ಹೈದರಾಬಾದ್: ಸೋಶಿಯಲ್ ಮಿಡಿಯಾದಲ್ಲಿ ಆಗಾಗ ಹೊಸ ಹೊಸ ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ. ರಸ್ತೆಯಲ್ಲಿ ಭೀಕರ ಅಪಘಾತ ಆಗುವುದು, ಸ್ಫೋಟಕ ವಸ್ತು ಅಕಸ್ಮಾತ್ ಸಿಡಿಯುವುದು ಹೀಗೆ ನಾನಾ ಬಗೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಲೇ ಇರುತ್ತದೆ. ಅಂತೆಯೇ ತೆಲಂಗಾಣದಲ್ಲಿ ಕೂಡ ಗ್ಯಾಸ್ ಸಿಲಿಂಡರ್ ಒಂದು ಸ್ಫೋಟಗೊಂಡ ವಿಡಿಯೊ ಸದ್ಯ ಸದ್ದು ಮಾಡುತ್ತಿದೆ. ಸಿಲಿಂಡರ್ ಸ್ಫೋಟವು ಭಯಾನಕವಾಗಿ ಆಗಿದ್ದರೂ ಕೂಡ ಅದೃಷ್ಟವಶಾತ್ ಮನೆಯ ಮಂದಿಯೆಲ್ಲ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತೆಲಂಗಾಣದ ಮೇಡಕ್ ಜಿಲ್ಲೆಯ ಕೌಡಿಪಲ್ಲಿ ಮಂಡಲದ ಮುತ್ರಜಪದ ಗ್ರಾಮದಲ್ಲಿರುವ ಮನೆಯೊಳಗೆ ಸ್ಫೋಟ ಆಗಿದೆ. ಆ ಸಮಯದಲ್ಲಿ ಮನೆಯ ಒಳಗೆ ಯಾರೂ ಇರಲಿಲ್ಲ, ಇದರಿಂದಾಗಿ ದೊಡ್ಡ ದುರಂತವೊಂದು ತಪ್ಪಿದೆ. ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ವೇಳೆ ವ್ಯಕ್ತಿಯೊಬ್ಬರು ಹೊರಗೆ ಇದ್ದ ಕಾರಣ ಮನೆಗೆ ಹಾನಿಯಾಗಿದ್ದರೂ ಏನೂ ಆಗಲಿಲ್ಲ.
ಭಾನುವಾರ ಬೆಳಗ್ಗೆ ಈ ಘಟನೆ ಸಂಭವಿಸಿದೆ. ಮನೆಯಲ್ಲಿ ಇರಿಸಲಾಗಿದ್ದ ಗ್ಯಾಸ್ ಸಿಲಿಂಡರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯ ಗೋಡೆಗಳು ಮತ್ತು ಛಾವಣಿಗೆ ಹಾನಿಯಾಗಿದೆ. ಅಲ್ಲದೆ, ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣವಾಗಿ ನಾಶವಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆಯ ಗೋಡೆಗಳು ಕುಸಿದು ಭಾಗಶಃ ಹಾನಿಯಾಗಿದ್ದ ದೃಶ್ಯಗಳು ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಸಂಚಲನ ಉಂಟು ಮಾಡಿದೆ.
ಇದನ್ನು ಓದಿ:Viral Video: ರೈಲಿನಲ್ಲಿ ಪತ್ನಿಗೆ ಕಾಲ್ಗೆಜ್ಜೆ ತೊಡಿಸಿದ ವೃದ್ಧ ಪತಿ; ಇವರನ್ನು ನೋಡಿ ಕಲಿಯಿರಿ ಎಂದ ನೆಟ್ಟಿಗರು
ವೈರಲ್ ಆದ ವಿಡಿಯೊದಲ್ಲಿ ಸ್ಫೋಟದ ತೀವ್ರತೆ ಮತ್ತು ಅದರಿಂದ ಉಂಟಾದ ಹಾನಿಯ ಪ್ರಮಾಣವನ್ನು ಸ್ಪಷ್ಟವಾಗಿ ಅರಿಯಬಹುದು. ಸ್ಫೋಟದ ತಕ್ಷಣವೇ ಜನರು ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳದಲ್ಲಿ ಎಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ, ಗೋಡೆಗಳು ಬಹುತೇಕ ಎಲ್ಲ ಕಡೆ ಆವರಿಸಿದ್ದು ಸಿಲಿಂಡರ್ ಸ್ಫೋಟದಿಂದ ಹಾನಿಗೊಳಗಾದ ಮನೆಯ ಮಾಲಕರು ನಷ್ಟ ಪರಿಹಾರ ಬರಿಸಲು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಕೂಡ ತಕ್ಷಣ ಕಾರ್ಯಾಚರಣೆಗೆ ಇಳಿದು ಪರಿಸ್ಥಿತಿ ನಿಯಂತ್ರಣಕ್ಕೆ ತರುವ ಪ್ರಯತ್ನ ನಡೆಸಿದ್ದಾರೆ. ಈ ಸ್ಫೋಟಕ್ಕೆ ನಿಖರ ಕಾರಣ ಏನು ಎಂಬುದು ಇದುವರೆಗೆ ತಿಳಿದುಬಂದಿಲ್ಲ. ಸ್ಫೋಟದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಮೇಡಕ್ ಜಿಲ್ಲೆಯ ಕೌಡಿಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.