ಒಡಿಶಾ,ಮೇ 13: ಸ್ವಾರ್ಥ ಜೀವನ ಬಯಸುವ ಈ ಕಾಲ ಘಟ್ಟದಲ್ಲೂ ಮಾನವೀಯತೆ ಮೆರೆಯುವ ಅನೇಕ ದೃಶ್ಯಗಳನ್ನು ನಾವು ಕಂಡಿರುತ್ತೇವೆ. ಇದಕ್ಕೆ ಸಾಕ್ಷಿ ಎಂಬಂತೆ ಆಟೋ ಚಾಲಕರೊಬ್ಬರು ಮಾನವೀಯ ಕೆಲಸ ಎಲ್ಲರಿಗೂ ಸ್ಪೂರ್ತಿಯಾಗಿದೆ. ಒಡಿಶಾದ (Odisha) ಬೆಹ್ರಾಂಪುರ ನಗರದ 42 ವರ್ಷದ ಆಟೋ ಚಾಲಕ ಗಗನ್ ಪಾತ್ರಾ ಅವರು (Viral News) ಗರ್ಭಿಣಿಯರು ಮತ್ತು ರೋಗಿಗಳಿಗೆ ಉಚಿತವಾಗಿ ಆಟೋ ಸೇವೆಯನ್ನು ನೀಡುತ್ತಿದ್ದು ಇವರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಆಟೋ ರಿಕ್ಷಾ ಚಾಲಕ ಗಗನ್ ಅವರು ಗರ್ಭಿಣಿಯರು ಮತ್ತು ಅಗತ್ಯವಿರುವ ರೋಗಿಗಳಿಗೆ ಉಚಿತವಾಗಿ ಆಟೋ ಸೇವೆ ನೀಡುತ್ತಿದ್ದಾರೆ. ತನ್ನ ವೈಯಕ್ತಿಕ ಜೀವನದ ಕಹಿ ಘಟನೆಯನ್ನು ಸಮಾಜ ಸೇವೆಯನ್ನಾಗಿ ಇವರು ಬದಲಾಯಿಸಿಕೊಂಡಿದ್ದಾರೆ. ಇಂದು ನೂರಾರು ಗರ್ಭಿಣಿ ಮಹಿಳೆಯರು ಹಾಗೂ ರೋಗಿಗಳಿಗೆ ತ್ವರಿತ ಗತಿಯಲ್ಲಿ ಸ್ಪಂದಿಸುತ್ತಿದ್ದಾರೆ.
ಗಗನ್ ಪಾತ್ರ ಅವರ ಚಿಕ್ಕ ಮಗನಿಗೆ ರಾತ್ರಿ ವೇಳೆ ಮೂರ್ಛೆ ಬಂದ ನಂತರ ಇಂತಹ ಸಾಹಸವನ್ನು ಪ್ರಾರಂಭಿಸಲು ಅವರಿಗೆ ಸ್ಫೂರ್ತಿ ಸಿಕ್ಕಿದೆ. ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಹೋಗಲು, ಗಗನ್ ಸಾರಿಗೆಯನ್ನು ಹುಡುಕಲು ಪ್ರಯತ್ನಿಸಿದರು ಆದರೆ ಅವರಿಗೆ ಯಾವುದೇ ಸಾರಿಗೆ ಸೌಲಭ್ಯ ಲಭ್ಯವಿರಲಿಲ್ಲ. ಕೊನೆಗೆ ಕಾದು ಕಾದು ಆಂಧ್ರಪ್ರದೇಶದ ಲಾರಿ ಚಾಲಕನೊಬ್ಬ ಸಹಾಯ ಮಾಡಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಆ ಚಾಲಕ ಹಣ ಪಡೆದು ಕೊಳ್ಳದೆ ಇರುವಾಗ ಇವರು ಇಂತಹ ಕೆಲಸಕ್ಕೆ ಪ್ರೇರಿಪಿತರಾದರು.
Viral News: ಅತ್ತೆಯನ್ನು ನೋಡಿಕೊಳ್ಳಲು ಕೆಲಸ ಬಿಡಲು ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡಿದ ಪತಿ!
ಸ್ವಲ್ಪ ಸಮಯದ ನಂತರ, ಗಗನ್ ಅವರು ಒಬ್ಬ ಗರ್ಭಿಣಿ ಮಹಿಳೆ ಮತ್ತು ಆಕೆಯ ವೃದ್ಧ ತಾಯಿ ಆಸ್ಪತ್ರೆಗೆ ನಡೆದುಕೊಂಡು ಹೋಗುವುದನ್ನು ನೋಡಿದ್ದಾರೆ. ಆಗ ಗಗನ್ ಅವರನ್ನು ತಮ್ಮ ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಉಚಿತವಾಗಿ ಕರೆದೊಯ್ಯಲು ಮುಂದಾದರು. ಅಂದಿನಿಂದಲೇ ತಮ್ಮ ಆಟೋದಲ್ಲಿ "ಬಡ ಗರ್ಭಿಣಿಯರಿಗೆ ಮತ್ತು ತುರ್ತು ರೋಗಿಗಳಿಗೆ ಉಚಿತ ಸೇವೆ" ಎಂಬ ಫಲಕ ಹಾಕಿಕೊಂಡರು.
ಈಗ, ಸುಮಾರು 30 ಆಟೋ-ರಿಕ್ಷಾ ಚಾಲಕರು ಈ ಜಾಲದ ಭಾಗವಾಗಿದ್ದಾರೆ. ಅವರ ಸಂಪರ್ಕ ಸಂಖ್ಯೆಗಳನ್ನು ಅವರ ವಾಹನಗಳ ಮೇಲೆ ಹಾಗೂ ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು ಮತ್ತು ಮಾರುಕಟ್ಟೆಗಳಂತಹ ಜನದಟ್ಟಣೆಯ ಸ್ಥಳಗಳಲ್ಲಿ ಪೋಸ್ಟ್ ಮಾಡಲಾಗಿದೆ. ಈವರೆಗೆ ಸುಮಾರು 6,000ಕ್ಕೂ ಹೆಚ್ಚು ಗರ್ಭಿಣಿಯರು ಮತ್ತು ಅಪಘಾತಕ್ಕೀಡಾದವರು ಈ ಸೇವೆಯ ಲಾಭ ಪಡೆದಿದ್ದಾರೆ. ಇವರ ಈ ಸೇವೆಯೂ ಇತರರಿಗೆ ಸ್ಪೂರ್ತಿಯಾಗಿದೆ.