿಳೆಯರು ಈಜುಡುಗೆ ಧರಿಸಿ ಗಾಂಜಾ ಸೇವನೆ ಮಾಡುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ವಿಡಿಯೊ ನೋಡಿ:
ಈ ಸ್ಥಳದಲ್ಲಿ ಧೂಮಪಾನ ಮಾಡದಂತೆ ಅಲ್ಲಿನ ಸಿಬ್ಬಂದಿ ಎಚ್ಚರಿಕೆಯನ್ನು ನೀಡಿದ್ದರೂ ಮಹಿಳೆಯರು ನಿರ್ಲಕ್ಷಿಸಿ ಸಿಗರೇಟ್ ಸೇದಿದ್ದಾರೆ. ಇನ್‌ಕಾಗ್ನಿಟೋ ಎಂಬ ಖಾತೆಯಲ್ಲಿ ಈ ವಿಡಿಯೊ ಶೇರ್ ಮಾಡಲಾಗಿದೆ. ʼʼನೋಯ್ಡಾದ ಸೂಪರ್ ನೋವಾ ಸ್ಪೈರಾ ಟವರ್ಸ್‌ನಲ್ಲಿರುವ ಈಜುಕೊಳದ ಬಳಿ ಕೆಲವು ವಿದೇಶಿ ಮಹಿಳೆಯರು ಗಾಂಜಾ ಸೇದುತ್ತಿರುವುದು ಕಂಡು ಬಂದಿದೆʼʼ ಎಂದು ಬರೆಯಲಾಗಿದೆ.
ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ರಂಪಾಟ; ಮಾಡಿದ ಸಬ್ ಇನ್ಸ್‌ಪೆಕ್ಟರ್ ಬಂಧನ
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಮಹಿಳೆಯರ ನಡತೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ನೆಟ್ಟಿಗರೊಬ್ಬರು, "ನೀವು ಸ್ಥಳೀಯರಾಗಿರಲಿ, ಶ್ರೀಮಂತರಾಗಿರಲಿ, ಪ್ರಭಾವಿಯಾಗಿರಲಿ ಅಥವಾ ವಿದೇಶಿ ಪ್ರವಾಸಿಗರಾಗಿರಲಿ, ನಿಯಮಗಳು ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕು" ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು, ʼʼಭಾರತೀಯರ ನಾಗರಿಕ ಪ್ರಜ್ಞೆ ಪ್ರಶ್ನೆ ಮಾಡುವ ವಿದೇಶಿಗರು ಸಾರ್ವಜನಿಕ ಸ್ಥಳಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ, ಯಾವುದೇ ನಿಯಮ ಅನ್ವಯಿಸುವುದಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆʼʼ ಎಂದು ಕಾಮೆಂಟ್ ಮಾಡಿದ್ದಾರೆ.