ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಪರೂಪದಲ್ಲಿ ಅಪರೂಪದ ಘಟನೆ; ಮೊಸಳೆ ಬಾಯಿಗೆ ಸಿಕ್ಕ ಸಹಚರನನ್ನು ಕಾಪಾಡಲು ನದಿಗೆ ಹಾರಿದ ಮಂಗಗಳು: ರೋಮಾಂಚನಕಾರಿ ದೃಶ್ಯವನ್ನು ನೀವೂ ನೋಡಿ

Viral Video: ಮಂಗವೊಂದರ ಮೇಲೆ ಮೊಸಳೆ ದಾಳಿ ಮಾಡಿದಾಗ ಅದನ್ನು ಕಾಪಾಡಲು ಕಪಿಗಳ ಸಮೂಹವೇ ನದಿಗೆ ಧುಮುಕಿರುವ ದೃಶ್ಯವೊಂದು ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಒಡಿಶಾದ ಕೇಂದ್ರಪಾರ ಜಿಲ್ಲೆಯ ಮಹಕಾಲಪಾದದ ಬಳಿ ಈ ಅಪರೂಪದ ಘಟನೆ ನಡೆದಿದೆ.

ಎಐ ಚಿತ್ರ.

ಭುವನೇಶ್ವರ, ಡಿ. 28: ಅತ್ಯಂತ ಅಪರೂಪದ, ವಿಶಿಷ್ಟ ಘಟನೆಯೊಂದಕ್ಕೆ ಒಡಿಶಾ ಸಾಕ್ಷಿಯಾಗಿದೆ. ಮಾನವೀಯತೆ ಮರೆತು ತಮ್ಮ ತಮ್ಮಲ್ಲೇ ಕಚ್ಚಾಡುವ ಮಾನವರ ಕಣ್ತೆರೆಸುವಂತಹ ಅಮೋಘ ದೃಶ್ಯವಿದು, ಜಾತಿ ಹೆಸರಲ್ಲಿ ಒಬ್ಬರ ಮೇಲೊಬ್ಬರು ಕಿತ್ತಾಡುವವರು ನಾಚಿಕೆಯಿಂದ ತಲೆ ತಗ್ಗಿಸಬಹುದಾದ ಅಚ್ಚರಿಯ ಘಟನೆ ಇದು. ಮಂಗವೊಂದರ ಮೇಲೆ ಮೊಸಳೆ ದಾಳಿ ಮಾಡಿದಾಗ ಅದನ್ನು ಕಾಪಾಡಲು ಕಪಿಗಳ ಸಮೂಹವೇ ನದಿಗೆ ಧುಮುಕಿರುವ ದೃಶ್ಯ ಇದಾಗಿದ್ದು, ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral Video). ಸಹಚರನ ಕಷ್ಟಕ್ಕೆ ಸ್ಪಂದಿಸುವ ಮಂಗಗಳ ಗುಣಕ್ಕೆ ನೆಟ್ಟಿಗರು ಕರಗಿ ಹೋಗಿದ್ದಾರೆ.

ಒಡಿಶಾದ ಕೇಂದ್ರಪಾರ ಜಿಲ್ಲೆಯ ಮಹಕಾಲಪಾದದ ಬಳಿ ಈ ಅಪರೂಪದ ಘಟನೆ ನಡೆದಿದೆ. ವಿಡಿಯೊದಲ್ಲಿ ಒಂದಷ್ಟು ಮಂಗಗಳ ಗುಂಪು ಈಜುತ್ತ ಮೊಸಳೆಯ ಬಳಿಗೆ ತೆರಳುತ್ತಿರುವುದು ಕಂಡು ಬಂದಿದೆ.

ವೈರಲ್‌ ವಿಡಿಯೊ ಇಲ್ಲಿದೆ:



ವಿಡಿಯೊದಲ್ಲಿ ಏನಿದೆ?

ಮಹಾನದಿಯ ಉಪನದಿಯಾದ ಖರಿನಾಸಿ ಸೇರಿದಂತೆ ಈ ಪ್ರದೇಶದಲ್ಲಿರುವ ನದಿಗಳಲ್ಲಿ ಆಗಾಗ ದೈತ್ಯಾಕಾರದ ಮೊಸಳೆಗಳು ಕಂಡು ಬರುತ್ತವೆ. ಇವು ಸಾಕು, ವನ್ಯಜೀವಿಗಳು ಮತ್ತು ಕೆಲವೊಮ್ಮೆ ಮನುಷ್ಯರ ಮೇಲೆ ದಾಳಿ ಮಾಡುತ್ತವೆ. ಸದ್ಯ ವೈರಲ್‌ ಆಗಿರುವ ವಿಡಿಯೊದಲ್ಲಿ ಮೊಸಳೆಯ ದಾಳಿಗೆ ಒಳಗಾದ ತಮ್ಮ ಸಹಚರನನ್ನು ಕಾಪಾಡಲು ಮಂಗಗಳ ಗುಂಪು ನದಿಗೆ ಜಿಗಿದು ವೇಗವಾಗಿ ಈಜುತ್ತ ಸಾಗುವುದನ್ನು ಕಾಣಬಹುದು.

ಪ್ರತ್ಯಕ್ಷದರ್ಶಿಗಳ ಪ್ರಕಾರ ಮೊಸಳೆಯೊಂದು ಇದ್ದಕ್ಕಿದ್ದಂತೆ ದಾಳಿ ಮಾಡಿ ಮಂಗವೊಂದನ್ನು ಕಚ್ಚಿಕೊಂಡು ನದಿಯತ್ತ ತೆರಳಿದೆ. ಈ ವೇಳೆ ದಡದಲ್ಲಿದ್ದ ಮಂಗಗಳ ಗುಂಪು ಹಿಂದೆ ಮುಂದೆ ನೋಡದೆ ನದಿಗೆ ಧುಮುಕಿ ಮೊಸಳೆಯನ್ನು ಹಿಂಬಾಲಿಕೊಂಡು ಹೋಗಿ ತಮ್ಮ ಗೆಳೆಯನನ್ನು ರಕ್ಷಿಸಲು ಮುಂದಾಗಿವೆ. ಅದಾಗ್ಯೂ ದೈತ್ಯಾಕಾರದ ಮೊಸಳೆಯ ಮುಂದೆ ಮಂಗಗಳ ಪ್ರಯತ್ನ ನಡೆಯಲಿಲ್ಲ. ಕೊನೆಗೂ ಸತತ ಪ್ರಯತ್ನಗಳ ಹೊರತಾಗಿಯೂ ಮಂಗ ಆ ಮೊಸಳೆಗೆ ಆಹಾರವಾಗಿದೆ.

ಪ್ರಧಾನಿಗೆ ಸ್ವಾಗತ ಕೋರಲು ಅಳವಡಿಸಿದ್ದ ಹೂಕುಂಡಗಳನ್ನೇ ಕದ್ದೊಯ್ದ ಕಿಡಿಗೇಡಿಗಳು!

ನೆಟ್ಟಿಗರು ಭಾವುಕ

ಸದ್ಯ ಈ ವಿಡಿಯೊ ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ. ಬುದ್ದಿವಂತರೆನಿಸಿಕೊಂಡ ಮನುಷ್ಯರೇ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸದಿರುವಾಗ ಮಂಗಗಳ ಈ ವರ್ತನೆ ಹಲವ ಕಣ್ಣಂಚು ಒದ್ದೆಯಾಗಿಸಿದೆ. ಅದರಲ್ಲಿಯೂ ಮೊಸಳೆ ಎಂತಹ ಅಪಾಯಕಾರಿ ಪ್ರಾಣಿ ಎಂದು ತಿಳಿದಿದ್ದರೂ ನೀರಿಗೆ ಹಾರಿದ ಮಂಗಗಳ ನಡೆ ಸಾರ್ವತ್ರಿಕ ಮೆಚ್ಚುಗೆಗೆ ಪಾತ್ರವಾಗಿದೆ.

ʼʼಪ್ರಕೃತಿ ನಿಶ್ಯಬ್ದವಾಗಿ ಅನೇಕ ಪಾಠಗಳನ್ನು ಕಲಿಸುತ್ತದೆ. ತಮ್ಮವನಿಗೆ ಅಪಾಯವಾದಾಗ ಈ ಮಂಗಗಳು ಕಾಯುತ್ತಾ ಕೂರಲಿಲ್ಲ, ಚರ್ಚೆ ಮಾಡಲಿಲ್ಲ ಅಥವಾ ಬೇರೆ ಆಲೋಚನೆಯನ್ನೂ ಮಾಡಲಿಲ್ಲ. ಹಿಂದೆ ಮುಂದೆ ನೋಡದೆ ನೀರಿಗೆ ಧುಮುಕಿಯೇ ಬಿಟ್ಟವು. ಪ್ರಾಣಿಗಳೇ ತಮ್ಮವರು ಅಪಾಯದಲ್ಲಿದ್ದಾಗ ಇಂತಹ ಒಗ್ಗಟ್ಟು ಪ್ರದರ್ಶಿಸುವುದಾದರೆ ನಮಗೇಕೆ ಸಾಧ್ಯವಿಲ್ಲ?ʼʼ ಎಂದು ಒಬ್ಬರು ಪ್ರಶ್ನಿಸಿದ್ದಾರೆ.

ʼʼಮಾನವೀಯತೆಯನ್ನು ಮರೆತಾಗ ಪ್ರಕೃತಿಯ ಇಂತಹ ಘಟನೆ ನಮಗೆ ಬಹುದೊಡ್ಡ ಪಾಠವನ್ನು ಕಲಿಸುತ್ತದೆ. ನಿಷ್ಠೆ, ಧೈರ್ಯದಂತಹ ಸಂದೇಶ ಸಾರುತ್ತದೆʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼಮನುಷ್ಯರಿಗೆ ನಾಚಿಕೆಯಾಗಬೇಕು. ಯಾರಾದರೂ ಅಪಾಯದಲ್ಲಿದ್ದಾಗ ವಿಡಿಯೊ ಮಾಡುತ್ತ ಮಜ ನೋಡುವ ಇಂದಿನ ತಲೆಮಾರಿಗೆ ಇದು ದೊಡ್ಡ ಪಾಠವಾಗಬೇಕುʼʼ ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಈ ವಿಡಿಯೊ ಸಂಚಲನ ಮೂಡಿಸಿದ್ದಂತು ಹೌದು.